ಮೋದಿ – ರಷ್ಯಾ ಅಧ್ಯಕ್ಷ ಪುಟೀನ್ ಮಾತುಕತೆ.!
ಮಾಸ್ಕೊ: ಯುದ್ಧದ ಮೈದಾನದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎದುರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ ಮೋದಿ, ರಾಜತಾಂತ್ರಿಕ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಎರಡು ದಿನ ರಷ್ಯಾ ಭೇಟಿ ಕೈಗೊಂಡಿರುವ ಮೋದಿಯವರು, ತಮ್ಮ ಸಹವರ್ತಿ ವ್ಲಾಡಿಮಿರ್ ಪುಟಿನ್ ಜೊತೆ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಮರುಸ್ಥಾಪಿಸಲು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿರುವುದಾಗಿ ಪ್ರತಿಪಾದಿಸಿದ ಅವರು, ಉಕ್ರೇನ್ ಮತ್ತು ರಷ್ಯಾ ನಡುವಣ ನಡೆಯುತ್ತಿರುವ ಘರ್ಷಣೆಗೆ ಇತಿಶ್ರೀ ಹಾಡಲು ಮತ್ತು ಶಾಂತಿ ಮರು ಸ್ಥಾಪಿಸಲು ಭಾರತ ಕೊಡುಗೆ ನೀಡಲು ಸಿದ್ಧವಿದೆ ಎಂಬ ಭರವಸೆಯನ್ನು ಜಾಗತಿಕ ಸಮುದಾಯಕ್ಕೆ ನೀಡುವುದಾಗಿ ಹೇಳಿದರು.
ಯುವ ಪೀಳಿಗೆ ಉಜ್ವಲ ಭವಿಷ್ಯಕ್ಕಾಗಿ ಶಾಂತಿ ಸ್ಥಾಪನೆ ಅತ್ಯಂತ ಅಗತ್ಯವಾಗಿದೆ ಎಂದು ಒತ್ತಿ ಹೇಳಿದ ಅವರು, ಯುದ್ದ, ಬಾಂಬ್, ಗನ್ ಮತ್ತು ಬುಲೆಟ್‌ಗಳಿಂದ ಶಾಂತಿ ಸ್ಥಾಪಿಸಲು ಆಗವುದಿಲ್ಲ ಎಂದು ಹೇಳಿದರು.ಯುದ್ಧದಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಮಾನವೀಯತೆ ಹೊಂದಿರುವ ಪ್ರತಿಯೊಬ್ಬರಿಗೆ ನಿಜಕ್ಕೂ ನೋವಿನ ಸಂಗತಿ. ಅಮಾಯಕ ಮಕ್ಕಳ ಕೊಲೆ ನಡೆದರೆ, ಅಮಾಯಕ ಮಕ್ಕಳು ಮೃತಪಟ್ಟರೆ, ಹೃದಯ ಕಿತ್ತು ಬರುತ್ತದೆ ಮತ್ತು ಘಾಸಿಯಾಗುತ್ತದೆ ಎಂದರು. ನಿನ್ನೆ ಪುಟಿನ್ ಆವರೊಂದಿಗೆ ನಡೆದ ಮಾತುಕತೆ ವೇಳೆ, ಉಕ್ರೇನ್ ವಿಷಯ ಕುರಿತು ಪರಸ್ಪರ ಅಭಿಪ್ರಾಯ ಹಂಚಿಕೊಂಡವು. ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ನಿರೀಕ್ಷೆಯನ್ನು ಹಂಚಿಕೊಂಡಿದ್ದಾಗಿ ತಿಳಿಸಿದರು.ಇಂಧನ ವಲಯದಲ್ಲಿ ಭಾರತಕ್ಕೆ ರಷ್ಯಾ ನೆರವು ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.
ರಷ್ಯಾದಲ್ಲಿ ಇನ್ನೂ ಎರಡು ಕಾನ್ಸುಲೇಟ್ ಕಚೇರಿಯನ್ನು ಕಜಾನ್ ಮತ್ತು ಯೆಕಟೆರಿನ್ ಬರ್ಗ್‌ಳಲ್ಲಿ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಮಾಸ್ಕೋದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವೊಂದು ಒಳ್ಳೆಯ ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಹೊಸದಾಗಿ ಎರಡು ಕಾನ್ಸುಲೇಟ್ ಕಚೇರಿಗಳನ್ನು ಆರಂಭಿಸಲು ನಿರ್ಧರಿಸಿರುವುದರಿಂದ ಪ್ರಯಾಣ ಮತ್ತು ವ್ಯಾಪಾರದ ದೃಷ್ಟಿಯಿಂದ ಅನುಕೂಲವಾಗಲಿವೆ ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ಭಾರತ ರಷ್ಯಾ ನಡುವಣ ಉತ್ತರ ದಕ್ಷಿಣ ಕಾರಿಡಾರ್ ಮೂಲಕ ಮೊದಲ ಸರಕು ಸಾಗಾಣಿಕೆ ಮಾಡಲಾಗಿದೆ. ಅದೊಂದು ಗಮನಾರ್ಹ ಸಾಧನೆಯಾಗಿತ್ತು. ಭಾರತ ಮತ್ತು ರಷ್ಯಾ ಚೆನ್ನೈ-ವಾಲ್ಟಿಪೋಸ್ಟಾಕ್ ನಡುವೆ ಪೂರ್ವ ಕಾರಿಡಾರ್ ತೆರೆಯಲು ಮುಂದಾಗಿವೆ ಎಂದರು. 21 ನೇ ಶತಮಾನದಲ್ಲಿ ಭಾರತ ವಿಶ್ವ ಬಂಧು ಪಾತ್ರ ನಿರ್ವಹಿಸಲಿವೆ ಎಂದ ಅವರು, 2015 ರಲ್ಲಿ ತಾವು ಮೊದಲ ಬಾರಿಗೆ ರಷ್ಯಾ ಪ್ರವಾಸ ಕೈಗೊಂಡ ವೇಳೆ 21 ಶತಮಾನ ಭಾರತಕ್ಕೆ ಸೇರಿದ್ದಾಗಿರುತ್ತದೆ ಎಂದು ಹೇಳಿದ್ದನ್ನು ಸ್ಮರಿಸಿಕೊಂಡರು. ಭಾರತ ಸಾಮರ್ಥ್ಯವು ಇಡೀ ವಿಶ್ವಕ್ಕೆ ಸ್ಥಿರತೆ ಮತ್ತು ಸಮೃದ್ಧಿಯ ಭರವಸೆ ನೀಡಿದೆ. ಭಾರತವು ವಿಶ್ವದ ಬಹುವಿಧದ ಬೆಳವಣಿಗೆಯ ಆಧಾರಸ್ತಂಭವಾಗಿದೆ. ಭಾರತವು ವಿಶ್ವಶಾಂತಿ ಹಾಗೂ ರಾಜತಾಂತ್ರಿಕ ಮಾತುಗಳನ್ನಾಡಿದಾಗ ಇಡೀ ಜಗತ್ತೆ ಕೇಳಿಕೊಳ್ಳುತ್ತದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಆಹಾರ, ಇಂಧನ ಹಾಗೂ ರಸಗೊಬ್ಬರದ ಕೊರತೆ ಎದುರಾದರೆ ರೈತರು ಯಾವುದೇ ಸಮಸ್ಯೆಗಳಿಗೆ ಸಿಲುಕಬಾರದು. ಅದೇ ರೀತಿ ಭಾರತ – ರಷ್ಯಾ ಮತ್ತು ಎರಡೂ ದೇಶಗಳ ಗೆಳೆತನ ಪ್ರಮುಖ ಪಾತ್ರ ವಹಿಸಲಿದೆ ಎಂದು ನುಡಿದರು. ರೈತರ ಕಲ್ಯಾಣ ದೃಷ್ಟಿಯಿಂದ ರಷ್ಯಾ, ಭಾರತದ ಜೊತೆ ಎಲ್ಲ ರೀತಿಯ ಸಹಕಾರ ವಿಸ್ತರಿಸಲು ಬಯಸುತ್ತದೆ. ಹೀಗಾಗಿ ಉಭಯ ದೇಶಗಳ ನಡುವಣ ಸಂಬಂಧ ಬಲವರ್ಧನೆಯಿಂದಾಗಿ ಜನತೆಗೆ ಅನುಕೂಲವಾಗಲಿದೆ ಎಂದರು ಅಭಿಪ್ರಾಯಪಟ್ಟಿದ್ದಾರೆ.