ಶಿಡ್ಲಘಟ್ಟ : ನಗರಸಭೆಯ ಸಭಾಂಗಣದಲ್ಲಿ 2024-25ನೇ ಸಾಲಿನ 2.9 ಕೋಟಿ ರೂಗಳ ಉಳಿತಾಯ ಬಜೆಟ್ ಅನ್ನು ಜಿಲ್ಲಾಧಿಕಾರಿಗಳು ಹಾಗೂ ನಗರಸಭೆಯ ಆಡಳಿತಾಧಿಕಾರಿಗಳಾದ ಡಾ. ರವೀಂದ್ರ ಪಿ.ಎನ್. ಅವರು ಮಂಡಿಸಿದರು. ನಂತರ ಮಾತನಾಡಿದ ಅವರು ಅಧಿಕಾರಿಗಳು ನಗರಸಭೆಯ ವ್ಯಾಪ್ತಿಯಲ್ಲೆ ವಾಸ್ತವ್ಯ ಇದ್ದುಕೊಂಡು ಬೇಸಿಗೆಯಲ್ಲಿ 24*7 ಕೆಲಸ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜನರಿಗೆ ಕುಡಿಯುವ ನೀರು ಕಲ್ಪಿಸಿಕೊಡಬೇಕು. ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡುವವರಿಗೆ 15 ದಿನಗಳಿಗೊಮ್ಮೆ ಬಿಲ್ ಪಾವತಿಸಲಾಗುವುದು. ಪೌರಕಾರ್ಮಿಕರು ನಗರದಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಾರೆ. ಚರಂಡಿ, ಕೊಳಚೆ ನೀರಿನಲ್ಲಿ ಯಂತ್ರಗಳಿಂದ ಕೆಲಸ ಮಾಡಿಸಬೇಕು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದು ನಗರಸಭೆಯ ಪೌರಾಯುಕ್ತ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ನಗರಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ ನೀರಿನ ಪೈಪ್ ರಿಪೇರಿ, ಯಾವುದೇ ಕೆಲಸ ಮಾಡಿಸಿದರೂ ಅದಕ್ಕೆ ವಾರ್ಡಿನ ಸದಸ್ಯರೇ ಕೈ ನಿಂದ ಹಣ ಕೊಡಬೇಕು ನಮ್ಮ ಕಷ್ಟ ಕೇಳೋರಿಲ್ಲ ನಗರಸಭೆಯ ಅಧಿಕಾರಿಗಳು ಸ್ಪಂಧಿಸುವುದಿಲ್ಲವೆಂದು ಸದಸ್ಯರಾದ ಎಸ್.ಎ ನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಿಳಿಸಿದರು. ನಗರಸಭೆಯಿಂದ ಮನೆ ಮನೆಗೂ ಮಳೆ ನೀರಿ ಕೊಯ್ಲು ಪದ್ದತಿ ಅಳವಡಿಸಿಕೊಳ್ಳಲು ವಿಶೇಷ ಕಾಳಜಿ ವಹಿಸಿ ಇದಕ್ಕೆ ಸುತ್ತೊಲೆ ಹೊಡಿಸಿ ಅನುಮೋದನೆ ನೀಡಬೇಕು ಎಂದು ಸದಸ್ಯ ಅನಿಲ್ ಕುಮಾರ್ ಮನವಿ ಮಾಡಿದರು. ಈ ಸ್ವತ್ತು ಖಾತೆ ಮಾಡಿಕೊಡಲು ನಗರಸಭೆಯಲ್ಲಿ ಸದಸ್ಯರಿಂದಲೇ ಒಂದು ಲಕ್ಷ ಕೇಳುತ್ತಾರೆ ಎಂದು ನಗರಸಭೆಯ ಸದಸ್ಯ ಮಂಜುನಾಥ್ ನೇರವಾಗಿ ಅಧಿಕಾರಿಗಳ ಮೇಲೆ ಆರೋಪಿಸಿದರು. ನಗರಸಭೆಯಲ್ಲಿ ಸಮಸ್ಯೆಗಳ ಸುರಿ ಮಳೆ ಸುರಿಸಿದರು.
ಶಾಸಕ ಬಿ.ಎನ್ ರವಿಕುಮಾರ್ ಅವರು ಮಾತನಾಡಿ ಚುನಾವಣೆ ಬಂದಾಗ ರಾಜಕೀಯ ಮಾಡಿ ಜನ ಅಧಿಕಾರ ಕೊಟ್ಟಿದ್ದಾರೆ ಅಧಿಕಾರಿಗಳು ಮತ್ತು ನಗರಸಭೆಯ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಿ ಜನರಿಗೆ ಕುಡಿಯುವ ನೀರು, ಬೀದಿ ದೀಪ ಮೂಲಭೂತ ಸೌಲಭ್ಯಗಳು ಕಲ್ಪಿಸಿದರೆ ಜನರ ಮುಂದೆ ಹೋದಾಗ ಗೌರ ಸಿಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಅತೀ ಹಿಂದುಳಿದ ನಗರಸಭೆ ಯಾವುದಾದರೂ ಇದ್ದರೆ ಅದು ಶಿಡ್ಲಘಟ್ಟ ನಗರಸಭೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ನಗರದಲ್ಲಿ ಓಡಾಡಿದ ಸಂದರ್ಭದಲ್ಲಿ ವಾರ್ಡ್ ನಂಬರ್ 25,26,28, ಕೆಲವು ಪ್ರದೇಶಗಳಲ್ಲಿ ವಾಸಿಸುತ್ತಿರವ ಜನರ ಪರಸ್ಥಿತಿ ಕಂಡು ತುಂಬಾ ನೋವಾಗಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತದಲ್ಲಿದ್ದರೂ ನಗರದಲ್ಲಿ ಪ್ರತಿ ಮನೆ ಮನೆಗೂ ಯುಜಿಡಿ ವ್ಯವಸ್ಥೆಗೆ ಅನುಧಾನ ನೀಡುವಂತೆ ಮನವಿ ಮಾಡಿದಾಗ ಸರ್ಕಾರ 30 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನಗರದಲ್ಲಿ ಸುಮಾರು 107 ಚಾಲ್ತಿ ಕೊಳವೆ ಬಾವಿಗಳಿದ್ದು, ಇದರಿಂದ ಪ್ರತಿ ಮನೆಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬಹುದು. ಆದರೆ ಈ ಕೆಲಸ ಆಗುತ್ತಿಲ್ಲ ಇದಕ್ಕೆ ಮೂಲ ಕಾರಣ ನಗರಸಭೆಯ ಅಧಿಕಾರಿಗಳು ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದೇ ಇರುವುದು. ನಗರೋತ್ತಾನ ಎಸ್.ಸಿ.ಪಿ ಮತ್ತು ಟಿಎಸ್ ಪಿ ಯೋಜನೆಯಡಿ 12 ಕೋಟಿ ಅನುಧಾನವಿದ್ದು, 4 ಕೋಟಿ 56 ಲಕ್ಷ ವೆಚ್ಚದಲ್ಲಿ ನಗರದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ರವೀಂದ್ರ ಪಿ.ಎನ್, ಶಾಸಕ ಬಿ.ಎನ್ ರವಿಕುಮಾರ್, ತಹಶೀಲ್ದಾರ್ ಬಿ.ಎನ್ ಸ್ವಾಮಿ, ನಗರಸಭೆ ಪೌರಾಯುಕ್ತ ಮಂಜುನಾಥ್, ಸೇರಿದಂತೆ ನಗರಸಭೆಯ ಸದಸ್ಯರು, ಕಛೇರಿಯ ಸಿಬ್ಬಂದಿ ಹಾಜರಿದ್ದರು