ನಗರಸಭೆಯ ನೂತನ ಅಧ್ಯಕ್ಷರಾಗಿ ಎಂ. ವಿ ವೆಂಕಟಸ್ವಾಮಿ ಉಪಾಧ್ಯಕ್ಷರಾಗಿ ರೂಪ ನವೀನ್ ಆಯ್ಕೆ.
ಶಿಡ್ಲಘಟ್ಟ : ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಗುರುವಾರದಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತ ಹಾಲಿ ನಗರಸಭೆ ಸದಸ್ಯರಾದ ಎಂ. ವಿ. ವೆಂಕಟಸ್ವಾಮಿ ಅವರು ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ರೂಪ ನವೀನ್ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ರವರ ಬೆಂಬಲ ತಂತ್ರಗಾರಿಕೆಯಿಂದ ನಗರಸಭೆ ಜೆಡಿಎಸ್ ವಶವಾಗಿದೆ. ನಗರಸಭೆಯು 31 ವಾರ್ಡ್ ಗಳು ಹೊಂದಿದ್ದು, 31 ಸದಸ್ಯರಿದ್ದಾರೆ. ಕಾಂಗ್ರೇಸ್ – 13, ಜೆಡಿಎಸ್ – 10, ಬೆಜೆಪಿ -2, ಬಿಎಸ್.ಪಿ -2 ಪಕ್ಷೇತರ – 4 ಸದಸ್ಯರಿದ್ದು, ಕಾಂಗ್ರೇಸ್ ಪಕ್ಷಕ್ಕೆ ಸಂಖ್ಯಾಬಲ ಇದ್ದರೂ ಕಾಂಗ್ರೇಸ್ ಸ್ಥಳೀಯ ಆಡಳಿತ ಚುಕ್ಕಾಣಿ ಹಿಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಎಂ. ಶ್ರೀನಿವಾಸ್ , ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಮಾತಾಜ್ ಬಾಬು ಫಕೃದ್ದೀನ್ ಸ್ಪರ್ಧೆ ಮಾಡಿದ್ದರು. ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಎಂ.ವಿ ವೆಂಕಟಸ್ವಾಮಿ ಉಪಾಧ್ಯಕ್ಷ ಸ್ಥಾನಕ್ಕೆ ರೂಪ ನವೀನ್ ಸ್ಪರ್ಧೆ ಮಾಡಿದ್ದು, ನಗರಸಭೆ ಒಟ್ಟು ಸಂಖ್ಯಾಬಲ 31 ಮತಗಳು ಚಲಾವಣೆಯಾಗಬೇಕಿತ್ತು ಇದರಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದು, 29 ಮತಗಳು ಚಲಾವಣೆಯಾಗಿದ್ದು, ಶಾಸಕರು ಒಂದು ಮತ್ತು ಸಂಸದರು ಒಂದು ಮತ ಜೆಡಿಎಸ್ ಅಭ್ಯರ್ಥಿಗೆ ನೀಡಿದ್ದಾರೆ. 31 ಸಂಖ್ಯಾ ಬಲದಲ್ಲಿ ಕಾಂಗ್ರೇಸ್ ಅಭ್ಯರ್ಥಿ -10 ಮತಗಳು ಜೆಡಿಎಸ್ ಅಭ್ಯರ್ಥಿ 21 ಮತಗಳು ಪಡೆಯುವ ಮೂಲಕ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.
ಕಾಂಗ್ರೇಸ್ ಪಕ್ಷದ ಅನಿಲ್ ಕುಮಾರ್, ಎಸ್.ಎಂ. ಮಂಜುನಾಥ್, ಕೃಷ್ಣಮೂರ್ತಿ, ಚೈತ್ರಾ ಮನೋಹರ್, ಟಿ. ಮನೋಹರ್ ಅವರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದು, ಸ್ಥಳೀಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆಗಮಿಸಿದ್ದು, ಗೆಲುವಿನ ಸುದ್ದಿ ಬರುತ್ತಿದ್ದಂತೆ ಮೈತ್ರಿ ಪಕ್ಷಗಳ ಕಾರ್ಯಕರ್ತರು ಭಾವುಟಗಳು ಹಿಡಿದು ಜೈ ಕಾರಗಳು ಕೂಗಿ ಸಂಭ್ರಮಿಸಿದರು. ಶಾಸಕ ಬಿ.ಎನ್ ರವಿಕುಮಾರ್ ಅವರು ಮಾತನಾಡಿ ರಾಜ್ಯದಲ್ಲಿ ಅತ್ಯಂತ ಹಿಂದುಳಿರುವ ನಗರಸಭೆ ಯಾವುದಾದರು ಇದ್ದರೆ ಅದು ನಮ್ಮ ಶಿಡ್ಲಘಟ್ಟ ನಗರಸಭೆಯಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಅಭಿವೃದ್ದಿಯಾಗಬೇಕು ನನ್ನ ಮೇಲೆ ಭರವಸೆ ಇಟ್ಟು ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನಕ್ಕೆ ಬೆಂಬಲ ನೀಡಿ ಆಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ. ಮಲ್ಲೆಶ್ ಬಾಬು, ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ನೂತನ ಅಧ್ಯಕ್ಷರಾದ ಎಂ. ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪ ನವೀನ್, ಸದಸ್ಯರಾದ ನಾರಾಯಣಸ್ವಾಮಿ, ಬಂಕ್ ಮುನಿಯಪ್ಪ, ಮತ್ತಿತರರು ಇದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್