ಕೆರೆ, ಕುಂಟೆ, ಗೋಮಾಳ ಒತ್ತುವರಿ ತೆರವಿಗೆ ಅಗ್ರಹ.
ಶಿಡ್ಲಘಟ್ಟ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿಯೆಂದು ನಮೂದಿಸಿರುವುದನ್ನ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ರಾಜ್ಯ ಉಪಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಸರ್ಕಾರದ ವಿರುದ್ದ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಬೆಳ್ಳೂಟಿ ಮುನಿಕೆಂಪಣ್ಣ ಮಾತನಾಡಿ ರೈತ ದೇಶಕ್ಕೆ ಅನ್ನ ಹಾಕುವವನು ಅದೇ ರೀತಿ ದೇಶವನ್ನು ರಕ್ಷಣೆ ಮಾಡುವುದು ಸೈನಿಕರು ಯಾವುದೇ ಸರ್ಕಾರಗಳು ಮೊದಲು ರೈತರು ಮತ್ತು ಸೈನಿಕರಿಗೆ ಆದ್ಯತೆ ನೀಡಬೇಕು. ರಾಜ್ಯದ ಕೆಲವು ಜಿಲ್ಲೆಗಳ ರೈತರ ಪಹಣಿ ಕಾಲಂ 9 ರಲ್ಲಿ ವಕ್ಫ್ ಬೋರ್ಡ್ ಆಸ್ತಿಯೆಂದು ನಮೂದಾಗಿರುತ್ತದೆ 2 ಸಾವಿರ ಎಕರೆಯಿದ್ದ ವಕ್ಫ್ ಆಸ್ತಿ ಪ್ರಸ್ತುತ 9 ಲಕ್ಷ ಎಕರೆಯಾಗಿದೆ ಎಂದರೆ ಇದನ್ನು ಮಾಡಿದವರು ಯಾರು? ಈ ಬಗ್ಗೆ ಪರಿಶೀಲಿಸಬೇಕು.
ಈಗಾಗಲೇ ಜಿಲ್ಲೆಯಲ್ಲಿ ಯಾವುದೇ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿಯಾಗಿಲ್ಲವೆಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ನೀಡಿದ್ದಾರೆ. ಆದರೆ ಚಿಂತಾಮಣಿ, ಕೋಲಾರದಲ್ಲಿ ಪ್ರಾರಂಭವಾಗಿದೆ. ಹಾಗೂ ಗೌರಿಬಿದನೂರು ತಾಲೂಕಿನ 4 – 5 ಪಹಣಿಗಳಲ್ಲಿ ಈಗಾಗಲೇ ವಕ್ಫ್ ಎಂದು ನಮೂದಾಗಿದೆ. ರಾಜ್ಯದಲ್ಲಿ ಬೈ ಎಲೆಕ್ಷನ್ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಸರ್ಕಾರ ಮಾಡುತ್ತಿದೆ.
ಸರ್ಕಾರ ಕೂಡಲೇ ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಆಸ್ತಿ ಹೆಸರನ್ನು ತೆರವುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನ ರೂಪಿಸಲಾಗುತ್ತದೆ ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದು ಖಂಡನೀಯವಾದದ್ದು, ಈಗಾಗಲೇ ಸರ್ಕಾರ ವಕ್ಫ್ ಆಸ್ತಿಯ ಹೆಸರನ್ನು ತೆಗೆಯುವುದಾಗಿ ಹೇಳಿದೆ. ಇದನ್ನು ಕಾರ್ಯರೂಪಕ್ಕೆ ತರಬೇಕು. ಜೊತೆಗೆ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ 2823 ಎಕರೆ ಜಮೀನು ಸರ್ಕಾರಿ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಮೂಲಕ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶದಲ್ಲಿ ನೀರಾವರಿ, ಬೋರ್ ವೆಲ್,ಹೊಂದಿರುವ ಕೃಷಿ ಭೂಮಿಯನ್ನು ಕೈ ಬಿಡಬೇಕು. ಸರ್ಕಾರಿ ಜಮೀನು , ಬಂಜರು ಭೂಮಿಯಲ್ಲಿ ಕೈಗಾರಿಕೆ ಕಂಪನಿಗಳು ಸ್ಥಾಪನೆ ಮಾಡಬೇಕು. ಭೂಮಿ ನೀಡುವ ರೈತರ ಕುಟುಂಬಕ್ಕೆ ಒಂದು ಉದ್ಯೋಗ ನೀಡಲು ಕ್ರಮ ವಹಿಸಬೇಕು ಎಂದರು.
ಕೆರೆ, ಕುಂಟೆ, ಗೋಮಾಳ ಒತ್ತುವರಿ ತೆರವಿಗೆ ಅಗ್ರಹ: ಗೌಡನಕೆರೆಯಲ್ಲಿರುವ ಜಾಲಿ ಮರಗಳು ಕಟಾವು ಮಾಡಿ ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಯನ್ನ ತೆರವುಗೊಳಿಸಬೇಕು. ಜೊತೆಗೆ ತಾಲ್ಲೂಕಿನ ಅರಿಕೆರೆ ಗ್ರಾಮದ ಕೊಲಿಮಿ ಹೊಸೂರು ಕೆರೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ತಾಲ್ಲೂಕು ಆಡಳಿತ ವ್ಯಾಪ್ತಿಗೆ ಬರುವುದರಿಂದ ತಕ್ಷಣವೇ ಕ್ರಮವಹಿಸಬೇಕು ಎಂದು ಅಗ್ರಹಿಸಿದರು.
ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಗ್ರೇಡ್ -2 ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ರೈತರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಹಂತದಲ್ಲಿ ಆಗುವ ಕೆಲಸವನ್ನು ತಹಶೀಲ್ದಾರ್ ಅವರ ಗಮನಕ್ಕೆ ತಂದು ಕ್ರಮವಹಿಸಲಾಗುವುದು. ಸರ್ಕಾರಕ್ಕೆ ತಲುಪಿಸುವ ಮನವಿಯನ್ನ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ರೈತ ಮುಖಂಡರಾದ ಆಂಜಿನಪ್ಪ, ಹೆಚ್.ಎನ್ ಕದಿರೇಗೌಡ, ಕೆ.ಎನ್ ಮಂಜುನಾಥ್, ಶ್ರೀನಿವಾಸ್, ಮುನಿಯಪ್ಪ, ನಾರಾಯಣಸ್ವಾಮಿ, ಎಂ. ಚಕ್ಕಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ