ಶಿಡ್ಲಘಟ್ಟ: ರೈತರಿಂದ ರೇಷ್ಮೆ ಗೂಡು ಖರೀದಿ ನೆಪದಲ್ಲಿ ಕೆಲವು ವ್ಯಕ್ತಿಗಳು ರೈತರಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ಕೊಡುವುದಾಗಿ ಚೆಕ್ ಅಥವಾ ಪೋನ್ ಪೇ, ಗೂಗಲ್ ಮೂಲಕ ಅಲ್ಪ- ಸ್ವಲ್ಪ ಹಣ ನೀಡಿ ಬಾಕಿ ಹಣವನ್ನು ನೀಡುವುದಾಗಿ ನಂಬಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರೈತರು ಬೆಳೆದ ರೇಷ್ಮೆ ಗೂಡನ್ನು ಸರ್ಕಾರಿ ರೇಷ್ಮೇ ಗೂಡು ಮಾರುಕಟ್ಟೆಯಲ್ಲಿ ಮಾತ್ರ ಮಾಡಿ ಮೋಸ ಹೋಗದಂತೆ ಎಚ್ಚರವಹಿಸಬೇಕು ಎಂದು ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವೇಣುಗೋಪಾಲ್ ಸಲಹೆ ನೀಡಿದರು.
ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯ ಬಳಿ ಪೊಲೀಸ್ ಇಲಾಖೆಯಿಂದ ರೈತರು ಹಾಗೂ ರೀಲರುಗಳೊಂದಿಗೆ ಮಾತನಾಡಿದ ಅವರು ರೈತರು ಮೋಸ ಹೋಗದಂತೆ ಎಚ್ಚರವಹಿಸಬೇಕು. ಕಷ್ಟ ಪಟ್ಟು ಕೃಷಿ ಮಾಡಿ ತೋಟದಲ್ಲಿ ಹಾವು, ಚೇಳು ಇವೆಲ್ಲಾ ತಪ್ಪಿಸಿಕೊಂಡು ಬೆಳೆಗಳಿಗೆ ನೀರು ಹರಿಸಿ ಬೆಳೆಗಳು ಬೆಳೆಯುತ್ತಾರೆ. ಇತ್ತೀಚೆಗೆ ಕೆಲವು ರೈತರು ರೇಷ್ಮೆ ಗೂಡನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡದೆ ಮಾರುಕಟ್ಟೆಯ ಹೊರಗಡೆ ಗೇಟ್ ಗಳ ಬಳಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಮೋಸ ಹೋಗುತ್ತಿದ್ದಾರೆ. ಮಾರುಕಟ್ಟೆ ಧರಕ್ಕಿಂತ 30-40 ರೂಪಾಯಿಗಳು ಹೆಚ್ಚಿನ ಬೆಲೆ ಖರೀದಿಸಿ ಅಲ್ಪ – ಸ್ಬಲ್ಪ ಹಣವನ್ನ ಪೋನ್ ಪೇ, ಗೂಗಲ್ ಪೇ ಮೂಲಕ ನೀಡಿ ಉಳಿದ ಹಣವನ್ನು ಚೆಕ್ ಮೂಲಕ ನೀಡುತ್ತಾರೆ. ಆದರೆ ಆ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ. ರೈತರು ಮೋಸ ಹೋಗುತ್ತಿದ್ದಾರೆ. ಈಗಾಗಲೇ ಕೆಲವು ವಂಚಕರ ಪೊಲೀಸರು ಪತ್ತೆ ಅಂತಹವರ ವಿರುದ್ದ ಪ್ರಕರಣಗಳು ದಾಖಲಿಸಿ ರೌಡಿ ಶಿಟ್ ತೆರೆಯಲಾಗಿದೆ.ಜೊತೆಗೆ ಎಂ.ಓ.ಬಿ ತೆರೆಯಲಾಗಿದೆ. ಈಗ ನಗರ ಪೊಲೀಸ್ ಠಾಣೆಯಿಂದ ಹೊರವಲಯದ ಬಳಿ ಆನೂರು, ಹಿತ್ತಲಹಳ್ಳಿ ಗೇಟ್ ಗಳ ಬಳಿಯೇ ರೈತರಿಂದ ಖರೀದಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರನ್ನ ಕಂಡ ಕೂಡಲೇ ಅಲ್ಲಿಂದ ಓಡುತ್ತಿದ್ದಾರೆ. ಹಾಗಾಗಿ ರೈತರು ತಾವು ಬೆಳೆದ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಬಂದು ಮಾರಾಟ ಮಾಡಿದರೆ. ಮಾರುಕಟ್ಟೆಯಲ್ಲಿ ರೀಲರುಗಳು ಗೂಡನ್ನು ಖರೀದಿ ಮಾಡುತ್ತಾರೆ. ತಮ್ಮ ಹಣ ಕೈಗೆ ಬರುತ್ತದೆ. ಇದರಿಂದ ರೈತರು ವಂಚನೆಯಾಗುವುದಕ್ಕೆ ಸಾಧ್ಯವಿಲ್ಲ ಎಂದರು.
ರೇಷ್ಮೆ ಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕರಾದ ತಿಮ್ಮರಾಜು ಅವರು ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಮಾಡಿದೆ. ರೇಷ್ಮೇ ಗೂಡು ಮಾರುಕಟ್ಟೆಯಲ್ಲಿ ಇ- ಹರಾಜು ವ್ಯವಸ್ಥೆ ಇದೆ. ರೈತರು ಮತ್ತು ರೀಲರುಗಳು ಮಾರುಕಟ್ಟೆಯ ಮೂಲಕ ವಹಿವಾಟು ನಡೆಸಿದಾಗ ಮಾರುಕಟ್ಟೆಯಿಂದ ರಶೀದಿಗಳು ಸಿಗುವುದರ ಜೊತೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಸಿಗಲಿದೆ. ಮಾರುಕಟ್ಟೆಯಲ್ಲಿ ಯಾವ ರೈತರಿಗೂ ವಂಚನೆಯಾಗುವುದಕ್ಕೆ ಅವಕಾಶಗಳು ಇರುವುದಿಲ್ಲ. ಪ್ರತಿನಿತ್ಯ 550-600 ಲಾಟ್ ಗಳಷ್ಟು ರೇಷ್ಮೇ ಗೂಡುಗಳು ಮಾರುಕಟ್ಟೆಗೆ ಬರುತ್ತಿವೆ. ಸದ್ಯದ ವಾತಾವರಣದಲ್ಲಿ ರೇಷ್ಮೆ ಗೂಡಿನ ಬೆಲೆ ಇಳಿಕೆಯಾಗಿದ್ದು, ಬಿಸಿಲು ವಾತಾವರಣ ಬಂದರೆ ಗೂಡು ಚೆನ್ನಾಗಿ ಬಿಚ್ಚಾಣಿಕೆ ಬರುತ್ತದೆ. ಬೆಲೆಯೂ ಹೆಚ್ಚಾಗುತ್ತದೆ. ರೈತರು ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಬಂದು ಮಾರಾಟ ಮಾಡಿದರೆ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ತಿಳಿಸಿದರು.
ರೇಷ್ಮೇ ಗೂಡು ಮಾರುಕಟ್ಟೆ ಉಪ ನಿರ್ದೇಶಕರಾದ ಮಹದೇವಯ್ಯ ಅವರು ಮಾತನಾಡಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಾರುಕಟ್ಟೆಯ ಬಳಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಜೊತೆಗೆ ಈ ಹಿಂದೆ ಮಾರುಕಟ್ಟೆಯಲ್ಲೆ ರೇಷ್ಮೆ ಗೂಡು ಮಾರಾಟ ಮಾಡಬೇಕೆಂಬ ನಿಯಮ ಕಡ್ಡಾಯವಾಗಿತ್ತು. ಕೇಂದ್ರ ಸರ್ಕಾರ ಇದನ್ನು ಸಡಿಲಗೊಳಿಸಿದ್ದರಿಂದ ರೈತರು ಎಲ್ಲಿ ಬೇಕಾದರು ರೇಷ್ಮೆ ಗೂಡು ಮಾರಾಟ ಮಾಡಲು ಅವಕಾಶ ಇದೆ. ಆದರೆ ಮಾರುಕಟ್ಟೆಯಿಂದ ಹೊರಗಡೆ ನಡೆಯುವ ಈ ರೀತಿಯ ವ್ಯವಹಾರದಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ರೈತರು ಮಾರುಕಟ್ಟೆಯಲ್ಲೆ ರೇಷ್ಮೆ ಗೂಡನ್ನು ಮಾರಾಟ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಪೊಲೀಸ್ ಸಿಬ್ಬಂದಿಗಳಾದ ಅಶ್ವಥ್, ನಾರಾಯಣ್, ಶಶಿಕುಮಾರ್, ರಾಜೇಶ್, ಸೇರಿದಂತೆ ಇತರರು ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ