ಶಿಡ್ಲಘಟ್ಟ : ಮನುಷ್ಯ ಹುಟ್ಟಿದಾಗಿನಿಂದ ಸಾಯುವರೆಗೂ ಪ್ರತಿ ದಿನ, ಪ್ರತಿ ಕ್ಷಣ ಸಾಮೂಹಿಕ ಆಸ್ತಿನಿಂದಲೇ ಜೀವನ ನಡೆಸುತ್ತಿದ್ದರೂ ಸಹ ಅವುಗಳ ರಕ್ಷಣೆ ಮಾಡದೇ ನಾಶಪಡಿಸುತ್ತಾ, ತನ್ನ ಅಂತ್ಯಕ್ಕೆ ತಾನೇ ನಾಂದಿಯಾಗುತ್ತಿದ್ದಾನೆ ಎಂದು ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಜಿಲ್ಲಾ ಮುಖ್ಯಸ್ಥರಾದ ಶ್ರೀರಂಗ ಹೆಗ್ಗಡೆ ಅವರು ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಎಸ್.ಎಲ್ ವಿ ಕಲ್ಯಾಣ ಮಂಟಪದಲ್ಲಿ ಪೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯಿಂದ ಆಯೋಜಿಸಿದ್ದ ಸಾಮೂಹಿಕ ಆಸ್ತಿಗಳ ಸಮುದಾಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ನಂತರ ಮಾತನಾಡಿದರು. ವಿಶ್ವಾದ್ಯಂತ “ವಿಶ್ವ ಸಾಮೂಹಿಕ ಆಸ್ತಿಗಳ ಸಪ್ತಾಹ” ಡಿಸೆಂಬರ್ 04 ರಿಂದ 10 ರ ವರೆಗೆ ನಡೆಯುತ್ತದೆ. ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ರಾಜಕಾಲುವೆ, ಪೋಷಕ ಕಾಲುವೆ, ಅರಣ್ಯ, ಸ್ಮಶಾನ ಮುಂತಾದವುಗಳನ್ನು ಸಂರಕ್ಷಣೆ, ಅಭಿವೃದ್ಧಿ ಪಡಿಸುವುದು ಹಾಗೂ ನಿರ್ವಹಣೆಯ ಕುರಿತು ತಿಳುವಳಿಕೆ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಸಾಮೂಹಿಕ ಆಸ್ತಿಗಳ ನಾಶವನ್ನು ಉಳಿಸಲು ಮತ್ತು ಇವುಗಳ ಮಹತ್ವವನ್ನು ಅರಿಯಲು 1989ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ “ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಕಾಮನ್ಸ್” ರಚನೆ ಆಗಿದ್ದು, 2018 ರಿಂದ ಪ್ರತಿ ವರ್ಷ ವಿಶ್ವ ಸಾಮೂಹಿಕ ಆಸ್ತಿಗಳ ಸಪ್ತಾಹಕವನ್ನು ಒಂದು ವಾರಗಳ ಕಾಲ ಆಚರಣೆ ಮಾಡಲಾಗುತ್ತಿದೆ. ಈ ಸಾಮೂಹಿಕ ಆಸ್ತಿಗಳನ್ನು ಉಳಿಸಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚನೆ ಮಾಡಿ ಕರ್ನಾಟಕ ಪಂಚಾಯ್ತ್ ರಾಜ್ ಕಾಯ್ದೆ 1993 ಪ್ರಕರಣ 61 (ಎ) ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಉಪ ಸಮಿತಿಗಳಾಗಿ ಮಾನ್ಯತೆಯನ್ನು ಪಡೆಯಲಾಗಿದೆ. ಇದರ ಜೊತೆಗೆ ಕೆಪಿಆರ್ ಆಕ್ಟ್ 1993 ಪ್ರಕರಣ 58 ಪ್ಯಾರಾ 31ರಲ್ಲಿ ನಮೂದಿಸಿರುವಂತೆ ಗ್ರಾಮೀಣ ಭಾಗದ ಸಾಮೂಹಿಕ ಆಸ್ತಿಗಳನ್ನು ಗ್ರಾ.ಪಂ. ಯ ಆಸ್ತಿ ವಹಿಯಲ್ಲಿ ನಮೂದಿಸಿ ಈ ಆಸ್ತಿಗಳನ್ನು ಉಳಿಸಿ ಅಭಿವೃದ್ದಿ ಪಡಿಸುವ ಗುರುತರವಾದ ಜವಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಬೆಳ್ಳೂಟಿ ಶಾಲಾ ಮಕ್ಕಳು ಪರಿಸರ ಗೀತೆ ಮತ್ತು ನೃತ್ಯವನ್ನು ಮಾಡಿ ರಂಜಿಸಿದರು. ಆನೂರು ಗ್ರಾ.ಪಂ. ನೂತನ ಸದಸ್ಯರಾದ ವರಲಕ್ಷ್ಮಿ ಸಂತೋಷ್ ರವರಿಂದ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಪರಿಕರಗಳನ್ನು ವಿತರಿಸಿದರು. ಎಫ್. ಇ ಎಸ್ ಸಂಸ್ಥೆಯ ಎನ್ ರಮೇಶ್ ರವರು ಮಾತನಾಡಿ ಸಾಮೂಹಿಕ ಆಸ್ತಿಗಳನ್ನು ಉಳಿಸುವಲ್ಲಿ ಮತ್ತು ಪರಿಸರ ಸಂರಕ್ಷಣೆ ಕಾರ್ಯಗಳನ್ನು ಮಾಡುವಲ್ಲಿ ಬೆಳ್ಳೂಟಿ ಸಂತೋಷ್ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ. ಅವರನ್ನು ನೆನೆಯುವುದು ಮತ್ತು ಅವರ ಆತ್ಮಕ್ಕ ಶಾಂತಿಯನ್ನು ಕೋರುವುದು ನಮ್ಮ ಧರ್ಮ ಎಂದು ಸಂತೋಷ್ ರವರನ್ನು ನೆನದು ಬಾವುಕರಾದರು.
ರಾಜ್ಯದ ಗೌರವಾನ್ವಿತ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ರವರ ನಿಧನ ಹಿನ್ನೆಲೆ ಕಾರ್ಯಕ್ರಮದಲ್ಲಿ ಗೌರವ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಕುಂದಲಗುರ್ಕಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ, ಮಳ್ಳೂರು ಗ್ರಾ ಪಂ.ಅಧ್ಯಕ್ಷರಾದ ಚಂದ್ರಕಲಾ, ಜನ ಪರ ಪೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಶಶಿರಾಜ್ ಹರತಲೆ, ಕಲಾವಿದರಾದ ಜಿ ಮುನಿರೆಡ್ಡಿ, ಚಂದ್ರು, ಮುನಿರಾಜ್, ಎಫ್ಇಎಸ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ನಿಖತ್ ಪರ್ವೀನ್, ಉತ್ತನ್ನ, ಸಿ ಸೌಭಾಗ್ಯ, ಎಸ್ ಜಿ ಗೋಪಿ, ಲೀಲಾವತಿ, ವೈ ಎನ್ ನರಸಿಂಹಪ್ಪ, ಸೇರಿದಂತೆ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು