Monday, December 23, 2024
Homeಜಿಲ್ಲೆಶ್ರೀ ಭಗವಾನ್ ಬಿರ್ಸಾ ಮುಂಡ ಅಪ್ರತಿಮ ದೇಶ ಭಕ್ತ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಶ್ರೀ ಭಗವಾನ್ ಬಿರ್ಸಾ ಮುಂಡ ಅಪ್ರತಿಮ ದೇಶ ಭಕ್ತ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಬ್ರಿಟಿಷರು ನಮ್ಮ ಕಲೆ, ಸಂಸ್ಕೃತಿ ಹಾಗೂ ಬದುಕಿಗೆ ಕಡಿವಾಣ ಹಾಕುತ್ತಿದ್ದಾರೆ ಎಂದು ಅತಿ ಚಿಕ್ಕ ವಯಸ್ಸಿನಲ್ಲೇ ಅರಿತು ಏಳು ಸಾವಿರ ಆದಿವಾಸಿಗಳನ್ನು ಸಂಘಟಿಸಿ ಹೋರಾಟ ಮಾಡಿದ ಅಪ್ರತಿಮ ದೇಶ ಭಕ್ತ ಶ್ರೀ ಭಗವಾನ್ ಬಿರ್ಸಾ ಮುಂಡ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಭಗವಾನ್ ಬಿರ್ಸಾ ಮುಂಡ ಅವರ ಜಯಂತಿ (ಜನ ಜಾತಿಯ ಗೌರವ ದಿವಸ್)ಯ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಷ್ಟು ವರ್ಷ ಬದುಕುತ್ತೇವೆ ಅನ್ನೋದು ಮುಖ್ಯವಲ್ಲ ಜೀವನದಲ್ಲಿ ದೇಶಕ್ಕೆ, ಸಮಾಜಕ್ಕೆ ಏನು ಕೊಡುಗೆ, ಸೇವೆ ನೀಡಿದೆವು ಎನ್ನುವುದು ಮುಖ್ಯ. ಅತಿ ಕಡಿಮೆ ಜೀವತಾವಧಿಯಲ್ಲಿ ಮಹೋನ್ನತ ಸಾಧನೆ ಮಾಡಿ ಜನಮಾನಸದಲ್ಲಿ, ಇತಿಹಾಸದ ಪುಟಗಳಲ್ಲಿನ ಸವಾರ್ಣಾಕ್ಷರಗಳಲ್ಲಿ ಕಂಗೊಳಿಸುತ್ತಿರುವ ಸ್ವಾಮಿ ವಿವೇಕಾನಂದರು, ಬಸವಣ್ಣ, ಸರ್ವಜ್ಞರು ನೀಡಿದ ಕೊಡುಗೆಗಳು ಈ ಭೂಮಿ ಮೇಲೆ ಚಿರಸ್ಥಾಯಿಯಾಗಿ ಇರಲಿವೆ,ಅದೇ ಸಾಲಿನಲ್ಲಿ ಬಿರ್ಸಾ ಮುಂಡಾ ಅವರ ಕೊಡುಗೆಗಳು ನಿಲ್ಲಲಿವೆ. ನಮ್ಮ ದೇಶೀಯ ಸಂಸ್ಕೃತಿ, ಕಲೆ, ಸೊಗಡು, ಸಂಪ್ರದಾಯಗಳು  ಏನಾದರು ಇಂದು ಕೂಡ ಪೀಳಿಗೆಯಿಂದ ಪೀಳಿಗೆ ಸಾಗುತ್ತಿವೆ, ಜೀವಂತವಾಗಿ ಇವೆ ಎಂದರೆ ಅದಕ್ಕೆ ತಳ ಸಮುದಾಯಗಳ ಕೊಡುಗೆಗಳೇ ಮುಖ್ಯ ಕಾರಣ. ಹಸಿರೇ ಉಸಿರು ಎಂದು ಅರಣ್ಯ ಸಂರಕ್ಷಣೆಯೊಂದಿಗೆ ಬದುಕು ಕಟ್ಟಿಕೊಂಡ ಆದಿವಾಸಿಗಳ ಬದುಕಿಗೆ ಬ್ರಿಟಿಷರು ಹಲವು  ನಿರ್ಬಂಧಗಳನ್ನು  ಹಾಕಲು ಯತ್ನಿಸಿದರು. ಅರಣ್ಯ ಉತ್ಪನ್ನಗಳನ್ನು ಆದಿವಾಸಿಗಳು, ಸಂಗ್ರಹ ಮಾಡುವಂತಿಲ್ಲ,ಬಳಸುವಂತಿಲ್ಲ. ಎಲ್ಲ ಅರಣ್ಯಗಳು ಸಂರಕ್ಷಿತ ಪ್ರದೇಶಗಲಾಗಿದ್ದು ಅಲ್ಲಿ ಆದಿವಾಸಿಗಳು ಬದುಕುವಂತಿಲ್ಲ ಎಂದು ಕಾನೂನುಗಳನ್ನು ಮಾಡಿ ಅರಣ್ಯವಾಸಿಗಳ ಬದುಕಿಗೆ ಕಂಟಕ ತರುವ ಯತ್ನವನ್ನು ಮಾಡಿದ ಬ್ರಿಟಿಷರು ನಮ್ಮನ್ನು ನಿಯಂತ್ರಣದಲ್ಲಿಟ್ಟು ಶೋಷಣೆಗೆ ಒಳಪಡಿಸುತ್ತಿದ್ದಾರೆ ಎಂಬುದನ್ನು ಅರಿತ ಬಿರ್ಸಾ ಮುಂಡಾ ಅವರು  ಜಾರ್ಖಂಡ್ ನ ರಾಂಚಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಆದಿವಾಸಿಗಳನ್ನು ಸಂಘಟಿಸಿ ಹೋರಾಟಕ್ಕೆ ಮುಂದಾದರು. ಅದರ ಫಲವಾಗಿ ಅವರು ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾದರು. ಸೆರೆಮನೆ ವಾಸದಿಂದ ಮುಕ್ತಿ ಪಡೆದ ಮೇಲೆ ಭೂಗತರಾಗಿ ಬ್ರಿಟಿಷರ ವಿರುದ್ದ  ಗೆರಿಲ್ಲಾ ಸೈನ್ಯವನ್ನು ಕಟ್ಟಿ ಆದಿವಾಸಿಗಳಿಗೆ ಕಿರುಕುಳ ನೀಡುವವರನ್ನ, ಜಮೀನ್ದಾರರನ್ನ ಹಾಗೂ ಬ್ರಿಟಿಷರನ್ನ ಸಂಕಷ್ಟಕ್ಕೆ ಒಳಪಡುವಂತೆ ಮಾಡಿ ಆದಿವಾಸಿಗಳಿಗೆ ನೆರವಾದರು ಜೊತೆಗೆ ಅರಣ್ಯ ಹಾಗೂ ಅರಣ್ಯ ಭೂಮಿಯನ್ನು ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ದುರಂತವೆಂದರೆ ಇವರು 25 ನೇ ವರ್ಷದಲ್ಲೆ ಜೀವನ ಅಂತ್ಯ ಕಂಡರು. ಅತಿ ಕಡಿಮೆ ಅವಧಿಯಲ್ಲಿ ಆದಿವಾಸಿಗಳ ಕಲ್ಯಾಣ ಕಾರ್ಯಗಳನ್ನ ಮಾಡಿದ ಬಿರ್ಸಾ ರವರನ್ನು “ಭೂಮಿಯ ಪಿತಾಮಹ, ಭೂಮಿಯ ತಂದೆ, ಭೂಮಿಯ ರಕ್ಷಕ” ಎಂದು ಆ ಭಾಗದ ಜನರು ಕರೆದರು ಇಂತಹ ಅಪ್ರತಿಮ ಹೋರಾಟಗಾರನ ನೆನಪಿಗಾಗಿ ಭಾರತ ಸರ್ಕಾರವು ಇವರ ಜಯಂತಿಯನ್ನು “ಜನ ಜಾತಿಯ ಗೌರವ ದಿವಸ್ “ಆಗಿ ದೇಶದಾದ್ಯಂತ ಆಚರಣೆ ಮಾಡುತ್ತಿದೆ ಜೊತೆಗೆ “ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ”ವನ್ನು ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಆದಿವಾಸಿ ಸಮುದಾಯದವರು ಹೆಚ್ಚಾಗಿ ವಾಸಿಸುವ ಚಿಕ್ಕಬಳ್ಳಾಪುರ ಜಿಲ್ಲೆಯ 31 ಗ್ರಾಮ ಪಂಚಾಯ್ತಿಗಳು ಆಯ್ಕೆಯಾಗಿವೆ. ಈ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಕೃಷಿ ಉತ್ತೇಜಕ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಮತ್ತು ಮತ್ಸ್ಯ ಸಂಪದ  ಯೋಜನೆ ಜಾರಿ, ಸಂಚಾರಿ ವೈದ್ಯಕೀಯ ಸೇವೆಗಳನ್ನು ಆರಂಭಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ  ಕನ್ನಡ ಶಿಕ್ಷಕ ಜಗದೀಶ್ ಅವರು ಶ್ರೀ ಭಗವಾನ್ ಬಿರ್ಸಾ ಮುಂಡ ಅವರ ಜೀವನ ಚರಿತ್ರೆಯ ಕುರಿತು ತಿಳಿಸಿಕೊಟ್ಟರು. ಈ ವೇಳೆ ಪರಿತ್ಯಕ್ತ, ಅನಾಥ ಹಾಗೂ ಕಟುಂಬವಿಲ್ಲದ ಮಕ್ಕಳ ದತ್ತು ಪಡೆಯಲು ಸಾರ್ವಜನಿಕರನ್ನು ಹಾಗೂ ಜನ ಸಮುದಾಯವನ್ನು ಜಾಗೃತಿ ಮೂಡಿಸಲು ಮಕ್ಕಳ ರಕ್ಷಣಾಧಿಕಾರಿ ನೌತಾಜ್  ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಶ್ರೀ ಭಗವಾನ್ ಬಿರ್ಸಾ ಮುಂಡ ಅವರ ಜಯಂತಿ ಅಂಗವಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆಗಳಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಆರ್ ಪ್ರವೀಣ್ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ತೇಜಾನಂದ ರೆಡ್ಡಿ, ವಾಲ್ಮೀಕಿ ಸಂಘದ ಮುಖಂಡರಾದ ಗೌವಿವಾಯಪ್ಪ, ಸಮುದಾಯದ ಮುಖಂಡರಾದ ಮುನಿವೆಂಕಟಸ್ವಾಮಿ, ಮೇಲೂರು ಮಂಜುನಾಥ, ವಸತಿ ಶಾಲೆಗಳ ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ವಿವಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!