ಡೆಂಗ್ಯೂ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತ ಕ್ರಮ ವಹಿಸಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಮೊದಲ ಆದ್ಯತೆಗೆ ಸೂಚನೆ.
ಶಿಡ್ಲಘಟ್ಟ : ಸಾರ್ವಜನಿಕರು ಯಾರೇ ತಮ್ಮ ಕಛೇರಿಗಳಿಗೆ ಬಂದಾಗ ಅವರ ಸಮಸ್ಯೆಗಳು ಆಲಿಸಬೇಕು ಜೊತೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ ಪಿ.ಎನ್ ರವೀಂದ್ರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮವನ್ನ ಉದ್ಘಾಟಿಸಿ ಸಾರ್ವಜನಿಕರಿಂದ ಅಹವಾಲುಗಳು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಸದ್ಯದ ವಾತಾವರಣದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಮುಂಜಾಗ್ರತ ಕ್ರಮಗಳು ಕೈಗೊಳ್ಳುವಂತೆ ಈಗಾಗಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದೆ ಜಿಲ್ಲೆಯಲ್ಲಿ 92 ಡೆಂಗ್ಯೂ ಪ್ರಕರಗಳು ಪತ್ತೆಯಾಗಿವೆ. ಶಾಲಾ – ಕಾಲೇಜು, ಹಾಸ್ಟೆಲ್ ಗಳ ಬಳಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಕ್ಕಳಿಗೆ ಜ್ವರ, ತಲೆ ನೋವು ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗಳು ಆಲಿಸಿ ಕೆಲಸ ಮಾಡಿದಾಗ ಜನ ಸ್ಪಂದನ ಕಾರ್ಯಕ್ರಮಗಳಲ್ಲಿ ಬರುವ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ.
ಕಂದಾಯ ಇಲಾಖೆ 40 , ಪಂಚಾಯತ್ ರಾಜ್ ಇಲಾಖೆ 07, ಸಮಾಜ ಕಲ್ಯಾಣ ಇಲಾಖೆ 03, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ 02, ಇಂಧನ ಇಲಾಖೆ 02 , ಅಂಗವಿಕಲ ಇಲಾಖೆ 02, ನೋಂದಣಿ ಇಲಾಖೆ 01, ಅರಣ್ಯ ಇಲಾಖೆ 02 , ಸಣ್ಣ ನೀರವಾರಿ ಇಲಾಖೆ 02 ಪೊಲೀಸ್ ಇಲಾಖೆ 01 ಒಟ್ಟು 61 ಅರ್ಜಿಗಳು ಸ್ವೀಕಾರ ಆಗಿವೆ ಎಲ್ಲಾ ಅರ್ಜಿಗಳಿಗೆ ಹದಿನೈದು ದಿನಗಳ ಒಳಗಾಗಿ ಉತ್ತರ ಕೊಡಬೇಕು ಎಂದರು
ಸರ್ಕಾರಿ ಕಛೇರಿಗಳಿಗೆ ಮಂಜೂರಾಗಿರುವ ಜಮೀನು ಖಾತೆ, ಪಹಣಿ ಮುಟೇಶನ್ ಗಳು ಟ್ರೇಡ್ ಲೈಸೆನ್ಸ್ ಮಾದರಿಯಲ್ಲಿ ಕಛೇರಿಯಲ್ಲಿ ಪ್ರದರ್ಶನ ಮಾಡಬೇಕು. ಇದರಿಂದ ಅಧಿಕಾರಿಗಳು ವರ್ಗಾವಣೆಯಾಗಿ ಬೇರೆಯವರು ಬಂದರೂ ಸಹಾ ತಮ್ಮ ಇಲಾಖೆಯ ಆಸ್ತಿಯ ಬಗ್ಗೆ ಗೊತ್ತಾಗಲಿದೆ ಎಂದರು.
ರೈತರ ಜಮೀನುಗಳಿಗೆ ದಾರಿ ,ಸ್ಮಶಾನ ಭೂಮಿಗೆ ದಾರಿ ಒದಗಿಸುವುದು, ಖಾತೆ ಮಾಡಿಕೊಡುವುದು ಪೈಕಿ ಆರ್.ಟಿ.ಸಿ ತಿದ್ದುಪಡಿ ಮಾಡಿಕೊಡಬೇಕು. ಮನೆಗಳ ಹತ್ತಿರ ತಿಪ್ಪೆಗುಂಡಿಗಳು ಹಾಕದಂತೆ ಕ್ರಮವಹಿಸಿ, ಚರಂಡಿಗಳು ಸ್ವಚ್ಚತೆಗೊಳಿಸಬೇಕು ವಿಶೇಷ ಅನುಧಾನಗಳನ್ನ ಮೀಸಲಿಟ್ಟುಕೊಂಡು ಪೈಪ್ ಲೈನ್ ಡ್ಯಾಮೇಜು ಆಗಿದ್ದಲ್ಲಿ ದುರಸ್ಥಿ ಪಡಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರು ನಿಲ್ಲುವ ಪ್ರದೇಶಗಳಲ್ಲಿ ಸೊಳ್ಳೆಗಳ ಲಾರ್ವಗಳು ಉತ್ಪತ್ತಿಯಾಗದಂತೆ ನಾಶಪಡಿಸಬೇಕು ಎಂದು ಸೂಚಿಸಿದರು.
ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಚರಂಡಿ ಸ್ವಚ್ಚತೆ ಮಾಡಿರುವುದಿಲ್ಲ. ನನ್ನ ಮಗಳಿಗೆ ಜ್ವರ ಬಂದಿದೆ ರಕ್ತ ಪರೀಕ್ಷೆ ಮಾಡಬೇಕೆಂದು ತಾಲ್ಲೂಕು ಆಸ್ಪತ್ರೆಗೆ ಹೋದಾಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ ವೆಂಕಟೇಶ್ ಮೂರ್ತಿ ಮತ್ತು ಅಲ್ಲಿನ ವೈದ್ಯಾಧಿಕಾರಿಗಳು ಜ್ವರ ಬಂದ 5 ದಿನಗಳ ನಂತರ ರಕ್ತ ಪರೀಕ್ಷೆ ಮಾಡುವುದಾಗಿ ಹೇಳುತ್ತಾರೆ. ಮನೆಗಳ ಮುಂದೆಯೇ ತಿಪ್ಪೆಗಳು ಹಾಕಿದ್ದು, ಇದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನೋಟಿಸ್ ಕೊಡುವ ಕೆಲಸವೂ ಮಾಡಿರುವುದಿಲ್ಲ ಇದರ ಬಗ್ಗೆ ಗಮನಹರಿಸಬೇಕು ಜೊತೆಗೆ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸುಮಾರು 50 ಲಕ್ಷದ ಹೊಸ ಜನರೇಟರ್ ಸರ್ಕಾರ ಕೊಟ್ಟಿದ್ದರೂ ಸಹ ಅಳವಡಿಸಿಕೊಂಡು ಉಪಯೋಗಿಸುತ್ತಿಲ್ಲ. ಒಂದು ದಿನ ಪೂರ್ತಿ ಅಸ್ಪತ್ರೆಯಲ್ಲಿ ಕರೆಂಟ್ ಇಲ್ಲದಿದ್ದರೂ ಸಹಾ ಯಾವುದೇ ಕ್ರಮ ಕೈಗೊಂಡಿರುವುದಿಲ್ಲವೆಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶೆಟ್ಟಿಹಳ್ಳಿ ರವಿಪ್ರಕಾಶ್ ಅವರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ಹೇಳಿದರು. ಜಿಲ್ಲಾಧಿಕಾರಿಗಳು ಆರೋಗ್ಯಾಧಿಕಾರಿಗಳಿಂದ ಸ್ಪಷ್ಟನೆ ಪಡೆದರು.
ಜನತಾ ದರ್ಶನದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಶೀಲ್ದಾರ್ ಬಿ.ಎನ್. ಸ್ವಾಮಿ, ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್, ತಾ.ಪಂ. ಇ.ಓ ನಾರಾಯಣ್, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್‌ಕುಮಾರ್ ಕೆ.ಎ