ಮತದಾನ ಜಾಗೃತಿ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ರಾಜ್ಯ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ.
ಶಿಡ್ಲಘಟ್ಟ: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ನಡೆಲಿದ್ದು, ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ತಾ.ಪಂ. ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು ಅವರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಜೊತೆಗೂಡಿಸಿಕೊಂಡು ನಿರಂತರವಾಗಿ ಚುನಾವಣೆ ಮತ್ತು ಮತದಾನದ ಕುರಿತು ವ್ಯಾಪಕವಾಗಿ ನಾಗರೀಕರಿಗೆ, ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲೂ ಚುನಾವಣಾ ಜಾಗೃತಿ ಮೂಡಿಸಿದ್ದು, ಇಂದು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ನೆಹರೂ ಕ್ರೀಡಾಂಣದಲ್ಲಿ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಅರಿವು ಮೂಡಿಸುವ ಪ್ರಚಾರದ ವಾಹನಗಳಿಗೆ ಹಸಿರು ಭಾವುಟ ತೋರಿಸುವ ಮೂಲಕ ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ಚಾಲನೆ ನೀಡಿದರು.
ಈ ವೇಳೆಯಲ್ಲಿ ಪಿ.ಎಸ್. ವಸ್ತ್ರದ್ ಮಾತನಾಡಿ ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರು ತಪ್ಪದೇ ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ಚುನಾವಣೆ, ಮತದಾನದ ಮಹತ್ವದ ಕುರಿತು ಮೂಡಿಸುವಂತಹ ಕಾರ್ಯಕ್ರಮಗಳು ಈಗಾಗಲೇ ಮಾಡಲಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ನಾವೆಲ್ಲರೂ ಹೆಚ್ಚಿನ ರೀತಿಯಾಗಿ ಶ್ರಮವಹಿಸಿ ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಅರಿವು ಮೂಡಿಸುವಲ್ಲಿ ತುಂಬಾ ಶ್ರಮವಹಿಸುವ ಮೂಲಕ ಕೆಲಸ ಮಾಡಬೇಕು. ಮತದಾನದ ಮಾಡುವುದು ಸಂವಿಧಾನ ನಮಗೆ ನೀಡಿರುವ ಹಕ್ಕು ಅದನ್ನು ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಬ್ದಾರಿಯಾಗಿದೆ. ಮತದಾನದ ಪ್ರಮಾಣ ಈ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ ಟಿ ನಿಟ್ಟಾಲಿ ಅವರು ಮಾತನಾಡಿ, ರಾಜ್ಯದಲ್ಲಿ ಹಾಗೂ ಜಿಲ್ಲೆಯಾದ್ಯಂತ ಹೆಚ್ಚು ಮತದಾನ ಮಾಡಿಸುವ ಉದ್ದೇಶದಿಂದ ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸುವ ಮತದಾನದ ಹಕ್ಕನ್ನು ನಿಮ್ಮದಾಗಿದ್ದು, ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆಯವರೆಗೆ ತಾಲ್ಲೂಕಿನಾದ್ಯಂತ ಪ್ರತಿ ದಿನವೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ವಿಭಿನ್ನ ರೀತಿಯಾಗಿ ಕಾರ್ಯಕ್ರಮಗಳು ರೂಪಿಸಿ ಜಾಗೃತಿ ಮತ್ತು ಮತದಾನ ಮಾಡುವಂತೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದರು ವಿವಿಧ ರೀತಿಯ ರಂಗೋಲಿಯಲ್ಲಿ ಆಕರ್ಷಕವಾಗಿ ಚುನಾವಣೆ, ಇವಿ.ಎಂ,, ಶಾಹಿ, ಗುರುತುಗಳು ಬಿಡಿಸಲಾಗಿತ್ತು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು ಮಾತನಾಡಿ ಪ್ರಜಾಪ್ರಭುತ್ವ ದೇಶದಲ್ಲಿ ಅಭಿವೃದ್ದಿ, ಉತ್ತಮ ಆಡಳಿತ, ಬದಲಾವಣೆಗೆ ಅವಕಾಶ ಇರುವುದು ಕೇವಲ ಮತದಾನದಿಂದ ಮಾತ್ರ ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ತಪ್ಪದೇ ಮತದಾನದ ಹಕ್ಕು ಚಾಲಾಯಿಸುವುದರಿಂದ ಉತ್ತಮ ಜನ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಆ ಮೂಲಕ ದೇಶದ ಅಭಿವೃದ್ದಿಗೆ ಚಿಂತನೆ ಮಾಡಿ ಮತದಾರರು ಆಯ್ಕೆ ಮಾಡುವ ಜನ ಪ್ರತಿನಿಧಿಗಳು ಸೇರಿ ಸರ್ಕಾರವನ್ನು ರಚಿಸಿ ಹೊಸ ಯೋಜನೆಗಳು, ಹೊಸ ಕಾನೂನು, ಕಾಯ್ದೆಗಳು ರೂಪಿಸಿ ದೇಶವನ್ನು ಅಭಿವೃದ್ದಿ ಮಾಡುವಲ್ಲಿ ಸೇವೆ ಸಲ್ಲಿಸುತ್ತಾರೆ. ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ಅತ್ಯಧ್ಬುತವಾದ ಸಂವಿಧಾನವನ್ನ ಕೊಡುಗೆಯಾಗಿ ನೀಡಿದ್ದಾರೆ. ಆದರೆ ಸಂವಿಧಾನ ಪರಿಪೂರ್ಣವಾಗಿ ಜಾರಿ ಮಾಡಲು ಯಾವುದೇ ಸರಕಾರಗಳು ಮುಂದಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜ ಬದಲಾವಣೆಯಾಗಬೇಕು ಎಂದರೆ ನಾವೆಲ್ಲರೂ ನಮ್ಮ ಅಮೂಲ್ಯವಾದ ಮತವನ್ನು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಸೇವೆ ನೀಡುವಂತಹ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದರು. ಇನ್ನೂ ಇದೇ ಸಂದರ್ಭದಲ್ಲಿ ಮತದಾನದ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ರಘುನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್. ಮೋಹನ್, ತಾಲ್ಲೂಕಿನ 28 ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ