ಶಿಡ್ಲಘಟ್ಟ: ತೋಟಗಾರಿಕೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಚಿಂತಾಮಣಿ ತಾಲ್ಲೂಕು ತೋಟಗಾರಿಕೆ ಇಲಾಖೆಗೆ ವರ್ಗಾವಣೆಯಾಗಿರುವ ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸುವ ಮೂಲಕ ಬಿಳ್ಕೊಡುಗೆ ನೀಡಲಾಯಿತು.
ನಗರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯಲ್ಲಿ ರೈತರು, ಮತ್ತು ಕಛೇರಿ ಸಿಬ್ಬಂಧಿ ಲಕ್ಷ್ಮೀನಾರಾಯಣ ಅವರು ವರ್ಗಾವಣೆ ಹಿನ್ನೆಲೆ ತಲೆಗೆ ಮೈಸೂರು ಪೇಟ ತೊಟ್ಟು, ಶಾಲು ಹೊದಿಸಿ, ಹಾರ ಹಾಕಿ ಹಣ್ಣು ಬುಟ್ಟಿ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಡುಗೆ ನೀಡಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳ ಅವರು ಮಾತನಾಡಿ ಲಕ್ಷ್ಮೀನಾರಾಯಣ ಅವರು ರೈತರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ವರ್ಗಾವಣೆ ಯಾಗಿರುವ ವಿಚಾರ ತಿಳಿದು ಸ್ವತಃ ರೈತರೆ ಕಛೇರಿಗೆ ಬಂದು ಸನ್ಮಾನಿಸಿದ್ದಾರೆ. ಅಧಿಕಾರಿ ಸಾರ್ವಜನರೊಂದಿಗೆ ಉತ್ತಮ ಒಡನಾಟದೊಂದಿಗೆ ರೈತರ ಕೆಲಸ ಕಾರ್ಯಗಳಿಗೆ ಸ್ಪಂಧಿಸಿ ಕೆಲಸ ಮಾಡಿದಾಗ ನಮ್ಮ ಸೇವೆಗೆ ತೃಪ್ತಿ ಸಿಗುತ್ತದೆ. ಆ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ವಿಶ್ವಾಸ ಗಳಿಸಿದ್ದಾರೆ. ಎಂದರು.
ಸಹಾಯಕ ತೋಟಗಾರಿಕೆ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ನಾನು ಸರ್ಕಾರಿ ಹುದ್ದೆಗೆ ಬರುವುದಕ್ಕಿಂತ ಮುಂಚೆ ವಕೀಲ ವೃತ್ತಿಯನ್ನು ನಿರ್ವಹಿಸುತ್ತಿದ್ದೆ, ಬೆಂಗಳೂರು ಬಿಬಿಎಂಪಿ, ಸೇರಿದಂತೆ ಹಲವು ಕಡೆ ಪ್ಯಾನಲ್ ವಕೀಲರಾಗಿ ಕೆಲಸ ಮಾಡುತ್ತಿದ್ದೆ, ನಮ್ಮ ತಾಯಿ ಅವರಿಗೆ ನಾನು ಸರ್ಕಾರಿ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು. ವಕೀಲ ವೃತ್ತಿಯ ಬದಲಿಗೆ ಸರ್ಕಾರಿ ಹುದ್ದೆಗೆ ಸೇರಬೇಕೆಂದು ಹಲವು ಬಾರಿ ಹೇಳುತ್ತಿದ್ದರು. ವಕೀಲ ವೃತ್ತಿಯಲ್ಲಿ ಹಣ ಗಳಿಸುತ್ತಿದ್ದರೂ ಸಹಾ ನಮ್ಮ ತಾಯಿಯವರಿಗೆ ಸಮಾಧಾನ ಇರುತ್ತಿರಲಿಲ್ಲ. ನಮ್ಮ ತಾಯಿಯ ಆಸೆಯಂತೆ ನಾನು ಸರ್ಕಾರಿ ಹುದ್ದೆಗೆ ಬರಬೇಕೆಂದು ಶ್ರಮವಹಿಸಿ ಪರೀಕ್ಷೆ ಬರೆದು ಸರ್ಕಾರಿ ಕೆಲಸಕ್ಕೆ ಬಂದಿದ್ದೇನೆ. ತೋಟಗಾರಿಕೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ನನ್ನ ಸೇವಾ ಅವಧಿಯಲ್ಲಿ ಸಾಕಷ್ಟು ರೈತರಿಗೆ ಅನುಕೂಲ ಮಾಡಿಕೊಟ್ಟಿರುವ ತೃಪ್ತಿಯಿದೆ. ಜೀವನದಲ್ಲಿ ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ. ಆ ನಿಟ್ಟಿನಲ್ಲಿ ನಾನು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿಂದ ವರ್ಗಾವಣೆಯಾಗಿ ಬೇರೆ ತಾಲ್ಲೂಕಿಗೆ ಹೋಗುತ್ತಿದ್ದು, ಅಲ್ಲಿಯೂ ಸಹ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ನುಡಿದರು. ತಂದೆ-ತಾಯಿಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಿಯಾಂಕ, ನವೀನ್ ಕುಮಾರ್, ಕಛೇರಿ ಸಿಬ್ಬಂದಿ ರತ್ನಮ್ಮ , ರವಿ, ವೆಂಕಟೇಶ್, ಮಾನಸ ಸೇರಿದಂತೆ ರೈತರು, ಸಾರ್ವಜನಿಕರು, ಹಾಜರಿದ್ದರು.