ಮಹಾಲಕ್ಷ್ಮೀ ಯೋಜನೆಯಿಂದ ದೇಶದಲ್ಲಿರುವ ಬಡ ಮಹಿಳೆಯರ ಬ್ಯಾಂಕ್ ಖಾತೆಗೆ ಜುಲೈ 5ರಂದು 8,500 ರೂಪಾಯಿ ಜಮೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ವಾರ್ಷಿಕವಾಗಿ ಬಡ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ನೀಡುವ ಮಹಾಲಕ್ಷ್ಮೀ ಯೋಜನೆಯ ಪ್ರಕ್ರಿಯೆ ಯಾವ ರೀತಿ ನಡೆಯಲಿದೆ ಎಂದು ಸಂಪೂರ್ಣವಾಗಿ ವಿವರಿಸಿದರು.
ದೇಶದಲ್ಲಿರುವ ಬಡವರ ಪಟ್ಟಿಯನ್ನು ಸಿದ್ದಪಡಿಸಲಾಗುವುದು. ಪ್ರತಿ ಬಡ ಕುಟುಂಬದಿಂದ ಮಹಿಳೆಯ ಹೆಸರನ್ನು ಆಯ್ಕೆ ಮಾಡಲಾಗುವುದು. ಜುಲೈ 5ರಂದು ದೇಶದ ಕೋಟಿಗಟ್ಟಲೆ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ರೂಪಾಯಿ ಮೊತ್ತವನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಯೋಜನೆಯ ಮೊತ್ತವನ್ನು ನಾವು ಜಮೆ ಮಾಡಿದಾಗ ಭಾರತದ ಮಾಧ್ಯಮಗಳು ‘ಇಂಡಿಯಾ ಒಕ್ಕೂಟ ಬಡವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಅವರನ್ನು ಹಾಳು ಮಾಡುತ್ತಿದೆ’ ಎಂದು ಹೇಳಬಹುದು. ಮಾಧ್ಯಮಗಳು ಹೆಚ್ಚು ಮಾತನಾಡಿದರೆ ನಾವು ಈ ಮೊತ್ತವನ್ನು ಡಬಲ್ ಮಾಡುತ್ತೇವೆ ಎಂದು ಪ್ರತ್ಯುತ್ತರ ನೀಡುತ್ತೇವೆ ಎಂದರು.