ಅಕ್ಷರ ಕಲಿಸಿದ ಗುರು,ಜನ್ಮನೀಡಿದ ತಂದೆ ತಾಯಿ, ದಾರಿ ತೋರುವ ಹಿರಿಯರ ಮಾರ್ಗದರ್ಶನ ಮರೆಯಬಾರದು.!
ಶಿಡ್ಲಘಟ್ಟ : ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಮಾನವಂತ, ಸಂಸ್ಕಾರವಂತ ಶಿಕ್ಷಣ ನೀಡುವುದರಿಂದ ಮಾತ್ರವೇ ಸಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.
ತಾಲೂಕಿನ ಚೀಮಂಗಲ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣಲ್ಲಿ ಸ್ವಾಮಿ ವಿವೇಕಾನಂದ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆಯ ದಿವಂಗತರಾದ ರಾಮಚಂದ್ರನ್ ಮತ್ತು ಡಿ.ನಾರಾಯಣಸ್ವಾಮಿ ಸ್ಮರಣಾರ್ಥ ಏರ್ಪಡಿಸಿದ್ದ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಕ್ಷರ ಕಲಿಸಿದ ಗುರು,ಜನ್ಮನೀಡಿದ ತಂದೆ ತಾಯಿ, ದಾರಿ ತೋರುವ ಹಿರಿಯ ಮಾರ್ಗದರ್ಶನವನ್ನು ಎಂದೂ ಕೂಡ ಮರೆಯಬಾರದು. ಶಿಕ್ಷಣದಿಂದ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ವ್ಯರ್ಥವಾಗುವುದಿಲ್ಲ, ಸಮಯ ಬಂದಾಗ ಫಲಕೊಟ್ಟೇ ಕೊಡುತ್ತವೆ. ಹಾಗೆ ಶಾಲಾ ಶಿಕ್ಷಣದಲ್ಲಿ ನಿರತರಾಗಿರುವ ನೀವು ಓದಿಗೆ ಮಾತ್ರ ಗಮನಕೊಟ್ಟರೆ ಆದರ್ಶ ವ್ಯಕ್ತಿಗಳಾಗಿ ಬದುಕು ಕಟ್ಟಿಕೊಳ್ಳಬಹುದು. ಭಾರತದ ಶ್ರೀಮಂತಿಕೆಯನ್ನು, ಸಮಭಾವದ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಮಕ್ಕಳಾದ ನಿಮ್ಮ ಮೇಲಿದ್ದು ಗುರುಗಳು ಇದ್ದಕ್ಕೆ ನೀರೆರೆದು ಪೋಷಿಸಬೇಕು ಎಂದು ಹೇಳಿದರು.
ಸಮಾಜ ಸೇವಕ ಜಿ.ಮುನಿರಾಜು ಮಾತನಾಡಿ ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ಗಾದೆಮಾತನ್ನು ಮಕ್ಕಳು ಮರೆಯಬಾರದು.ಪರೋಪಕಾರ ಇದಂ ಶರೀರಂ ಎಂಬ ವಾಕ್ಯದ ಅರ್ಥವನ್ನು ಅರಿತು ಅದರಂತೆ ನಡೆಯುವುದನ್ನು ಕಲಿತರೆ ನಾವಿರುವ ನೆಲವೇ ರಾಮರಾಜ್ಯವಾಗಲಿದೆ ಎಂದರು.
ನಿವೃತ್ತ ಅಧಿಕಾರಿ ತಾಟಪರ್ತಿ ನರಸಿಂಹಪ್ಪ ಮಾತನಾಡಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಲಾರದು. ಮಕ್ಕಳೆ ಪರಿಸರಕ್ಕೆ ನಿಷ್ಟವಾಗಿ ನಡೆದುಕೊಳ್ಳುತ್ತಾ,ವಿನಯಶೀಲಗುಣವನ್ನು ಬೆಳೆಸಿಕೊಂಡರೆ ಶಿಕ್ಷಣ ಸರಾಗವಾಗಲಿದೆ.ಯಾರೂ ಕದಿಯದ ಆಸ್ತಿಯೆಂದರೆ ಅದು ಶಿಕ್ಷಣ ಮಾತ್ರ.ಶಿಕ್ಷಣದಿಂದ ಮಾತ್ರವೇ ಸಾಮಾಜಿಕ ವಿಮೋಚನೆ ಪಡೆಯಲು ಸಾಧ್ಯ.ಇದನ್ನರಿತು ಶಾಲೆಯಲ್ಲಿ ವ್ಯಾಸಾಂಗ ಮುಂದುವರೆಸಿ ಎಂದು ಕರೆ ನೀಡಿದರು.
ಯುವಮುಖಂಡ ನರೇಶ್ ಮಾತನಾಡಿ ಗ್ರಾಮೀಣ ಶಾಲೆಗಳಿಂದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಮರ್ಥವಾಗಿವೆ.ಚೀಮಂಗಲ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ನಾವು ಯಾರಿಗಿಂತಲೂ ಕಡಿಮೆಯಿಲ್ಲ ಎಂಬAತೆ ಓದಿದಾಗ ಮಾತ್ರವೇ ದೇಶಮೆಚ್ಚುವಂತೆ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ.ಓದಿನ ಜತೆಗೆ ಪಠ್ಯೇತರ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
” ಕನ್ನಡ ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ಮಾತನಾಡಿ ಯಾರು ತಮ್ಮ ಊರು, ಶಾಲೆ, ನಡೆದು ಬಂದ ಹಾದಿ, ಹೆತ್ತವರ ಕಷ್ಟವನ್ನು ಮರೆಯುವುದಲ್ಲವೋ ಅವರು ಖಂಡಿತವಾಗಿ ಸಾಧಕರಾಗುತ್ತಾರೆ. ಮಕ್ಕಳೇ ನಾವು ಹುಟ್ಟಿದಾಗ ಉಸಿರು ಇರುತ್ತೆ ಹೆಸರು ಇರುವುದಿಲ್ಲ.ನಾವು ಸತ್ತಾಗ ಉಸಿರು ಇರಲ್ಲ ಹೆಸರು ಇರುತ್ತೆ. ಸತ್ತ ಮೇಲೂ ಹೆಸರು ಉಳಿಯುವ ಹಾಗೆ ನಮ್ಮ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಬೇಕು.ನನ್ನ ಇವತ್ತಿನ ಎಲ್ಲಾ ಬೆಳವಣಿಗೆಯ ಶ್ರೇಯ ನನ್ನ ಅಪ್ಪ ಅಮ್ಮನಿಗೆ ಸಲ್ಲುತ್ತದೆ.ಅವರು ಕೂಲಿ ಮಾಡಿದರೋ,ಮಲದಗುಂಡಿ ಬಳಿದರೋ,ನಮಗಾಗಿ ಅವರು ಕಂಡವರ ಹೊಲಗದ್ದೆಗಳಲ್ಲಿ ವಿಶ್ರಾಂತಿ ಇಲ್ಲದೆ ದುಡಿದರು.ನಮ್ಮ ಕಷ್ಟ ಮಕ್ಕಳಿಗೆ ಬೇಡ ಎಂದು ಶಿಕ್ಷಣ ಕೊಡಿಸಿದರು. ಅವರ ತ್ಯಾಗಕ್ಕೆ ಮಕ್ಕಳಾಗಿ ನಾವು ಏನು ಕೊಟ್ಟರೂ ಸಾಲದು.ದೇವರಿಲ್ಲ ಎಂಬುದು ಸುಳ್ಳು.ಕಣ್ಣ ಮುಂದಿರುವ ತಂದೆತಾಯಿಗಳೇ ನಿಜವಾದ ದೇವರು. ಅವರನ್ನು ಸಂತೋಷವಾಗಿರುವAತೆ ನೋಡಿಕೊಂಡರೆ ಸಕಲವೂ ನಮ್ಮನ್ನು ಅರಸಿಕೊಂಡು ನಾವಿದ್ದಲ್ಲಿಗೇ ಬರುತ್ತದೆ ಎನುತ್ತಾ ತಮ್ಮ ತಂದೆ ತಾಯಿಯ ತ್ಯಾಗವನ್ನು ಸ್ಮರಿಸಿ ಭಾವುಕರಾದರು.ಇದೇ ವೇಳೆ ತಮ್ಮ ತಂದೆಯ ಹೆಸರಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ ೮೦ಕ್ಕಿಂತಲೂ ಹೆಚ್ಚಿನ ಅಂಕಸಾಧನೆ ಮಾಡಿರುವ ೧೨ ಮಂದಿ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿದರು.”
ಕಾರ್ಯಕ್ರಮದಲ್ಲಿ ಬಿ.ಮುನಿವೆಂಕಟಪ್ಪ, ಶ್ರೀಮತಿ ಚಾತುರ್ಯ,ರೈತಸಂಘದ ತಾದೂರು ಮಂಜುನಾಥ್ ಮತ್ತಿತರರು ಮಾತನಾಡಿದರು.ಇದೇ ವೇಳೆ ಸ್ವಾಮಿ ವಿವೇಕಾನಂದ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆಗೆ ಕರ್ನಾಟಕ ಬ್ಯಾಂಕ್ ಉದ್ಯೋಗಿ ಕುಮಾರಿ ಜಿ. ಪ್ರಜ್ವಲ,ಉದ್ಯಮಿ ಶಂಕರ್ ಪುತ್ರಿ ಕುಮಾರಿ ಮಾನಸ ಇವರು ಎರಡು ಒಲಿಗೆ ಯಂತ್ರಗಳನ್ನು ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ , ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚಾತುರ್ಯ,ಬಿ. ಮುನಿವೆಂಕಟಪ್ಪ,ಗ್ರಾಪಂ ಅಧ್ಯಕ್ಷ ಸರಸ್ವತಿ,ಅಂಗವಿಕಲ ಸಂಘದ ಲಕ್ಷ್ಮೀನಾರಾಯಣ,ಸರಕಾರಿ ಪ್ರೌಢಶಾಲೆಯ
ಮುಖ್ಯೋಪಾಧ್ಯಾಯ ಶಿವಶಂಕರ್ ಮತ್ತು ಇತರೆ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.