ಬೆಂಗಳೂರು ಜುಲೈ : ಬೆಂಗಳೂರು ನಗರ ಜಿಲ್ಲೆಯ ಸರ್ವಜ್ಞ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವೀರಣ್ಣ ಪಾಳ್ಯ ಗ್ರಾಮದಲ್ಲಿ ಗ್ರಾಮ ದೇವತೆಗಳಾದ ಶ್ರೀ ಪೂಜಮ್ಮ ಹಾಗೂ ಶ್ರೀ ಮದ್ಧೂರಮ್ಮ ದೇವಿಯವರ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯಿತು.
ಸೋಮವಾರ ಮತ್ತು ಮಂಗಳವಾರ ಎರಡು ದಿನಗಳು ಗ್ರಾಮ ದೇವತೆಗಳಿಗೆ ತಂಬಿಟ್ಟು ದೀಪ, ಬೆಲ್ಲದ ದೀಪಗಳನ್ನು ಬೆಳಗಿವುದರ ಮೂಲಕ ಊರ ಹಬ್ಬ ಜಾತ್ರೋತ್ಸವವನ್ನ ಭಕ್ತಿ ಭಾವದಿಂದ ವಿಜೃಂಭಣೆಯಿಂದ ಆಚರಿಸಿದರು.
ಹಬ್ಬದ ವಿಶೇಷವಾಗಿ ಹೆಣ್ಣು ಮಕ್ಕಳು, ಮುತ್ತೈದೆಯರು ಅಲಂಕೃತರಾಗಿ ಬಗೆ ಬಗೆಯ ಚೆಂದದ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿ ದೇವತೆಗಳಿಗೆ ಆರತಿ ಬೆಳಗಿದರು. ಕಳೆದ ಮೂರು ದಿನಗಳಿಂದ ಶ್ರೀ ಪೂಜಮ್ಮ ಮತ್ತು ಶ್ರೀ ಮದ್ಧೂರಮ್ಮ ಹಾಗೂ ಶ್ರೀ ಗಂಗಮ್ಮ ದೇವಿ ಶ್ರೀ ಮಹೇಶ್ವರಮ್ಮ ,ಶ್ರೀ ಪಿಳೇಕಮ್ಮ ಹಾಗೂ ಶ್ರೀ ಮನೇಶ್ವರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ದೀಪಾಲಂಕಾರ ಮತ್ತು ವಿಶೇಷ ಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆ ಅಭಿಷೇಕ ಹಾಗೂ ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೇರವೇರಿಸಿ ತಂಬಿಟ್ಟ ದೀಪಗಳನ್ನು ಬೆಳಗಿದರು.
ಜಾತ್ರೆಯ ಕೊನೆ ದಿನವಾದ ಬುಧವಾರದಂದು ಶ್ರೀ ಪೂಜಮ್ಮ ಹಾಗೂ ಶ್ರೀ ಮದ್ದೂರಮ್ಮ ದೇವರ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಿಕ್ಕಿ ರಥದಲ್ಲಿ ವಿಶೇಷ ಹೂವಿನ ಅಲಂಕಾರದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಇನ್ನೂ ಉತ್ಸವ ಮೂರ್ತಿಯು ಮನೆಗಳ ಸಮೀಪ ಆಗಮಿಸುತ್ತಿದಂತೆ ಮನೆಯ ಮುಂಭಾಗ ಆಕರ್ಷಕವಾದ ರಂಗೋಲಿ ಯನ್ನು ಬಿಡಿಸಿ ಹೂಗಳಿಂದ ಅಲಂಕರಿಸಿ ತಾಯಿಯ ಉತ್ಸವ ಮೂರ್ತಿಯನ್ನು ಸ್ವಾಗತಿಸಿ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
” ನಮ್ಮ ಪೂರ್ವಿಕರ ಆಚಾರದಂತೆ ಪ್ರತಿ ವರ್ಷ ಆಷಾಡ ಮಾಸ ಕ್ಕಿಂತ ಮೊದಲು ವೀರಣ್ಣಪಾಳ್ಯದಲ್ಲಿ ಶ್ರೀ ಪೂಜಮ್ಮ ಹಾಗೂ ಶ್ರೀ ಮದ್ದೂರಮ್ಮ ದೇವಿಯವರ ಜಾತ್ರಾ ಮಹೋತ್ಸವ, ಊರ ಹಬ್ಬವನ್ನು ಆಚರಿಸುತ್ತೇವೆ. ಹಬ್ಬದ ವಿಶೇಷವಾಗಿ ಶ್ರೀ ದೇವಿಯವರ ಉತ್ಸವ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತವೆ. ಪ್ರತಿ ಮನೆಯಿಂದ ಪೂಜೆ ಸಲ್ಲಿಸಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಯವರಲ್ಲಿ ಪ್ರಾರ್ಥಿಸುತ್ತಾರೆ. – ಪಿಳ್ಳಯ್ಯಣ್ಣ, ಗ್ರಾಮದ ಹಿರಿಯ ಮುಖಂಡರು. ವೀರಣ್ಣಪಾಳ್ಯ.