ಶಿಡ್ಲಘಟ್ಟ: ಯಾದಗಿರಿ ಪಿಎಸ್ ಐ ಪರಶುರಾಮ್ ಆತ್ಮಹತ್ಯೆಯನ್ನ ಖಂಡಿಸಿ ಜೈ ಭೀಮ್ ಛಲವಾಧಿ ಮಹಾಸಭಾ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಕುಂದಲಗುರ್ಕಿ ಆನಂದ್ ಕೆ ಸಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಛಲವಾಧಿ ಮುಖಂಡರು ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಿದರು.
ತಾಲ್ಲೂಕು ಆಡಳಿತ ಸೌಧ ಮುಂಭಾಗದಲ್ಲಿ ಛಲವಾಧಿ ಮುಖಂಡರು ಸರ್ಕಾರದ ವಿರುದ್ದ ಘೋಷಣೆಗಳು ಕೂಗಿ ಪಿಎಸ್ಐ ಪರಶುರಾಮ್ ಅವರ ಸಾವಿಗೆ ನ್ಯಾಯ ಸಿಗಬೇಕು ಶಾಸಕ ಮತ್ತು ಪುತ್ರನ ವಿರುದ್ದ ಸೂಕ್ತ ಕ್ರಮ ಆಗಬೇಕು ಎಂದು ಸರ್ಕಾರವನ್ನ ಒತ್ತಾಯಿಸಿ ಪ್ರತಿಭಟಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಛಲವಾಧಿ ಸಮುದಾಯದ ಯಾದಗಿರಿ ಪಿಎಸ್ ಐ ಪರಶುರಾಮ್ ಅವರು ಅತ್ಯಂತ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದು, ಸ್ಥಳೀಯ ಶಾಸಕ ಚನ್ನಾರೆಡ್ಡಿ ಮತ್ತು ಪುತ್ರ ವರ್ಗಾವಣೆ ವಿಚಾರವಾಗಿ ಹಣಕ್ಕಾಗಿ ಬೇಡಿಕೆ ಇಟ್ಟ ಕಿರುಕುಳದಿಂದ ದಕ್ಷ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.
ಛಲವಾಧಿ ಯುವ ಮುಖಂಡ ವೇಣು ಮಾತನಾಡಿ ಪಿಎಸ್ಐ ಪರಶುರಾಮ್ ಅವರು ಸೇವೆಯಲ್ಲಿರುವಾಗಲೇ ಶಾಸಕ ಚನ್ನಾರೆಡ್ಡಿ ಮತ್ತು ಪುತ್ರನ ಭ್ರಷ್ಟಾಚಾರ ಲಂಚದ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಜನರನ್ನು ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಯ ಪರಿಸ್ಥಿತಿ ಹೀಗಾದರೆ ಇನ್ನು ಜನ ಸಾಮಾನ್ಯರ ಪರಿಸ್ಥಿತಿಯೇನು ಎಂದು ಪ್ರಶ್ನಿಸಬೇಕಾಗುತ್ತದೆ. ಮೃತರ ಕುಟುಂಬಕ್ಕೆ ಸರ್ಕಾರ 2 ಕೋಟಿ ಪರಿಹಾರ ನೀಡಬೇಕು. ಜೊತೆಗೆ ಅವರ ಪತ್ನಿಗೆ ಉನ್ನತ ಸರ್ಕಾರಿ ಹುದ್ದೆಯನ್ನು ನೀಡಬೇಕು ಹಾಗೂ ಅವರ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೂಕ್ತ ರಕ್ಷಣೆ ನೀಡಿ ಶಾಸಕ ಮತ್ತು ಪುತ್ರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರ ಬೇಡಿಕೆಗಳು ಈಡೇರಿಸದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತಹ ಹೋರಾಟವನ್ನು ರೂಪಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಗ್ರೇಡ್ ತಹಶೀಲ್ದಾರ್ ಪೂರ್ಣಿಮಾ ಅವರಿಗೆ ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಪತ್ರವನ್ನು ಸ್ವೀಕರಿಸಿದ ಪೂರ್ಣಿಮಾ ಪ್ರತಿಕ್ರಿಯಿಸಿ ಸಾವಿನ ಘಟನೆ ಬೇಸರದ ಸಂಗತಿ ಸಂಘಟನೆಯಿಂದ ಸಲ್ಲಿಸಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೈ ಭೀಮ್ ಛಲವಾಧಿ ಮಹಾಸಭಾ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷ ಕೈವಾರ ನಾರಾಯಣಸ್ವಾಮಿ, ಜಂಟಿಕಾರ್ಯದರ್ಶಿ ವೆಂಕಟೇಶ್ ಎನ್, ರಾಜ್ಯ ಸಲಹಾ ಸಮಿತಿ ಸದಸ್ಯ ವೆಂಕಟೇಶಪ್ಪ, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ಶ್ರೀರಾಮ ಕೆ.ಎನ್, ಯುವ ಘಟಕ ರಾಜ್ಯಾಧ್ಯಕ್ಷ ಆನಂದ್ ಕೆ.ಸಿ, ಹುಣಸೇನಹಳ್ಳಿ ಶ್ರೀನಿವಾಸ್, ದೊಣ್ಣಹಳ್ಳಿ ವಿಶ್ವನಾಥ್, ತುಮ್ಮನಹಳ್ಳಿ ವೆಂಕಟೇಶಪ್ಪ, ತಿಪ್ಪೇನಹಳ್ಳಿ ದೇವರಾಜ್, ದೊಡ್ಡದಾಸೇನಹಳ್ಳಿ ಕೃಷ್ಣಪ್ಪ, ನಂದಕುಮಾರ್, ಗೊಲ್ಲಹಳ್ಳಿ ಬೈಯಣ್ಣ, ಕುಂದಲಗುರ್ಕಿ ಪ್ರಮೋದ್, ಇತರರು ಹಾಜರಿದ್ದರು.