ಶಿಡ್ಲಘಟ್ಟದಿಂದ 143 ಚೀಲ ಅಕ್ಕಿ ಸಂಗ್ರಹಿಸಿ ಮಠಕ್ಕೆ ಕಳುಹಿಸಿಕೊಟ್ಟ ಕೈವಾರ ತಾತಯ್ಯನ ಭಕ್ತರು.
ಶಿಡ್ಲಘಟ್ಟ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಶ್ರೀ ಯೋಗಿ ನಾರೇಯಣ ಮಠದಲ್ಲಿ ಜುಲೈ 19 ರ ಶುಕ್ರವಾರದಿಂದ ಆರಂಭಗೊಳ್ಳಲಿರುವ ಮೂರು ದಿನಗಳ ಗುರುಪೂಜಾ ಹಾಗೂ ಸಂಗೀತೋತ್ಸವಕ್ಕೆ ತಾಲೂಕಿನ ತಾತಯ್ಯನವರ ಭಕ್ತರು ನೂರಾರು ಚೀಲದಷ್ಟು ಅಕ್ಕಿ ಸಂಗ್ರಹಿಸಿ ಯೋಗಿ ನಾರೇಯಣ ಮಠಕ್ಕೆ ಗುರುವಾರ ಕಳುಹಿಸಿಕೊಟ್ಟರು.
ಈ ವೇಳೆ ಮಾತನಾಡಿದ ಯೋಗಿ ನಾರೇಯಣ ಮಠದ ಭಕ್ತರು, ಶುಕ್ರವಾರದಿಂದ ಭಾನುವಾರದವರೆಗೂ ಕೈವಾರ ಮಠದಲ್ಲಿ ಸತತ ಮೂರು ದಿನಗಳ ಕಾಲ ಗುರುಪೂಜಾ ಹಾಗೂ ಸಂಗೀತೋತ್ಸವ ನಡೆಯಲಿದ್ದು ಇದರಲ್ಲಿ ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಖ್ಯಾತ ಸಂಗೀತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದರು.
ಮೂರು ದಿನಗಳಲ್ಲಿ ಕೈವಾರ ಯೋಗಿ ನಾರೇಯಣ ಮಠಕ್ಕೆ ಸುಮಾರು 3 ರಿಂದ 4 ಲಕ್ಷ ಮಂದಿ ತಾತಯ್ಯನ ಭಕ್ತರು ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಆಗಮಿಸಲಿದ್ದಾರೆ. 3 ದಿನಗಳ ಕಾಲ ಗುರು ಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಠದಿಂದ ಆಯೋಜಿಸಲಾಗಿದ್ದು ಅದಕ್ಕಾಗಿ ಶಿಡ್ಲಘಟ್ಟ ತಾಲೂಕಿನ ಸಾರ್ವಜನಿಕರು, ರೈತರು, ಭಕ್ತರಿಂದ ಪಕ್ಷಾತೀತವಾಗಿ ಸುಮಾರು 143 ಅಕ್ಕಿ ಮೂಟೆಗಳನ್ನು ಸಂಗ್ರಹಿಸಿ ಕೈವಾರ ಯೋಗಿ ನಾರೇಯಣ ಮಠಕ್ಕೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮುನಿರತ್ನಂ, ಶ್ರೀ ಯೋಗಿ ನಾರೇಯಣ ತಾತಯ್ಯನವರ ಆರಾಧಕರ ಸಮಿತಿ ಅಧ್ಯಕ್ಷ ಬಿ.ಕೆ.ವೇಣು , ಬಲಿಜ ಮುಖಂಡರಾದ ಸೋಮಶೇಖರ್, ವೇಣು, ಅನಂತಕೃಷ್ಣ , ಶ್ರೀನಿವಾಸ್, ಸುಬ್ಬಣ್ಣ , ಡಿಶ್ ಶ್ರೀನಾಥ್ , ಎಸ್ ದೇವಗಾನ ಹಳ್ಳಿಯ ವಿಜಯಕುಮಾರ್ , ಬಿ.ಎನ್.ಎಲ್ ಮಂಜುನಾಥ, ಬಳೆ ರಘು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭಾ ಸದಸ್ಯರಾದ ಅನಿಲ್, ರಘು, ಯಾದವ ಸಂಘದ ಹಿರಿಯ ಮುಖಂಡ ರಾಮಕೃಷ್ಣಪ್ಪ ನಾರೇಯಣ ಮಠದ ವೇಣು ಸೇರಿದಂತೆ ಮತ್ತಿತರರು ಹಾಜರಿದ್ದರು.