ಚಿಕ್ಕಬಳ್ಳಾಪುರ : ಕೇಂದ್ರದ ಜಲಶಕ್ತಿ ಮಂತ್ರಾಲಯದ ಸ್ವಚ್ಛತಾ ತಂಡವು (WASH-Water Sanitation and Heigin) ತಂಡವು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಜಲ್ ಜೀವನ್ ಮಿಷನ್(JJM) ಹಾಗೂ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ(SBMG) ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿತು.
ಡಾ.ಜೈ ಭಗವಾನ್ ರವರ ನೇತೃತ್ವದ ತಂಡವು ಮೂರು ದಿನಗಳ ಕಾಲ ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ತಾಲ್ಲೂಕಿನ ಸುಮಾರು 16 ಗ್ರಾಮ ಪಂಚಾಯಿತಿಗಳಿಗೆ ಪ್ರವಾಸ ಕೈಗೊಂಡು, ಜಲ್ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ, ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಮನೆ ಮನೆ ಗಂಗೆ ಯೋಜನೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯುಕ್ತಿಕ ಗೃಹ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ, ಸ್ವಚ್ಛ ಸಂಕೀರ್ಣ ಘಟಕ, ವೈಯುಕ್ತಿಕ ಹಾಗೂ ಸಮುದಾಯ ಇಂಗು ಗುಂಡಿ, ಬೂದು ನೀರು ನಿರ್ವಹಣಾ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ವಿವಿಧ ಗ್ರಾಮ ಪಂಚಾಯಿತಿಗಳಿಗೆ ಕ್ಷೇತ್ರ ಭೇಟಿ ನೀಡಿದ ಕೇಂದ್ರ ತಂಡವು, ವಿಡಬ್ಲ್ಯೂಎಸ್ಸಿ (VWSC) ಸಮಿತಿಗಳ ರಚನೆ, ಅವುಗಳ ಕಾರ್ಯವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ಪಡೆದು, ಗ್ರಾಮೀಣ ಪ್ರದೇಶಗಳ ಪ್ರತಿ ಕುಟುಂಬಗಳಿಗೂ ಗುಣಮಟ್ಟದ ಕುಡಿಯುವ ನೀರು ಸಿಗಬೇಕು ಮತ್ತು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಯ್ದುಕೊಳ್ಳಬೇಕು ಎಂಬ ಸದುದ್ದೇಶದಿಂದ ಕೇಂದ್ರ ಸರ್ಕಾರ ಜಲ್ ಜೀವನ್ ಮೀಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಎಂಬ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದು ಸಕಾರಗೊಳ್ಳಬೇಕಾದರೆ, ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿತು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಮನೆ ಮನೆಗೂ ಹಸಿ ಮತ್ತು ಒಣ ಕಸ ಸಂಗ್ರಹಣೆ ಮಾಡಲು ಪ್ರತಿ ಕುಟುಂಬಗಳಿಗೆ ತಲಾ 2 ಕಸದ ಬುಟ್ಟಿ ನೀಡಲಾಗಿದೆ. ಸ್ವಚ್ಛ ವಾಹಿನಿಗಳ ಮೂಲಕ ಪ್ರತಿ ದಿನ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ತ್ರೀಶಕ್ತಿ ಸಂಘಗಳ ಮೂಲಕ ವೈಜ್ಞಾನಿಕವಾಗಿ ತ್ಯಾಜ್ಯವಿಂಗಡಣೆ ಮಾಡಲಾಗುತ್ತಿದೆ. ಹೊಸದಾಗಿ ವೈಯುಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂಬ ಆಶಯವನ್ನು ಕೇಂದ್ರವು ವ್ಯಕ್ತಪಡಿಸಿತು.
ಕ್ಷೇತ್ರ ಭೇಟಿಗೂ ಮುನ್ನ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಜಲ್ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು.
ಇದೇ ವೇಳೆ ಸ್ವಚ್ಛತಾ ಹೀ ಸೇವೆ-2024 ಅಭಿಯಾನದ ಭಾಗವಾಗಿ ಚಿಕ್ಕಬಳ್ಳಾಪುರದ ಅಗಲಗುರ್ಕಿ, ಆವಲಗುರ್ಕಿ, ಅಡ್ಡಗಲ್, ಗೌರಿಬಿದನೂರಿನ ಡಿ.ಪಾಳ್ಯ, ಬಾಗೇಪಲ್ಲಿಯ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಶ್ರಮದಾನ ಹಾಗೂ ಅಮ್ಮನ ಹೆಸರಲ್ಲಿ ಒಂದು ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಈಶ್ವರಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಬಿಯಂತರರಾದ ಚಂದ್ರಶೇಖರ್, ಜಲ್ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯ ಜಿಲ್ಲಾ ಸಮಾಲೋಚಕರು, ಎಲ್ಲಾ ತಾಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಐಎಸ್ಎ ಮತ್ತು ಐಎಸ್ಆರ್ ನ ಸಮಾಲೋಚಕರು ಉಪಸ್ಥಿತರಿದ್ದರು.