ಶಿಡ್ಲಘಟ್ಟ: ದೇಶದಲ್ಲಿ 10 ವರ್ಷ ನರೇಂದ್ರ ಮೋದಿ ಅವರು ಆಡಳಿತ ನೀಡಿದ್ದಕ್ಕೆ ಜಗತ್ತಿನಲ್ಲಿ ದೇಶವನ್ನ 5ನೇ ಸ್ಥಾನಕ್ಕೆ ತಂದರು. ರಾಜ್ಯದಲ್ಲಿ ಜನರನ್ನು ಯಮಾರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಗ್ಯಾರೆಂಟಿಗಳಿಂದ ಆರ್ಥಿಕ ಹೊರೆ ಹೆಚ್ಚಾಗಿ ಜನರ ಮೇಲೆ ಬೆಲೆ ಏರಿಕೆ ಬರೆ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಪ್ರತಿ ಬೂತ್ ಮಟ್ಟದಿಂದ ಪಕ್ಷವನ್ನ ಸಂಘಟಿಸಿ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಹೇಳಿದರು.
ನಗರದ ಮಯೂರ ವೃತ್ತದ ಬಳಿ ಬಿಜೆಪಿ ಸೇವಾಸೌಧದಲ್ಲಿ ಶನಿವಾರದಂದು ಆಯೋಜಿಸಿದ್ದ ಬಿಜೆಪಿ ತಾಲ್ಲೂಕು ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಯುತ್ತೊ ಬಿಡುತ್ತೋ ಗೊತ್ತಿಲ್ಲ. ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 15-16 ಸಾವಿರ ಮತಗಳು ಪಡೆದುಕೊಂಡಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದೆ. ಕ್ಷೇತ್ರದ ಶಾಸಕರಿಗೆ ಅನುಧಾನ ಸಿಗುತ್ತಿಲ್ಲ. ಯಾವುದೇ ಕೆಲಸಗಳು ಆಗುತ್ತಿಲ್ಲ. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ, ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದಿಂದ ಪಕ್ಷದ ಕಾರ್ಯಕರ್ತರು ಕಮೀಟಿ ಮಾಡಿಕೊಂಡು ಪಕ್ಷವನ್ನ ಸಂಘಟಿಸಬೇಕು. ಇದೆಲ್ಲವೂ ಮಾಡದಿದ್ದರೆ ಬೆಟ್ಟಕ್ಕೆ ಕಲ್ಲು ಹೊರದಂತೆ ನಮ್ಮೆಲ್ಲಾ ಕೆಲಸ ವ್ಯರ್ಥವಾಗುತ್ತದೆ. ಪ್ರಸ್ತುತ ಯಾವುದೇ ಟಿವಿ ಚಾನಲ್ ನೋಡಿದರೂ ನಕಾರತ್ಮಕ ಸುದ್ದಿಗಳೇ ಬರುತ್ತಿವೆ. ನಾವು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಬೇಕು. ಹಗರಣಗಳ ಸುಳಿಯಲ್ಲಿ ಸಿಲುಕಿರುವ ಸಿ.ಎಂ. ಮತ್ತು ಡಿ.ಸಿ.ಎಂ ದೊಡ್ಡ ಬಂಡೆಯನ್ನು ತಮ್ಮ ಮೇಲೆ ಹಾಕಿಕೊಂಡಿದ್ದಾರೆಂದು ಕುಟುಕಿದರು. ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಮುಂಬರುವ ಜಿಪಂ ತಾಪಂ ಚುನಾವಣೆಗಳನ್ನು ಎದುರಿಸಬೇಕು ಹಾಗಾಗಿ ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಿಳಿಸಿ, ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ , ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರ ಗೌಡ , ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಆನಂದ್ ಗೌಡ , ನಗರ ಮಂಡಲ ಅಧ್ಯಕ್ಷ ನರೇಶ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ , ನಗರ ಸಭಾ ಸದಸ್ಯ ನಾರಾಯಣ ಸ್ವಾಮಿ , ಬಿಜೆಪಿ ತಾಲ್ಲೂಕು ಅಧ್ಯಕ್ಷೆ ಚಾತುರ್ಯ , ನಗರ ಮಂಡಲ ಅಧ್ಯಕ್ಷೆ ತ್ರಿವೇಣಿ , ಬಿಜೆಪಿ ಮುಖಂಡರಾದ ಅರಿಕೆರೆ ಮುನಿರಾಜು , ತಾತಹಳ್ಳಿ ಕನಕಪ್ರಸಾದ್, ಯುವ ಪುರುಪೋತ್ತಮ್ , ಡಾ ಸತ್ಯನಾರಾಯಣ ರಾವ್ , ಚಲುವ ರಾಜ್ , ಶ್ರೀಧರ್ , ಮೋಹನ್ ಸೇರಿದಂತೆ ಇತರರು ಹಾಜರಿದ್ದರು.