ಕಾರ್ಮಿಕ ಇಲಾಖೆಯ ಹಗರಣ ಖಂಡಿಸಿ ಹೋರಾಟದ ಎಚ್ಚರಿಕೆ.!
ಶಿಡ್ಲಘಟ್ಟ : ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣಗಳ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಕಾರ್ಮಿಕ ಮಂಡಳಿಯಿಂದ ಹಿಂದಿನ ವರ್ಷದಂತೆ ಈ ಬಾರಿಯೂ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯುತ್ತಿದ್ದು, ಇದರಿಂದ ಕಾರ್ಮಿಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಕೇವಲ ಏಜೆನ್ಸಿಗಳು ಕಾರ್ಮಿಕರ ಅನುಧಾನ ಲೂಟಿ ಹಡೆಯಲಾಗುತ್ತಿದೆ ಎಂದು ಮರಗೆಲಸ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರದೀಪ್ (ದೀಪು) ಆರೋಪಿಸಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ತಾಲ್ಲೂಕು ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣಗಳ ಕಾರ್ಮಿಕರು ಹಾಗೂ ಮರಗೆಲಸ ಕಾರ್ಮಿಕರ ಸಹಯೋಗದೊಂದಿಗೆ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು. ಕಾರ್ಮಿಕರ ಆರೋಗ್ಯ ತಪಾಸಣೆ ನೆಪದಲ್ಲಿ ಕಾರ್ಮಿಕರ ಹಣ ದುರುಪಯೋಗವಾಗುತ್ತಿದೆ. ಕಾರ್ಮಿಕ ಕಾರ್ಡು ಹೊಂದಿರುವ ಕುಂಬದ ಎಲ್ಲಾ ಸದಸ್ಯರಿಗೂ ಆರೋಗ್ಯ ತಪಾಸಣೆ ಮಾಡಬೇಕು ಆದರೆ ಮನೆಯಲ್ಲಿ ಒಬ್ಬರಿಗೆ ತಪಾಸಣೆ ಮಾಡಿ ತಲಾ 3000 ದವರೆಗೆ ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯ ತಪಾಸಣೆಯ ಬದಲಿಗೆ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿದರೆ ತುಂಬಾ ಅನುಕೂಲವಾಗಲಿದೆ ಸರ್ಕಾರ ಗಮನಹರಿಸಬೇಕು ಎಂದರು.
ಶ್ರಮಿಕ ಕರ್ನಾಟಕ ರಾಜ್ಯ ಅಸಂಘಟಿತ ಕಟ್ಟಡ ಕಾರ್ಮಿಕರ ರಾಜ್ಯ ಸಂಚಾಲಕರಾದ ಸೀಕಲ್ ಆನಂದ್ ಗೌಡ ಅವರು ಮಾತನಾಡಿ ಸರ್ಕಾರದಿಂದ ಕಾರ್ಮಿಕರಿಗೆ ಸಿಗುವ ಸೌಲತ್ತುಗಳು ಸಿಗಬೇಕು. ಏಜೆನ್ಸಿಗಳು ದಲ್ಲಾಳಿಗಳ ರೀತಿಯಲ್ಲಿ ಕಾರ್ಮಿಕರ ಹಣ ಲೂಟಿ ಹೊಡೆಯುತ್ತಿದ್ದಾರೆ. ಇದರಲ್ಲಿ ಸಚಿವರ ಪಾಲೂ ಇರಬಹುದು. ಕಾರ್ಮಿಕರಲ್ಲದವರು ಸಹ ಇಲಾಖೆಯಿಂದ ಕಾರ್ಡುಗಳು ಪಡೆದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಕಲಿ ಕಾರ್ಡುಗಳನ್ನ ಪತ್ತೆ ಮಾಡಿ ರದ್ದುಗೊಳಿಸಬೇಕು.ಕಾರ್ಮಿಕ ಇಲಾಖೆಯಲ್ಲಿ ದೊಡ್ಡ ಹಣ ನಡೆದಿದೆ ನೈಜ ಕಾರ್ಮಿಕರಿಗೆ ಸೌಲತ್ತುಗಳು ಸಿಗಬೇಕು ಯಾರೂ ಸಹ ಸೌಲಭ್ಯಗಳಿಂದ ವಂಚಿತರಾಗಬಾರದು. ನಾವು ವಿಧಾನಸೌಧಕ್ಕೆ ಬೇಟಿ ನೀಡಿ ಸಚಿವರು, ಸರ್ಕಾರದ ಗಮನಕ್ಕೆ ವಿಷಯವನ್ನ ತರಲಾಗುವುದು ಕಾರ್ಮಿಕ ಇಲಾಖೆಯ ಹಗರಣದ ವಿರುದ್ದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟವನ್ನ ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರಮಿಕ ಕರ್ನಾಟಕ ರಾಜ್ಯ ಅಸಂಘಟಿತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನರೇಶ್, ಕಟ್ಟಡ ಕಾರ್ಮಿಕರ ಸಂಘದ ದ್ಯಾವಪ್ಪ, ಯಾಸಿನ್ ಪಾಷ, ಕಿಶೋರ್, ಲಕ್ಷ್ಮೀಕಾಂತ್, ಕೃಷ್ಣಪ್ಪ, ವೆಂಕಟರೋಣಪ್ಪ, ಅಸಂಘಟಿತ ನೇಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುಳಾ ಎಸ್ , ಶಾರದಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.