Tuesday, January 14, 2025
Homeಜಿಲ್ಲೆಸಾರ್ವಜನಿಕರು ಗ್ರಾಹಕ ಹಕ್ಕುಗಳ ಅರಿವು ಹೊಂದಬೇಕು: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ.

ಸಾರ್ವಜನಿಕರು ಗ್ರಾಹಕ ಹಕ್ಕುಗಳ ಅರಿವು ಹೊಂದಬೇಕು: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ.

‘ಸಂವಿಧಾನ ಶಕ್ತಿ ನ್ಯೂಸ್ ‘ ಚಿಕ್ಕಬಳ್ಳಾಪುರ : ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾರುಕಟ್ಟೆ ಅಥವಾ ಖರೀದಿ ಸ್ಥಳದಲ್ಲಿ ಉಂಟಾಗುವ ಅನ್ಯಾಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಚಿಕ್ಕಬಳ್ಳಾಪುರ ಇವರ ಸಂಯ್ತುಕ್ತಾಶ್ರಯದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ”ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ವಾಣಿಜ್ಯ ವ್ಯಾಪಾರ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸುವ ವೇಳೆ ವಸ್ತುಗಳ ಗುಣಮಟ್ಟ ಹಾಗೂ ಪ್ರಮಾಣ ಸೇರಿದಂತೆ ಆ ವಸ್ತುವಿನ ಬಳಕೆಯ ಕುರಿತಾಗಿ ಎಲ್ಲ ಮಾಹಿತಿ ತಿಳಿದುಕೊಳ್ಳಬೇಕು. ಯಾವುದೇ ವಸ್ತುವನ್ನು ಹಾಗೂ ಸೇವೆಯನ್ನು ಖರೀಧಿಸುವಾಗ ಅವುಗಳ ಮಾರಾಟಗಾರರಿಂದ ಮಾಹಿತಿಯನ್ನು ಪಡೆಯುವ ಹಕ್ಕು ಗ್ರಾಹಕರಿಗೆ ಇರುತ್ತದೆ ಎಂದು ತಿಳಿಸಿದರು.

ಇವತ್ತಿನ ದಿನಮಾನಗಳಲ್ಲಿ ಬಹುತೇಕರು ಸರಕು,ಸೇವೆ, ಇನ್ನಿತರ ವ್ಯವಹಾರಗಳಿಗೆ ಆನ್ ಲೈನ್ ಬುಕ್ಕಿಂಗ್ ಗೆ ಮೊರೆ ಹೋಗುತ್ತಿದ್ದಾರೆ,ಆನ್ ಲೈನ್ ವ್ಯವಹಾರಗಳ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಉಪಯೋಗಗಳಷ್ಟೇ ಅಪಾಯಗಳು ಜಾಸ್ತಿ ಇವೆ. ಅಸಲಿ ವೆಬ್ ಸೈಟ್ ಗಳ ರೀತಿ ನಕಲಿ ವೆಬ್ ಸೈಟ್ ಗಳ ಮೂಲಕ ವಂಚಕರು ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣಗಳ ಅಸಲಿಯತ್ತನ್ನ ಖಾತ್ರಿಪಡಿಸಿಕೊಳ್ಳಬೇಕು, ಜೊತೆಗೆ ಅಲ್ಲಿರುವ ವ್ಯವಹಾರದ ಸೂಚನೆಗಳನ್ನು ತಿಳಿದುಕೊಳ್ಳದೇ ವ್ಯವಹರಿಸುವುದು ಬೇಡ, ಆನ್ ಲೈನ್ ರೂಪದಲ್ಲಾಗಲಿ, ಭೌತಿಕವಾಗಿ ಆಗಲಿ ಸರಕು, ಸೇವೆ ಹಾಗೂ ಆಸ್ತಿಗಳನ್ನು ವೈಯಕ್ತಿಕ ಉಪಯೋಗಕ್ಕೆ ಖರೀದಿಸುವಾಗ ಮೋಸ ಹೋಗದಿರಲು ಎಚ್ಚರಿಕೆ ವಹಿಸಬೇಕು ಪ್ರತಿ ವ್ಯವಹಾರಕ್ಕೆ ದಾಖಲೆಗಳನ್ನು, ರಶೀದಿಗಳನ್ನು ಪಡೆದು ಸಂಗ್ರಹಿಸಿಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು,ಒಂದು ವೇಳೆ ಮೋಸವಾದಲ್ಲಿ ನ್ಯಾಯ ಪಡೆಯಲು ಹಿಂಜರಿಯಬಾರದು. ಸೂಕ್ತ ಸಕ್ಷಮ ಪ್ರಾಧಿಕಾರಗಳನ್ನು ಮತ್ತು ನ್ಯಾಯಾಲಯಗಳನ್ನು ಸಂಪರ್ಕಿಸಿ ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಬೇಕು, ಎಲ್ಲರೂ ಈ ಅಭಿರುಚಿ ಬೆಳೆಸಿಕೊಂಡರೆ ಗ್ರಾಹಕರಿಗೆ ಮೋಸಮಾಡುವ ಪ್ರಕರಣಗಳು ತಂತಾನೆ ನಿಯಂತ್ರಣ ಆಗಲಿವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮಾತನಾಡಿ ಪ್ರತಿಯೊಬ್ಬರು ಒಂದು ಚಿಕ್ಕ ವ್ಯವಹಾರಕ್ಕೂ ಡಿಜಿಟಲ್ ಮೂಲಕವೇ ಹಣವನ್ನು ಪಾವತಿ ಮಾಡುತ್ತಿದ್ದಾರೆ. ನಮ್ಮ ಖಾತೆಗಳಲ್ಲಿ ಎಷ್ಟು ಹಣ ಇದೆ ಎಷ್ಟು ಖರ್ಚು ಮಾಡಿದ್ದೇವೆ ಎಂಬುದನ್ನು ಡಿಜಿಟಲ್ ಮೂಲಕವೇ ಮಾಹಿತಿ ಪಡೆಯಬಹುದು. ಗ್ರಾಹಕರಿಗೆ ಹೆಚ್ಚಿನ ಮಟ್ಟದಲ್ಲಿ ವ್ಯವಹರಿಸಲು ಡಿಜಿಟಲ್ ಸುಲಭವಾಗಿದೆ. ಮಾರಾಟ ಮಾಡುವ ಗ್ರಾಹಕರಿಗೆ ಅಳತೆಯಲ್ಲಾಗಲಿ, ಪರಿಮಾಣಗಳಲ್ಲಿ ವ್ಯತ್ಯಾಸಗಳು ಆಗದ ರೀತಿಯಲ್ಲಿ ನ್ಯಾಯಬದ್ದವಾಗಿ ಒದಗಿಸಬೇಕು. ಗ್ರಾಹಕರು ಹಣ ಕೊಟ್ಟು ಯಾವುದೇ ಸರಕು ಸಾಮಾಗ್ರಿಗಳ ಮಾರಾಟ ಹಾಗೂ ಖರೀದಿಯ ವೇಳೆ ಗ್ರಾಹಕರು ಯಾವುದೇ ವಂಚನೆ ಗೊಳಗಾಗಬಾರದು ಎಂದರೆ ನಾವು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಮಾರುಕಟ್ಟೆಯು ಕೆಲವು ನೈತಿಕತೆಗಳು ಹಾಗೂ ಮೌಲ್ಯಗಳ ಮೇಲೆ ನಡೆಯಬೇಕು. “ಗ್ರಾಹಕ ನ್ಯಾಯಕ್ಕೆ ವರ್ಚುವಲ್ ವಿಚಾರಣೆ ಮತ್ತು ಡಿಜಿಟಲ್ ಪ್ರವೇಶ” ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿದಿನ ಒಂದಲ್ಲ ಒಂದು ಸರಕು, ಸೇವೆ, ಆಸ್ತಿಯನ್ನು ನಾವೆಲ್ಲರೂ ಖರೀದಿಸುತ್ತಿರುತ್ತೇವೆ. ಅದೇ ರೀತಿ ಒಮ್ಮೊಮ್ಮೆ ವ್ಯವಹಾರದಲ್ಲಿ ಮೋಸಕ್ಕೂ ಒಳಗಾಗುತ್ತಿದ್ದೇವೆ ಅಂತಹ ಮೊಸವನ್ನು ಸಹಿಸದೆ ನ್ಯಾಯ ಪಡೆಯಬೇಕು. ಮಾಹಿತಿಯ ಕೊರತೆ, ಸಮಯದ ಅಭಾವ, ಅಥವಾ ನಿರ್ಲಕ್ಷತೆಯ ಕಾರಣದಿಂದ ಗ್ರಾಹಕರು ಮೋಸ ಹೋದರೂ ನ್ಯಾಯ ಪಡೆಯಲು ಪ್ರಯತ್ನಿಸದಿರುವುದು ಕೆಲವರಲ್ಲಿ ಕಂಡು ಬರುತ್ತಿದೆ,ಆ ಪ್ರವೃತ್ತಿ ಒಳ್ಳೆಯದಲ್ಲ. ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ 50 ಲಕ್ಷದವರೆಗಿನ ಮೋಸದ ಪ್ರಕರಣಗಳಿಗೆ ನ್ಯಾಯ ಕೋರಿ ಅರ್ಜಿ ಹಾಕಿಕೊಳ್ಳಬಹುದು, ಮಾಹಿತಿ ಕೊರತೆ ಇದ್ದರೆ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಸಂಪರ್ಕಿಸಿ ಸಹಾಯ ಪಡೆಯಬಹುದು. ಒಟ್ಟಾರೆ ಯಾವುದೇ ವ್ಯವಹಾರದಲ್ಲಿ ಮೋಸ ಹೋಗದಿರುವಂತೆ ಎಚ್ಚರವಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎನ್. ಕುಮಾರ್ ಅವರು ಮಾತನಾಡಿ, ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ಈ ದಿನದ ಉದ್ದೇಶ “ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವುದು ಹೇಗೆ ಎಂಬ ಗುರಿ ಹೊಂದಿದೆ. ವ್ಯಾಪಾರ ಪದ್ಧತಿಗಳಲ್ಲಿನ ಅನ್ಯಾಯದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇದು ಗ್ರಾಹಕರಿಗೆ ಶಿಕ್ಷಣ ನೀಡುತ್ತದೆ. ಗ್ರಾಹಕರಿಗೆ ಯಾವುದೇ ಅನ್ಯಾಯವಾದಲ್ಲಿ ನೀವು ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ನಿಮಗಾದ ಅನ್ಯಾಯಕ್ಕೆ ನ್ಯಾಯ ಹಾಗೂ ಪರಿಹಾರ ಕೇಳಬಹುದು ಎಂದರು.

ಕಾರ್ಯಕ್ರಮದಲ್ಲಿ ಗ್ರಾಹಕರ ಜಾಗೃತಿಗಾಗಿ ಕರಪತ್ರಗಳು ಹಾಗೂ ಬಿತ್ತಿ ಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ಕೆಳಗಿನಮನಿ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!