ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ದರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ಬೀದಿ ನಾಟಕ ಕಾರ್ಯಕ್ರಮ.
ಶಿಡ್ಲಘಟ್ಟ : ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವತಿಯಿಂದ ತಾಲ್ಲೂಕಿನ ಮಳ್ಳೂರು ಹಾಗೂ ಚೀಮಂಗಲ ಗ್ರಾಮಗಳಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೀರು ಉಳಿಸಿ ಹಾಗೂ ಗ್ರಾಮ ನೈರ್ಮಲ್ಯದ ವಿಷಯವನ್ನೊಳಗೊಂಡ “ಬೀದಿ ನಾಟಕ” ಕಾರ್ಯಕ್ರಮಗಳನ್ನು ಸೌಹಾರ್ದ ಸಂಸ್ಕೃತಿ ಕಲಾತಂಡ ಮಂಡ್ಯ ಇವರ ವತಿಯಿಂದ ನಡೆಸಲಾಯಿತು.
ತಾಲ್ಲೂಕಿನ ಯೋಜನಾಧಿಕಾರಿಗಳಾದ ಎಸ್. ಸುರೇಶ ಗೌಡ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ।। ಹೇಮಾವತಿ ವಿ.ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮ ನೈರ್ಮಲ್ಯ, ಗ್ರಾಮ ಕಲ್ಯಾಣ ಹಾಗೂ ಕೆರೆ ಹೂಳು ತೆಗೆಯುವ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳ ಮೂಲಕ ಗ್ರಾಮಗಳ ಸ್ವಚ್ಛತೆ, ನೀರಿನ ಸದ್ಬಳಕೆ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುತ್ತಾ ಬಂದಿರುತ್ತಾರೆ. ಅದರಂತೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಜನರಿಗೆ ನೀರಿನ ಬಳಕೆಯ ಬಗ್ಗೆ ಅರಿವು ಹಾಗೂ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರಣದಿಂದಾಗಿ ಪ್ರತಿ ವರ್ಷವೂ “ಬೀದಿ ನಾಟಕ” ಕಾರ್ಯಕ್ರಮಗಳ ಮೂಲಕ ಸ್ಥಳಿಯ ಭಾಷೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಗ್ರಾಮಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ನಂತರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯರಾದ ತ್ಯಾಗರಾಜ್ ರವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತೀ ವರ್ಷವು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ದಿನ ಆಚರಣೆ ಮತ್ತು ಮದ್ಯವರ್ಜನ ಶಿಬಿರ ಮುಂತಾದ ಕಾರ್ಯಕ್ರಮಗಳ ಮೂಲಕ ಹದಿ ಹರೆಯದವರಲ್ಲಿ,ಯುವಕರಲ್ಲಿ ಹಾಗೂ ಇತರರಲ್ಲಿ ದುಷ್ಟಟಿಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಅವುಗಳಿಂದ ದೂರವಿರುವ ಮಾರ್ಗೋಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಕಲಾರವರು ಮಾತನಾಡಿ ಗಾಂಧೀಜಿಯವರ ಗ್ರಾಮಕಲ್ಯಾಣದ ಕನಸನ್ನು ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಕಾರಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಜಯಲಕ್ಷ್ಮೀರವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಶಿಷ್ಯವೇತನವನ್ನು ಒದಸಿಸುವುದು. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ 3 ತಿಂಗಳ ಕಾಲ ವಿಶೇಷ ಬೋಧನಾ ತರಬೇತಿಗಳನ್ನು ಆಯೋಜಿಸುವುದು, ಶಾಲಾ ಶಿಕ್ಷಕರ ಒದಗಣೆ, ಶಾಲಾ ಮೈದಾನ ರಚನೆಗೆ ಅನುದಾನ ಹಾಗೂ ಡೆಸ್ಕ್ ಮತ್ತು ಬೆಂಚ್ ವಿತರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಅರುಣಾ, ಮೇಲ್ವಿಚಾರಕ ಧನಂಜಯ್, ಒಕ್ಕೂಟದ ಅಧ್ಯಕ್ಷೆ ಮಂಜುಳಾ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.