ಮುನ್ನಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ : ತಹಶೀಲ್ದಾರ್ ಬಿ.ಎನ್ ಸ್ವಾಮಿ
ಶಿಡ್ಲಘಟ್ಟ : ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 2572 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 1284 ಗಂಡು ಮಕ್ಕಳು 1288 ಹೆಣ್ಣುಮಕ್ಕಳು ಪರೀಕ್ಷೆ ಎದುರಿಸಲಿದ್ದಾರೆ. ತಾಲ್ಲೂಕಿನಾದ್ಯಂತ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅದರಲ್ಲಿ 6 ಖಾಸಗಿ ಶಾಲೆಗಳು, 2 ಸರ್ಕಾರಿ ಶಾಲೆಗಳು, 1 ವಸತಿ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳಲ್ಲಿಯೂ ಸಹ ಮೂಲಭೂತ ಸೌಕರ್ಯಗಳ ಜೊತೆಗೆ ಸಿ ಸಿ ಕ್ಯಾಮೆರಾ ಸುಸ್ಥಿತಿಯಲ್ಲಿರುವಂತೆ ಹಾಗೂ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಅಡಚಣೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ತಾಲ್ಲೂಕು ದಂಡಾಧಿಕಾರಿಗಳಾದ ಬಿ.ಎನ್ ಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಆಡಳಿತ ಶಕ್ತಿ ಕೇಂದ್ರಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳ ಸಭೆ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ಮಾ.25 ರಿಂದ ಏ.6ನೇ ತಾರೀಖಿನವರೆಗೂ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಪೂರ್ವ ತಯಾರಿ ನಡೆಸಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಹಾಗೂ ಪ್ರಶ್ನೆ ಪತ್ರಿಕೆಗಳ ಗೌಪ್ಯತೆ ಅತಿ ಮುಖ್ಯ ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಮುತ್ತ ಸಾರ್ವಜನಿಕರು ಹಾಗೂ ವಾಹನ ಸಂಚಾರ ಇಲ್ಲದಂತೆ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸುವುದಾಗಿ ಮತ್ತು ಯಾವುದೇ ಜೆರಾಕ್ಸ್ ಅಂಗಡಿಗಳು ತೆರೆಯದಂತೆ ಕಟ್ಟು ನಿಟ್ಟಿನ ಕ್ರಮವಹಿಸಬೇಕು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಆರೋಗ್ಯ ಸೇವೆ, ಸಾರಿಗೆ ವ್ಯವಸ್ಥೆ ,ವಿದ್ಯುತ್ ವ್ಯವಸ್ಥೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ
ಸಿ.ಎ ನರೇಂದ್ರ ಕುಮಾರ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಜಿ ಮುನಿರಾಜ್, ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ, ನಗರ ಸಭೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.