ಜಾತಿ ಆಧಾರಿತ ಮೇಲೆ ಚುನಾವಣೆ ನಡೆದರೂ ಮೋದಿ ಸಮಕ್ಕೆ ಬರಲು ಸಾಧ್ಯವಿಲ್ಲ. ಆಶ್ಚರ್ಯಕರ ಫಲಿತಾಂಶ ದೇಶಕ್ಕೆ ಸುರಕ್ಷೆಯಲ್ಲ.
ಶಿಡ್ಲಘಟ್ಟ : ಎನ್.ಡಿ.ಎ ಮೈತ್ರಿ ಕೂಟಕ್ಕೆ 293 ಸ್ಥಾನಗಳು ಬಂದಿದ್ದು, ಇಂಡಿಯಾ ಮೈತ್ರಿ ಕೂಟ ಜಾತಿ ಆಧಾರಿತವಾಗಿ ಚುನಾವಣೆ ನಡೆಸಿ ಮೋದಿಯವರ ಸಮಾನಕ್ಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಕೋಲಾರ- ಚಿಕ್ಕಬಳ್ಳಾಪುರ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೇಸ್ ಸರ್ಕಾರದ ಗ್ಯಾರಂಟಿಗಳಿಗೆ ಜನ ಮಣೆಹಾಕಿಲ್ಲ. ಮತ್ತೊಮ್ಮೆ ದೇಶದ ಪ್ರಧಾನಿ ಮೋದಿ ಎಂಬ ಮುನ್ಸೂಚನೆ ಸಿಕ್ಕಿದೆ.ಬಿಜೆಪಿ – ಜೆಡಿಎಸ್ ನಡುವೆ ಯಾವುದೇ ಭಿನ್ನಮತವಿಲ್ಲವೆಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರ ಗೌಡ ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು 6,91,481 ಮತಗಳು ಪಡೆದು 71,388 ಮತಗಳ ಅಂತರದಿಂದ ಕಾಂಗ್ರೇಸ್ ಅಭ್ಯರ್ಥಿ ಕೆ.ವಿ ಗೌತಮ್ ವಿರುದ್ದ ಗೆಲವು ಸಾಧಿಸಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ನಗರದ ಬಿಜೆಪಿ ಸೇವಾ ಸೌಧ ಕಛೇರಿಯ ಬಳಿ ಜಮಾಯಿಸಿ ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಬಿಜೆಪಿ ಸೇವಾಸೌಧದಲ್ಲಿ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರ ಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಿಭಾಜಿತ ಎರಡೂ ಜಿಲ್ಲೆಗಳಿಂದ ಮೈತ್ರಿ ಅಭ್ಯರ್ಥಿಗಳಾದ ಡಾ. ಕೆ ಸುಧಾಕರ್ ಹಾಗೂ ಎಂ. ಮಲ್ಲೇಶ್ ಬಾಬು ಅವರು ಅತ್ಯಧಿಕ ಮತಗಳಿಂದ ಜಯಶೀಲರಾಗಿ ಗೆಲುವು ಸಾಧಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ ಮಲ್ಲೇಶ್ ಬಾಬು ಅವರು ಸುಮಾರು 70 ಸಾವಿರ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಿದ್ದು, ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಡಾ. ಕೆ ಸುಧಾಕರ್ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ. ಎಲ್ಲರೂ ಒಂದಾಗಿ ಜಾತಿ ಆಧಾರಿತವಾಗಿ ಮೋದಿ ವಿರುದ್ದ ಗದಾ ಪ್ರಹಾರ ಮಾಡಿದ್ದರೂ ಸಹಾ ಅವರ ಸಮಾನಕ್ಕೆ ಬರುವುದಕ್ಕೆ ಸಾದ್ಯವಾಗಲಿಲ್ಲ.ಈ ಫಲಿತಾಂಶ ಆಶ್ವರ್ಯಕರವಾಗಿದೆ. ಮುಂದಿನ ದಿನಗಳಲ್ಲಿ ಈ ಫಲಿತಾಂಶ ದೇಶಕ್ಕೆ ಸುರಕ್ಷವಲ್ಲ ಎಂದು ಹೇಳಿದರು.
ಬಿಜೆಪಿ – ಜೆಡಿಎಸ್ ಒಳಗೆ ಭಿನ್ನಮತವಿಲ್ಲ: ಕ್ಷೇತ್ರದಲ್ಲಿ ಎರಡೂ ಪಕ್ಷದ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದು, ಬಿಜೆಪಿ – ಜೆಡಿಎಸ್ ಎರಡೂ ಪಕ್ಷದಲ್ಲಿ ಯಾವುದೇ ಆತಂರಿಕ ಭಿನ್ನಮತವಿಲ್ಲ ನಾವು ಒಗ್ಗಟ್ಟಾಗಿ ಇದ್ದೇವೆ. ಕ್ಷೇತ್ರದ ಶಾಸಕರು ಫಲಿತಾಂಶಕ್ಕೆ ಕೋಲಾರಕ್ಕೆ ಹೋಗಿದ್ದು, ಪಕ್ಷದ ಕಾರ್ಯಕರ್ತರು ಮುಖಂಡರು ಕಛೇರಿಯಲ್ಲಿ ಒಂದು ಕಡೆ ಇರುವುದರಿಂದ ಆಕಸ್ಮಿಕವಾಗಿ ಪತ್ರಿಕಾ ಗೋಷ್ಟಿ ನಡೆಸಿ ಹೇಳಿಕೆ ನೀಡಿದ್ದೇವೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ, ಮುಖಂಡರಾದ ಕಂಬದಹಳ್ಳಿ ಸುರೇಂದ್ರ ಗೌಡ, ನಗರ ಮಂಡಲ ಅಧ್ಯಕ್ಷ ನರೇಶ್ ಕುಮಾರ್ ಕೆ, ತ್ರಿವೇಣಿ, ನಾಗೇಶ್, ದೇವರಾಜ್,ಭರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ