ಸಂಸದ ಅನಂತಕುಮಾರ್ ಹೆಗ್ಗಡೆ ಪ್ರತಿಕೃತಿ ದಹಿಸಿ ಸಮತಾ ಸೈನಿಕ ದಳ ಪ್ರತಿಭಟನೆ.
ಶಿಡ್ಲಘಟ್ಟ : ಸಂಸದ ಅನಂತ್ ಕುಮಾರ್ ಹೆಗ್ಗಡೆ ಪದೇ ಪದೇ ನಾವು ಬಂದಿರೋದೆ ಸಂವಿಧಾನ ಬದಲಾಯಿಸುವುದಕ್ಕೆ ಎಂಬ ವಿವಾದಾತ್ಮಕ ಹೇಳಿಕೆಗಳು ನೀಡಿ ಈಗಾಗಲೇ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದು ಮತ್ತೊಮ್ಮೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಅಂಬೇಡ್ಕರ್ ಅನುಯಾಯಿಗಳು ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆೆ.
ನಗರದ ಹೃದಯ ಭಾಗ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಇಂದು ಸಮತಾ ಸೈನಿಕ ದಳ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಿ.ಸಿ. ವೆಂಕಟರಮಣಪ್ಪ ರವರ ನೇತೃತ್ವದಲ್ಲಿ ತಾಲ್ಲೂಕು ಸಮತಾ ಸೈನಿಕ ದಳ ಸಮಿತಿ ವತಿಯಿಂದ ನಗರದ ಹೃದಯ ಭಾಗದಲ್ಲಿ ದಲಿತ ಮುಖಂಡರು, ಪದಾಧಿಕಾರಿಗಳು, ಅಂಬೇಡ್ಕರ್ ಅನುಯಾಯಿಗಳು ಸಂಸದ ಅನಂತ್ ಕುಮಾರ್ ಹೆಗ್ಗಡ ಸಂವಿಧಾನ ಬದಲಾವಣೆ ಹೇಳಿಕೆಯನ್ನ ಖಂಡಿಸಿ ಸಂಸದ ಅನಂತಕುಮಾರ್ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯನ್ನ ಉದ್ದೇಶಿಸಿ ಸಮತಾ ಸೈನಿಕ ದಳ ರಾಜ್ಯ ಮಹಾಪ್ರಧಾನಕಾರ್ಯದರ್ಶಿ ಜಿ.ಸಿ. ವೆಂಕಟರಮಣಪ್ಪ ಮಾತನಾಡಿ ಈ ದೇಶ ಹುಚ್ಚರ ಸಂತೆಯಲ್ಲ ನಿಮ್ಮ ಸ್ವಂತ ಆಸ್ತಿಯೂ ಅಲ್ಲ. ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವ 75 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಕೇವಲ ಚುನಾವಣೆ ತೆವಲಿಗಾಗಿ ಬಾಯಿಗೆ ಬಂದಂತೆ ಮಾತನಾಡಬಾರದು. ಸಂವಿಧಾನದ ಮೂಲದಲ್ಲಿಯೇ ಕಾಲಕ್ಕೆ ತಕ್ಕಂತೆ ತಿದ್ದುಪಡಿಗೆ ಅವಕಾಶವಿದೆ. ಅದು ನಿರಂತರವಾಗಿ ನಡೆಯುತ್ತಲೂ ಇದೆ ಆದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುವುದು ದೇಹದ್ರೋಹವಾಗಿದೆ. ಜೊತೆಗೆ ಈ ಮಣ್ಣಿನ ಮೌಲ್ಯಗಳ ಬೆನ್ನಿಗೆ ಚೂರಿ ಹಾಕಿದಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ಮಾದ್ಯಮ ರಂಗ, ಸಂವಿಧಾನದ ನಿಷ್ಟವಾಗಿ ಕೆಲಸ ಮಾಡಿದರೆ ಹೆಚ್ಚು ಅಭಿವೃದ್ದಿ ಸಾಧಿಸಿ ಜನರ ಜೀವನ ಮಟ್ಟ ಸುಧಾರಿಸಲು ಸಾಧ್ಯವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯ, ಸಿಖ್ ಯಾರೇ ಆಗಲೀ ಗೌರವಿಸಬೇಕಾಗಿರುವುದು ಈ ದೇಶದ ಸಂವಿಧಾನವನ್ನು ಎಂದರು.
ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ್ ಹೆಗ್ಗಡೆ ಅವರನ್ನ ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಿ ದೇಶ ದ್ರೋಹದಡಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಕಾರರು ಅಗ್ರಹಿಸಿದರು. ತಹಶೀಲ್ದಾರ್ ಬಿ.ಎನ್ ಸ್ವಾಮಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳ ತಾಲ್ಲೂಕು ಅಧ್ಯಕ್ಷ ಕೆ.ಎಸ್ ಕೃಷ್ಣಮೂರ್ತಿ, ಪ್ರಧಾನಕಾರ್ಯದರ್ಶಿ ವಿಜಯ್ ಕುಮಾರ್, ಗಂಗಾಧರ್, ಮುನಿಆಂಜಿನಪ್ಪ, ಕೃಷ್ಣಪ್ಪ, ಚಾಗೆ ಮುನಿಕೃಷ್ಣಪ್ಪ, ಈಶ್ವರಪ್ಪ, ಸೇರಿದಂತೆ, ಅಂಬೇಡ್ಕರ್ ಅಭಿಮಾನಿಗಳು, ದಲಿತ ಮುಖಂಡರು ಭಾಗವಹಿಸಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್