ಶಿಡ್ಲಘಟ್ಟ: ಕರ್ನಾಟಕ ಸಂಭ್ರಮ -50 ಹೆಸರಾಯಿತು ಕರ್ನಾಟಕ, ಉಸಿರಾಗಲೀ ಕನ್ನಡ ಎಂಬ ಘೋಷ ವಾಕ್ಯದೊಂದಿಗೆ ತಾಲ್ಲೂಕಿಗೆ ಸೋಮವಾರದಂದು ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್, ತಹಶೀಲ್ದಾರ್ ಬಿ.ಎನ್. ಸ್ವಾಮಿ ಅವರ ನೇತೃತ್ವದಲ್ಲಿ ಕನ್ನಡ ಪರ, ರೈತ ಪರ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕನ್ನಡ ಪ್ರೇಮಿಗಳು ಅದ್ದೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.
ತಾಲ್ಲೂಕಿನ ಎಲ್ ಮುತ್ತಕದಹಳ್ಳಿ ಗೇಟ್ ಬಳಿ ರಥಯಾತ್ರೆಗೆ ವಿಜೃಂಭಣೆಯಿಂದ ಪೂರ್ಣ ಕುಂಭ, ಕಲಾ ತಂಡಗಳು, ಬ್ಯಾಂಡ್ ಸೆಟ್, ತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಆಡಳಿತ ಸೌಧ ಮಾರ್ಗವಾಗಿ ನ್ಯಾಯಾಲಯದ ಸಂಕೀರ್ಣದವರೆಗೆ ರಥ ಸಂಚಲನ ನಡೆಯಿತು. ರಥ ಸಂಭ್ರಮದಲ್ಲಿ ಶಾಲಾ ಮಕ್ಕಳು ಕನ್ನಡದ ಬಾವುಟಗಳು ಹಿಡಿದು ರಥದ ಜೊತೆಯಲ್ಲಿ ಸಾಗಿದರು. ಕೋಟೆ ವೃತ್ತದ ಬಳಿ ಶಾಸಕ ಬಿ.ಎನ್ ರವಿಕುಮಾರ್ ಅವರು ರಥಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಕರ್ನಾಟಕ ಸಂಭ್ರಮ 50, ನಾಡಿಗಾಗಿ ಹಲವು ಮಹನೀಯರು ಪ್ರಾಣವನ್ನು ಕೊಟ್ಟು ರಕ್ತವನ್ನು ಚೆಲ್ಲಿದ್ದಾರೆ. ಅವರ ಪರಿಶ್ರಮದಿಂದ ಇಂದು ನಾಡಿನ 7 ಕೋಟಿ ಜನರು ನೆಮ್ಮದಿಯಾಗಿ ಬದುಕುವ ವಾತವರಣವಿದೆ. ಕನ್ನಡ ಮೇರು ನಟ ಡಾ. ರಾಜಕುಮಾರ್ ಅವರು ಒಂದು ಮಾತು ಹೇಳಿದ್ದಾರೆ “ಹುಟ್ಟಿದರೆ ಕನ್ನಡ ನಾಡಲ್ಲೆ ಹುಟ್ಟಬೇಕು. ಮೆಟ್ಟಿದರೆ ಕನ್ನಡ ನಾಡಲೇ ಮೆಟ್ಟಬೇಕು” ಕನ್ನಡ ನಾಡಿನಲ್ಲಿ ಹುಟ್ಟಬೇಕಾದರೆ ನಾವೆಲ್ಲರೂ ಪುಣ್ಯ ಮಾಡಿದ್ದೇವೆ. ಜಗತ್ತಿನ ಹಲವು ದೇಶ, ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಬಂದು ಜೀವನ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ನಮ್ಮ ಕರ್ನಾಟಕ ಜನತೆಯ ಹೃದಯ ಮಾತೃ ಸ್ವಭಾವವಾದದ್ದು, ಸರ್ಕಾರ ಕರ್ನಾಟಕದ ಇತಿಹಾಸವನ್ನು ಇಂದಿನ ಯುವ ಜನತೆ, ಮಕ್ಕಳಿಗೆ, ಸಾರ್ವಜನಿಕರಿಗೆ ತಿಳಿಸಬೇಕೆಂದು ಉದ್ದೇಶದಿಂದ ಸರ್ಕಾರ ಕನ್ನಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮ ನಡೆಸುತ್ತಿದೆ. ನಮ್ಮ ತಾಯಿಗೆ ನಾವು ಯಾವ ರೀತಿ ಗೌರವ ನೀಡುತ್ತೇವೋ ಅದೇ ರೀತಿಯಲ್ಲಿ ನಾವೆಲ್ಲರೂ ನಮ್ಮ ನಾಡಿಗೆ ಗೌರವ ಕೊಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಬಿ.ಎನ್ ಸ್ವಾಮಿ ಮಾತನಾಡಿ ಕರ್ನಾಟಕ ಏಕೀಕರಣಕ್ಕಾಗಿ ಹಲವು ಮಹನೀಯರು ಶ್ರಮಿಸಿದ್ದಾರೆ. ಹಿಂದೆ ಮೈಸೂರು ರಾಜ್ಯವಾಗಿತ್ತು. ಧಾರವಾಡ ಕೇಂದ್ರ ಸ್ಥಾನ ಮಾಡಿಕೊಳ್ಳಲಾಗಿತ್ತು. ಕರ್ನಾಟಕದ ಇತಿಹಾಸವನ್ನ ಮೆಲಕು ಹಾಕುವ ಮಹತ್ವದ ಕೆಲಸ ಕನ್ನಡ ಜ್ಯೋತಿ ರಥಯಾತ್ರೆಯ ಮೂಲಕ ಆಗುತ್ತಿದೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸುವಂತೆ ರಥಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ವಿಜೃಂಭಣೆಯಿಂದ ಹಬ್ಬದ ವಾತಾವರಣ ಮೂಡಿಸಿದ್ದು ತುಂಬಾ ಖುಷಿಯಾಗಿದೆ. ಸರ್ಕಾರಿ ಶಾಲೆಗಳು ಹೊರತು ಪಡಿಸಿದರೆ ಪೋಷಕರು ತಮ್ಮ ಮಕ್ಕಳನ್ನ ಭವಿಷ್ಯದ ದೃಷ್ಟಿಯಿಂದ ಆಂಗ್ಲ ಮಾದ್ಯಕ್ಕೆ ಸೇರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಶ್ರೇಷ್ಟವಾದದ್ದು, ಪ್ರಥಮ ಭಾಷೆ ಕನ್ನಡವನ್ನ ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ʼ
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ್, ತಾಲ್ಲೂಕು ಪಂಚಾಯತಿ ಇ.ಓ ನಾರಾಯಣ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ. ಕೋಡಿ ರಂಗಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಬಿ.ಆರ್ ಅನಂತಕೃಷ್ಣ, ಸೇರಿದಂತೆ ಕನ್ನಡ ಪರ, ರೈತ ಪರ ಸಂಘಟನೆಗಳ ಮುಖಂಡರು, ಕನ್ನಡ ಪ್ರೇಮಿಗಳು, ಶಾಲಾ ಮಕ್ಕಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.