ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ.
ಶಿಡ್ಲಘಟ್ಟ : ಇ – ಹರಾಜಿನಿಂದ ರೇಷ್ಮೆಗೂಡಿಗೆ ಗುಣಮಟ್ಟ ಆಧಾರದ ಮೇಲೆ ನಿಖರ ಬೆಲೆ ಸಿಗಲಿದೆ ಇದರಿಂದ ರೈತರು ಮತ್ತು ರೀಲರುಗಳು ಇಬ್ಬರಿಗೂ ಅನುಕೂಲವಾಗಲಿದೆ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕರಾದ ತಿಮ್ಮರಾಜು ಅವರು ತಿಳಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆ ಅಧ್ಯಯನಕ್ಕಾಗಿ ಆಗಮಿಸಿದ ರೇಷ್ಮೆ ಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಮೂರನೇ ಸೆಮಿಸ್ಟರ್ ಅಗ್ರಿಕಲ್ಚರ್ ವಿದ್ಯಾರ್ಥಿಗಳಿಗೆ ರೇಷ್ಮೆಗೂಡು ಮಾರುಕಟ್ಟೆಯ ವ್ಯವಸ್ಥೆ ಹಾಗೂ ಇ ಹರಾಜು ಪ್ರಕ್ರಿಯೆಯ ವ್ಯವಸ್ಥೆ ಕುರಿತು ಮಾಹಿತಿ ವಿವರವಾಗಿ ತಿಳಿಸಿದರು.
ಈ ಮೊದಲು ಬಹಿರಂಗ ಹರಾಜು ಪದ್ಧತಿ ವ್ಯವಸ್ಥೆಯಿತ್ತು. ಕಳೆದ 7-8 ವರ್ಷದಿಂದ ಇ-ಹರಾಜು ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಿಂದ ರೇಷ್ಮೆ ಗೂಡಿನ ಗುಣಮಟ್ಟದ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ. ಇದರಿಂದ ಒಂದೆಡೆ ರೈತರಿಗೆ ತನ್ನ ಗೂಡಿನ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ದೊರೆತರೆ ರೀಲರುಗಳು ತಾವು ಖರೀದಿಸಿದ ಗೂಡಿಗೆ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನೀಡಿದಂತಾಗುತ್ತದೆ ಎಂದು ವಿವರಿಸಿದರು.
ಮೊಬೈಲ್ ನಲ್ಲಿ ಬೆಲೆ ನಿಗದಿ: ರೈತರು ತರುವ ರೇಷ್ಮೆ ಗೂಡಿಗೆ ಮೊದಲು ಜಾಲರಿಗಳನ್ನು ನೀಡಲಾಗುತ್ತದೆ. ಪ್ರತಿ ಲಾಟಿಗೂ ಒಂದು ಸಂಖ್ಯೆ ನೀಡಲಾಗುತ್ತದೆ. ರೀಲರ್ಗಳು ಮಾರುಕಟ್ಟೆಯ ಎಲ್ಲಾ ರೇಷ್ಮೆ ಗೂಡನ್ನು ಪರಿಶೀಲಿಸಿ ತಮಗಿಷ್ಟ ಬಂದ ಲಾಟಿಗೆ ತಮ್ಮ ಮೊಬೈಲ್ ನಲ್ಲಿ ನಿಗಧಿತ ಆಪ್ ನಲ್ಲಿ ಬೆಲೆ ನಮೂದಿಸಬಹುದು. ರೈತರಿಗೆ ಆ ಬೆಲೆ ಒಪ್ಪಿಗೆ ಆದಲ್ಲಿ ಹರಾಜಿಗೆ ಸಹಿ ಮಾಡುತ್ತಾರೆ. ಬೆಲೆ ಸಮಾಧಾನವಾಗದಿದ್ದಲ್ಲಿ ಹರಾಜು ರದ್ದು ಪಡಿಸಿ ಮತ್ತೊಂದು ಸುತ್ತಿನ ಹರಾಜು ಮಾಡಲಾಗುವುದು ಎಂದು ಈ ಹರಾಜು ಕುರಿತು ತಿಳಿಸಿದರು.
ಇ – ಹರಾಜು, ಇ – ತೂಕ ಮತ್ತು ಇ -ಪೇಮೆಂಟ್ ಮಾಡುವುದು ಹೇಗೆ ಎಂಬುವುದು ವಿದ್ಯಾರ್ಥಿಗಳು ಮಾರುಕಟ್ಟೆಯ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ನಂತರ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕರ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮಾರುಕಟ್ಟೆ ರೇಷ್ಮೆ ಉಪನಿರ್ದೇಶಕರಾದ ಶ್ರೀ ಮಹದೇವಯ್ಯ,ರೇಷ್ಮೆ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಸಹಾಯಕ ಪ್ರಾಧ್ಯಪಕಿ ಡಾ. ಪಲ್ಲವಿ,ರೇಷ್ಮೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರಾದ ವೆಂಕಟಶಾಮರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.