ಚಿಕ್ಕಬಳ್ಳಾಪುರ : ಒನಕೆ ಓಬವ್ವರ ಹೆಸರು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದ ಸಾಹಸ ಚರಿತ್ರೆ, ಅವರನ್ನು ಕರ್ನಾಟಕದ ವೀರ ವನಿತೆಯರಾದ ಕಿತ್ತೂರಿನ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಸಾಧನೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸರ್ಕಾರ ಓಬವ್ವನ ಜಯಂತಿಯನ್ನು ಆಚರಿಸುತ್ತಿದೆ ಎಂದು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರದಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ನಗರದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೀರವನಿತೆ ಒನಕೆ ಓಬವ್ವ ಅವರ ಶೌರ್ಯ, ಸಾಹಸ ಮತ್ತು ಸ್ಪೂರ್ತಿಯಾಗಿ ಸಮಾಜದ ಎಲ್ಲರಿಗೂ ಆದರ್ಶವಾಗಬೇಕು. ವೀರವನಿತೆ ಎಂಬ ಹೆಸರಿನಲ್ಲಿ ಸ್ಪೂರ್ತಿ ಮತ್ತು ಧೈರ್ಯ ಅಡಕವಾಗಿದೆ. ಸ್ವತಂತ್ರಕ್ಕಾಗಿ ಹೋರಾಟ ಮಾಡಿದಂತಹ ನಾಡಿನ ಕಣ್ಮಣಿಗಳಲ್ಲಿ ವೀರವನಿತೆ ಒನಕೆ ಓಬವ್ವ ಅವರಲ್ಲಿ ಒಬ್ಬರಾಗಿದ್ದಾರೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯವನ್ನು ತಡೆಯಲು ಪೊಲೀಸ್ ಇಲಾಖೆಯಲ್ಲಿ ವಿಶೇಷವಾಗಿ ಓಬವ್ವ ಪಡೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಉಪನ್ಯಾಸಕ ಅರಿಕೆರೆ ಎಂ ಮುನಿರಾಜು ಅವರು ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ರಾಜನಿಷ್ಟೆ, ನಾಡಪ್ರೇಮ, ಸಮಯಪ್ರಜ್ಞೆ,ಅಪರಿಮಿತ ದೈರ್ಯ,ಸಾಹಸ, ತ್ಯಾಗದ ಪ್ರತೀಕವಾಗಿ ಚರಿತ್ರೆಯಲ್ಲಿ ಓಬವ್ವ ಕಾಣಿಸಿಕೊಂಡಿದ್ದಾಳೆ. ಈಕೆಯ ಕಾಲ 1754 ರಿಂದ 1779 ಆಗಿದ್ದು ಹೈದರಾಲಿ ಕೋಟೆಯನ್ನು ವಶಮಾಡಿಕೊಳ್ಳಲು ಪದೇ ಪದೇ ದಾಳಿ ಮಾಡಲು ತೊಡಗುವ ಸಂದರ್ಭದಲ್ಲಿ ಆ ಸೈನ್ಯಕ್ಕೆ ತಕ್ಕ ಪಾಠಕಲಿಸುವ ಮೂಲಕ ಚರಿತ್ರೆಯಲ್ಲಿ ಆಳಿಗೂ ಸ್ಥಾನವಿದೆ ಎಂದು ತೋರಿಸಿಕೊಟ್ಟ ಧೀಮಂತ ವ್ಯಕ್ತಿತ್ವ ಓಬವ್ವನದಾಗಿದೆ ಎಂದರು.
5ನೇ ಮದಕರಿನಾಯಕನ ಆಡಳಿತದಲ್ಲಿ ಕೋಟೆಕಾವಲು ಕಾಯಕದ ಮುದ್ದಹನುಮಪ್ಪನ ಮಡದಿಯಾದ ಈ ವೀರವನಿತೆ ಓಬವ್ವ. ದುರ್ಗದ ಕೋಟೆಯಲ್ಲಿದ್ದ 35ಕ್ಕೂ ಹೆಚ್ಚು ಗುಪ್ತದ್ವಾರಗಳಿದ್ದು ಇವುಗಳನ್ನು ಕಾಯಲು ಕಹಳೆಯ ಕಾಯಕದ ಮೂಲಕ ಸೇವೆಸಲ್ಲಿಸುತ್ತಿದ್ದ ವಂಶದ ಸೊಸೆಯಾಗಿದ್ದಾಳೆ.ಇಂತಹ ಮಹತ್ವದ ಕಾಯಕದಲ್ಲಿದ್ದ ಓಬವ್ವನ ಕುಟುಂಬದ ಮೇಲೆ ವೀರಮದಕರಿಗೆ ಅಪಾರ ವಿಶ್ವಾಸ ಇತ್ತು. ಇದನ್ನು ಸಾಬೀತು ಪಡಿಸಿದ್ದೇ ಕಳ್ಳಗಿಂಡಿಯ ಪ್ರಸಂಗವಾಗಿದೆ ಎಂದರು.
ಓಬವ್ವನನ್ನು ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕನಿಗೆ ಹೋಲಿಸುವುದು ಸರಿಯಲ್ಲ.ಇವರು ಹೋರಾಟ ಮಾಡಿದ್ದು ರಾಜ್ಯ ಕೋಶಕ್ಕಾಗಿ ಪಟ್ಟ ಪದವಿ ಉಳಿಸಿಕೊಳ್ಳುವ ಕಾರಣಕ್ಕಾಗಿ. ಆದರೆ ಒನಕೆ ಓಬವ್ವ ಹೋರಾಡಿದ್ದು ತನ್ನ ಕಾಯಕಕ್ಕೆ ಕಳಂಕಬರಬಾರದು ಎಂದು ತನ್ನ ದಣಿಗೆ ಸೋಲಾಗಬಾರದು, ಕೋಟೆ ಹೈದರಾಲಿ ವಶವಾಗವಾರದು ಎಂಬ ನಿಸ್ವಾರ್ಥವಾದ ನಾಡ ಪ್ರೇಮಕ್ಕಾಗಿ, ಹೀಗಾಗಿ ಇವರೆಲ್ಲರಿಗಿಂತ ಪ್ರಾಮಾಣಿಕತೆ ನಿಷ್ಟೆ ನಿಯತ್ತಿನಲ್ಲಿ ಓಬವ್ವನದು ತುಂಬಾ ಮೇಲ್‌ಸ್ತರದಲ್ಲಿ ನಿಲ್ಲುವ ವ್ಯಕ್ತಿತ್ವವಾಗಿದೆ ಎಂದು ಬಣ್ಣಿಸಿದರು.
ಆಪತ್ತಿನ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಓಬವ್ವ ಉತ್ತಮ ನಿದರ್ಶನವಾಗಿದ್ದಾಳೆ. ಸಾಮಾನ್ಯ ಗೃಹಿಣಿಯಾದರೂ ಯೋಧರಂತೆ ಮೆರೆದ ಶೌರ್ಯ, ತೋರಿದ ಸಾಹಸ ರಾಜರನ್ನೂ ನಿಬ್ಬೆರಗಾಗಿಸುವಂತಹುದು. ಇದೇ ಕಾರಣಕ್ಕೆ ರಾಜರು ಈಕೆಯ ಹೆಣವನ್ನು ದುರ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಈಕೆಯ ಸಾಹಸವನ್ನು ಕೊಂಡಾಡುತ್ತಾ ಕೋಟೆಯ ತಣ್ಣಿರು ಚಿಲುಮೆಯ ಪೂರ್ವದಿಕ್ಕಿನಲ್ಲಿ ಈಕೆಯನ್ನು ಸಮಾಧಿ ಮಾಡುತ್ತಾರೆ ಎಂದು ತಿಳಿಸಿದರು.
ಹೀಗೆ ದಲಿತ ಸಮುದಾಯದ ಅದರಲ್ಲೂ ಛಲವಾದಿ ಸಮುದಾಯದ ಹೆಣ್ಣು ಮಕ್ಕಳು ಓಬವ್ವನಂತೆ ವೀರ ನಾಯಕಿಯರಾಗಿ ಬಾಳುತ್ತಾ,ಸಮಾಜ ಒಪ್ಪುವ ರೀತಿಯಲ್ಲಿ ಮಾದರಿಯಾದ ಬದುಕನ್ನು ಬದುಕಿ,ಬಾಬಾ ಸಾಹೇಬರು ಹಾಕಿಕೊಟ್ಟ ವೈಚಾರಿಕ, ವೈಜ್ಞಾನಿಕ ಬೆಳಕಲ್ಲಿ ಸಾಗಬೇಕು. ಸಮುದಾಯ ಪ್ರಜ್ಞೆಯಿಂದ ಮಾತ್ರ ಏನಾದರೂ ಬದಲಾವಣೆ ತರಲು ಸಾಧ್ಯ ಎಂಬುದನ್ನು ಮನಗಾಣಬೇಕಿದೆ ಎಂದು ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಒನಕೆ ಓಬವ್ವನ ಹೂವಿನ ಪಲ್ಲಕ್ಕಿ ಮತ್ತು ಸ್ತಬ್ದ ಚಿತ್ರಗಳ ಜಾನಪದ ಕಲಾ ತಂಡಗಳೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭಗೊಂಡು ಎಂ. ಜಿ ರಸ್ತೆಯ ಮೂಲಕ ಸಂಭ್ರಮದಿಂದ ಸಾಗಿ, ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಬಳಿ ಮುಕ್ತಾಯವಾಯಿತು.ಈ ವೇಳೆಯಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಹಾಗೂ ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ಜನಾಂಗದ ಅಧಿಕಾರಿಗಳಿಗೆ ಮತ್ತು ಸಮುದಾಯದ ಪ್ರಮುಖ ಮುಖಂಡರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ0ಚಾಯತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್, ನಗರ ಸಭೆ ಅಧ್ಯಕ್ಷ ಎ. ಗಜೇಂದ್ರ, ನಗರ ಸಭೆ ಉಪಾಧ್ಯಕ್ಷ ನಾಗರಾಜು, ಉಪವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ತಹಶೀಲ್ದಾರ್ ಅನಿಲ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, , ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಷಾದ್ರಿ, ಸಮುದಾಯದ ಮುಖಂಡರಾದ ಮಮತ ಮೂರ್ತಿ, ಛಲವಾದಿ ಜನಾಂಗದ ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.