ದಾವಣಗೆರೆಯಲ್ಲಿ ಲಾಕಪ್ ಡೆತ್‌ನಿಂದ ಸಾವಿಗೀಡಾಗಿಲ್ಲ, ಎಫ್.ಐ.ಆರ್ ಹಾಕದೆ ವ್ಯಕ್ತಿಯನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು ತಪ್ಪು, ಹಾಗಾಗಿ ಇನ್ಸ್‌ಪೆಕ್ಟರ್ ಮತ್ತು ಡಿವೈಎಸ್ಪಿ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ರಾಮಕೃಷ್ಣ ನಗರದಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆತನಿಗೆ ಫಿಟ್ಸ್ ಬಂದು ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ವ್ಯಕ್ತಿಯನ್ನು ಎಫ್.ಐ.ಆರ್ ಹಾಕದೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು ತಪ್ಪು. ಈ ಸಂಬಂಧ ತನಿಖೆಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಮೊಸರಲ್ಲಿ ಕಲ್ಲು ಹುಡುಕುವ ಕೇಂದ್ರ ಸರ್ಕಾರ :
ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮೊಸರಿನಲ್ಲಿ ಕಲ್ಲು ಹುಡುಕುವ ಬದಲು ಈಗಲಾದರೂ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಗ್ರಹಿಸಿದರು. ಕೇಂದ್ರ ಸಚಿವ ಜಯಶಂಕರ್ ಪಾಸ್ ಪೋರ್ಟ್ ರದ್ದು ಸಂಬಂಧ ಮೇ.21 ರಂದು ನಮಗೆ ಪತ್ರ ಬಂದಿದೆ ಎಂದು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಹದಿನೈದು ದಿನಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈಗ ಎರಡನೇ ಪತ್ರವನ್ನು ಬರೆದಿದ್ದೇನೆ.
ನಮ್ಮ ಪೊಲೀಸರು ಮತ್ತು ಎಸ್.ಐ.ಟಿ ಅವರು ಪತ್ರ ಬರೆದಿದ್ದಾರೆ. ಇನ್ನು ಏನು ಬರಿಯಬೇಕಿತ್ತು? ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಒಂದು ವೇಳೆ ಪತ್ರ ತಲುಪಿರುವುದು ಲೇಟ್ ಆಗಿತ್ತು ಅಂದುಕೊಳ್ಳೋಣ, ಈಗ ಪಾಸ್ ಪೋರ್ಟ್ ರದ್ದು ಮಾಡಲಿ ಎಂದರು. ಪಾಸ್ ಪೋರ್ಟ್ ರದ್ದು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಏನು ವಿದೇಶಾಂಗ ಸಚಿವರಲ್ಲ, ಒಮ್ಮೆಯೂ ಕೇಂದ್ರ ಸಚಿವರಾಗಿಲ್ಲ, ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದರು ಅಷ್ಟೇ ಎಂದು ಹೇಳಿದರು. ರಾಕೇಶ್ ಸಿದ್ದರಾಮಯ್ಯ ಸಾವಿನ ವಿಚಾರ ಪ್ರಸ್ತಾಪಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ, ರಾಕೇಶ್ ಸತ್ತು ಎಂಟು ವರ್ಷ ಆಯಿತು, ಈಗ ಆ ವಿಚಾರ ಪ್ರಸ್ತಾಪ ಮಾಡುವುದು ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಕೇಶ್ 2016 ರಲ್ಲಿ ನಿಧನರಾಗಿರುವುದು, ರಾಜಕೀಯಕ್ಕಾಗಿ ಹೀಗೆ ಮಾತನಾಡಬಾರದು. ರಾಕೇಶ್ ಸಾವಿಗೂ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣಕ್ಕೂ ಏನು ಸಂಬಂಧ? ಇವರ ಅಣ್ಣನ ಮಗ ರೇಪ್ ಮಾಡಿದ್ದಾನೆ ಅಂತ ಪ್ರಕರಣ ದಾಖಲಾಗಿರುವುದು ಎಂದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದ ವೀಡಿಯೋ ವೈರಲ್ ಮಾಡುವುದು ಸರಿ ಎಂದು ನಾನು ಹೇಳುತ್ತಿಲ್ಲ, ಕುಮಾರಸ್ವಾಮಿ ರೇಪ್ ಮಾಡಿರುವುದಕ್ಕಿಂತ ವೈರಲ್ ದೊಡ್ಡದು ಎಂದಿದ್ದಾರಲ್ಲ ಯಾವ ಸೆಕ್ಷನ್ ನಲ್ಲಿ ಬರುತ್ತದೆ? ಕುಮಾರಸ್ವಾಮಿ ಅವರದೇನಾದರು ಕ್ರಿಮಿನಲ್ ಲಾ ಇದಿಯಾ ಎಂದು ವ್ಯಂಗ್ಯವಾಡಿದರು.
‘ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ಕಾನೂನು ಎಲ್ಲರಿಗೂ ಒಂದೇ’
ಮಂಗಳೂರು: ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 353ರ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಬಂಧನಕ್ಕೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಕಾನೂನು ಎಲ್ಲರಿಗೂ ಒಂದೇ ಎಂದು ಸ್ಪಷ್ಟಪಡಿಸಿದರು. ಐಪಿಸಿ 353ರ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು, ಅದು ಜಾಮೀನುರಹಿತ ಅಪರಾಧವಾಗಿರುತ್ತದೆ. ಈ ಕಾನೂನಿನಂತೆ 7 ವರ್ಷ ಜೈಲುವಾಸದ ಶಿಕ್ಷೆ ನೀಡುವ ಅವಕಾಶವಿದೆ. ಆದರೆ ಹರೀಶ್ ಪೂಂಜಾ ಅವರು ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪವನ್ನು ಅಲ್ಲಗಳೆಯಲು ಸಾಧ್ಯವೇ ಎಂದರು. ಹರೀಶ್ ಪೂಂಜಾ ಅವರಿಗೆ ಸ್ಟೇಷನ್ ಬೇಲ್ ದೊರಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪೊಲೀಸರ ಮೇಲೆ ಬೆದರಿಕೆ ಹಾಕಿರುವ 2 ಪ್ರಕರಣಗಳು ಅವರ ಮೇಲೆ ದಾಖಲಾಗಿದೆ. ಶಾಸಕರಾದರೆ ಪೊಲೀಸರ ಮೇಲೆ ಬೆದರಿಕೆ ಹಾಕಬಹುದೇ ಎಂದು ಮುಖ್ಯಮಂತ್ರಿಗಳು ಮರುಪ್ರಶ್ನಿಸಿದರು.