Monday, December 23, 2024
Homeಜಿಲ್ಲೆತಾಲ್ಲೂಕು ಕಛೇರಿಯಲ್ಲಿ ಹಳೇ ಪಹಣಿ, ಜಮೀನಿನ ದಾಖಲೆಗಳು ಪಡೆಯಲು ಹೊಸ ರೂಲ್ಸ್, ಸಾರ್ವಜನಿಕರಿಗೆ ಟೆನ್ಷನ್.!

ತಾಲ್ಲೂಕು ಕಛೇರಿಯಲ್ಲಿ ಹಳೇ ಪಹಣಿ, ಜಮೀನಿನ ದಾಖಲೆಗಳು ಪಡೆಯಲು ಹೊಸ ರೂಲ್ಸ್, ಸಾರ್ವಜನಿಕರಿಗೆ ಟೆನ್ಷನ್.!

ಮದ್ಯವರ್ತಿಗಳ ಕಡಿವಾಣಕ್ಕೆ ಹೊಸ ಪ್ರಯತ್ನವೆಂದ ತಹಶೀಲ್ದಾರ್.!

ಶಿಡ್ಲಘಟ್ಟ : ರೈತರ ಜಮೀನುಗಳ ಹಳೇ ಕೈಬರವಣಿಗೆಯ ಪಹಣಿ, ಮುಟೇಶನ್, ಸಾಗುವಳಿ ಚೀಟಿ, ಓಎಂ, ರವಿನ್ಯೂ ನಕ್ಷೆ ಸೇರಿದಂತೆ ಇನ್ನಿತರೆ ದಾಖಲೆಗಳ ದೃಢೀಕೃತ ಪ್ರತಿಗಳು ಪಡೆಯಲು ರೈತರು, ಸಾರ್ವಜನಿಕರಿಗೆ ಹೊಸ ಟೆನ್ಷನ್ ಶುರುವಾಗಿರುವುದಲ್ಲದೆ, ದಾಖಲೆಗಳಿಗಾಗಿ ತಾಲ್ಲೂಕು ಕಛೇರಿಗೆ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.

ತಾಲ್ಲೂಕು ಆಡಳಿತ ಸೌಧದಲ್ಲಿರುವ ಅಭಿಲೇಖಾಲಯ ( ರೆಕಾರ್ಡ್ ರೂಂ) ಇಲ್ಲಿ ದಾಖಲೆಗಳು ಪಡೆಯುವುದು ಇತ್ತಿಚೇಗೆ ಹರಸಾಹಸದ ಕೆಲಸವಾಗಿದೆ. ಸರ್ಕಾರಿ ಕಛೇರಿಗಳು ಸಾಮಾನ್ಯವಾಗಿ ಬೆಳಗ್ಗೆ 10:30 ರಿಂದ ಸಂಜೆ 5:30ರವರೆಗೆ ತೆರೆದಿರುತ್ತವೆ. ಜೊತೆಗೆ ಅಧಿಕಾರಿಗಳು ಸಂಬಂಧಪಟ್ಟ ವಿಭಾಗದ ಸಿಬ್ಬಂದಿಗಳು ತಮ್ಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಶಿಡ್ಲಘಟ್ಟ ತಾಲ್ಲೂಕು ಆಡಳಿತ ಸೌಧದಲ್ಲಿರುವ ಅಭಿಲೇಖಾಲಯವು ಮದ್ಯಾಹ್ನ 12:00 ರಿಂದ 1:30 ರ ತನಕ ನಕಲು ಪ್ರತಿಗಳು ನೀಡಲು ಹಾಗೂ ಚಲನ್ ಪಡೆಯಲು ಅವಕಾಶ ಇರುತ್ತದೆ ಎಂಬ ಸೂಚನೆ ಪತ್ರಗಳು ರೆಕಾರ್ಡ್ ರೂಂ ಕಿಟಕಿ‌ ಮತ್ತು ಗೋಡೆಗಳ ಮೇಲೆ ಅಂಟಿಸಿರುವುದು ಚರ್ಚೆಗೆ ಕಾರಣವಾಗಿದೆ.

ಕೋರ್ಟು, ಕಛೇರಿ, ಪೊಲೀಸ್ ಠಾಣೆ ಸೇರಿದಂತೆ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು, ಹಾಗೂ ಪಹಣಿಯಲ್ಲಿರುವ ಲೋಪದೋಷಗಳು ತಿದ್ದುಪಡಿ‌ ಮಾಡಿಸಲು ಹಾಗೂ ಖಾತೆ ವಗೈರೆ ಮಾಡಿಸುವ ಸಲುವಾಗಿ ಮೂಲ ಹಳೇಯ ದಾಖಲೆಗಳು ಅಗತ್ಯವಿರುತ್ತದೆ. ದೂರದ ಊರುಗಳಿಂದ ಬರುವ ರೈತರು, ಸಾರ್ವಜನಿಕರು, ಹಿರಿಯ ನಾಗರೀಕರು ತಮ್ಮ ಜಮೀನುಗಳ ದಾಖಲೆಗಳು ಪಡೆಯಲು ಹರಸಹಸ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆಯಲ್ಲಾ ರೆಕಾರ್ಡ್ ರೂಂ‌ ನಲ್ಲಿ ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಪಡೆಯಲು ಒಂದೆರಡು ದಿನಗಳಲ್ಲಿ ಕೆಲಸ ಆಗುತ್ತಿತ್ತು. ಆದರೆ ಈಗ ಅರ್ಜಿ ಸಲ್ಲಿಸುವುದಕ್ಕೆ ಒಮ್ಮೆ ಬರಬೇಕು , ಚಲನ್ ಕಟ್ಡುವುದಕ್ಕೆ ಒಂದು ದಿನ, ಮತ್ತು ದಾಖಲೆಗಳು ಪಡೆಯಲು ಒಂದು ಬರಬೇಕಾಗುತ್ತದೆ. ಒಂದು ದಾಖಲೆ ಪಡೆಯಲು ಕೆಲಸ ಕಾರ್ಯಗಳು ಬಿಟ್ಟು ಒಬ್ಬ ರೈತ 3-4 ಬಾರಿ ಕಛೇರಿಗೆ ಬರುವಂತಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿರುತ್ತದೆ.

ನಾಡಕಛೇರಿಯಲ್ಲಿ ಅರ್ಜಿ ಸಲ್ಲುವುದಕ್ಕೆ ಬೇಕು ಒರ್ಜಿನಲ್ ದಾಖಲೆಗಳು : ಈ ಹಿಂದೆಯಲ್ಲಾ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ, ಸಣ್ಣ ರೈತರ ದೃಢೀಕರಣ ಪತ್ರ ಸೇರಿದಂತೆ ನಾಡಕಛೇರಿಯ ಇನ್ನಿತರೆ ಸೇವೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಸಲು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡು, ಪಡಿತರ ಚೀಟಿ, ಶಾಲಾ ದಾಖಲಾತಿ ಜೆರಾಕ್ಸ್ ಪ್ರತಿಗಳು ಅಥವಾ ಜಮೀನು ಸಂಬಂದ ಪಹಣಿ, ಮುಟೇಶನ್ ಲಗತ್ತಿಸಿ ಅರ್ಜಿ ಸಲ್ಲಿಸಲಾಗುತ್ತಿತ್ತು. ಬಳಿಕ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಪರಿಶೀಲಿಸಿ, ಗ್ರೇಡ್ -2 ತಹಶೀಲ್ದಾರ್ ಅನುಮೋದಿಸಿ ಡಿಜಿಟಲ್ ಸಹಿ ಬಳಿಕ ಪ್ರಮಾಣ ಪತ್ರ ಸಿಗುತ್ತಿತ್ತು. ಆದರೆ ಇತ್ತಿಚೆಗಷ್ಟೇ ತಾಲ್ಲೂಕಿಗೆ ಹೊಸದಾಗಿ ಬಂದಿರುವ ಗ್ರೇಡ್ -2 ತಹಶೀಲ್ದಾರ್ ಅವರು ಹೊಸ ಹೊಸ ನಿಯಮಗಳು ರೂಪಿಸಿದ್ದಾರೆ. ನಾಡ ಕಛೇರಿಯಲ್ಲಿ ಯಾವುದೇ ಅರ್ಜಿ ಸಲ್ಲಿಸುವುದಕ್ಕೂ ಸಾರ್ವಜನಿಕರು ಮೂಲ (ಒರ್ಜಿನಲ್) ದಾಖಲೆಗಳು ಅಂದರೆ ಚುನಾವಣೆ ಗುರುತಿ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಎಲ್ಲಾ ದಾಖಲೆಗಳು ಒರ್ಜಿನಲ್ ತೆಗೆದುಕೊಂಡು ಬಂದು ಅರ್ಜಿ ಸಲ್ಲಿಸಬೇಕು ಜೆರಾಕ್ಸ್ ಪ್ರತಿಗಳು ಇದ್ದರೆ ಅರ್ಜಿ ಸಲ್ಲಿಸುವುದಕ್ಕೆ ಆಗುವುದಿಲ್ಲವಂತೆ. ಹಿರಿಯ ನಾಗರೀಕರು, ಸಾರ್ವಜನಿಕರು ಪ್ರತಿ ಬಾರಿ ಒರ್ಜಿನಲ್ ದಾಖಲೆಗಳು ತರುವಾಗ ಆಕಸ್ಮಿಕವಾಗಿ ಕಳೆದುಕೊಂಡರೆ ಮತ್ತೆ ಆ ದಾಖಲೆಗಳು ಪಡೆಯುವುದಕ್ಕಾಗಿ ಮತ್ತಷ್ಟು ದಿನಗಳು ಕಛೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಬರುತ್ತದೆ. ಸರ್ಕಾರ ಇರುವುದೇ ಜನರಿಗೋಸ್ಕರ ಯಾವುದೇ ಸರ್ಕಾರ ಜನಪರ ಯೋಜನೆಗಳು, ಜನರ ಹಿತವನ್ನ ಕಾಪಾಡುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತದೆ. ಆದರೆ ಈಗ ರೂಪಿಸಿರುವ ಹೊಸ ನಿಯಮದಿಂದ ರೈತರು, ಸಾರ್ವಜನಿಕರು ತಮ್ಮ ಜಮೀನುಗಳ ದಾಖಲೆಗಳು ಪಡೆಯುವುದು ಕಷ್ಟದ ಕೆಲಸವಾಗಿದೆ ಎಂದಿದ್ದಾರೆ.

ಹೊಸ ಹೊಸ ನಿಯಮಗಳಿಂದ ಜನ ಸಮಾನ್ಯರು ಪರದಾಡುವಂತಹ ಪರಿಸ್ಥಿತಿಯಾಗಿದೆ. ಸರ್ಕಾರದ ಆದೇಶ, ಹಿರಿಯ ಅಧಿಕಾರಿಗಳ ಆದೇಶವಿದೆಯಾ? ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಭವವಾಗಿದೆ. ಜನರ ಕೆಲಸ ತ್ವರಿತವಾಗಿ ಮಾಡುವುದಕ್ಕೆ ಹೊಸ ನಿಯಮಗಳು ಮಾಡಿದರೆ ಜನರಿಗೆ‌ ಮತ್ತಷ್ಟು ಉಪಯುಕ್ತವಾಗಲಿದೆ. ಅದು ಬಿಟ್ಟು ತಮಗೆ ಬೇಕಾದ ಹಾಗೂ ತಮಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ನಿಯಮಗಳು ಮಾಡಿಕೊಂಡಲ್ಲಿ ಜನರ ಹಿತವನ್ನು ಬಯಸುವವರು ಯಾರು? ಜನರ ಕೆಲಸ ಕಾರ್ಯಗಳು ತ್ವರಿತವಾಗಿ ಮಾಡುವವರು ಯಾರು.? ಎಂದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ರೈತರು, ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತವಾಗಿ ಆಗುವ ರೀತಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುವಂತೆ ತಾಕೀತು‌ ಮಾಡಬೇಕಾಗಿದೆ. ಜೊತೆಗೆ ಸರ್ಕಾರಿ ಹುದ್ದೆ ಜವಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಸರ್ಕಾರದ ಆದೇಶ, ನಿಯಮಾನುಸಾರ, ಸರ್ಕಾರಿ ಕಛೇರಿಯ ನಿಗಧಿತ ಸಮಯದಂತೆ ನಿಷ್ಟೆಯಿಂದ ಜನರ ಪರಿಸ್ಥಿತಿಯನ್ನ ಅರಿತು ಕಾರ್ಯನಿರ್ವಹಿಸಬೇಕಾಗಿದೆ. ಹಾಗೂ ಈ ಹಿಂದೆಯಂತೆ ಹಳೇ ವ್ಯವಸ್ಥೆಯಲ್ಲೆ ಸಾರ್ವಜನಿಕರಿಗೆ ಕೆಲಸ ಮಾಡಿಕೊಡಬೇಕು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮದ್ಯರ್ವತಿಗಳಿಗೆ ಕಡಿವಾಣಕ್ಕೆ ಹೊಸ ಪ್ರಯತ್ನವೆಂದ ತಹಶೀಲ್ದಾರ್ : ಮದ್ಯವರ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಹೆಚ್ಚು ಹಣ ಹೊರೆಯಾಗದಂತೆ ಗ್ರೇಡ್ -2 ತಹಶೀಲ್ದಾರ್ ಹೊಸ ಪ್ರಯತ್ನ ಮಾಡಿದ್ದಾರೆ. ಈ ಹಿಂದೆಯಲ್ಲಾ ರೆಕಾರ್ಡ್ ರೂಂ ದಾಖಲೆಗಳು ಮದ್ಯವರ್ತಿಗಳ ಮೂಲಕ ಶ್ರೀಮಂತರು, ರಿಯಲ್ ಎಸ್ಟೇಟ್ ಕುಳಗಳು, ಬಲಾಡ್ಯರು ತ್ವರಿತವಾಗಿ ದಾಖಲೆ ಪಡೆದುಕೊಳ್ಳುತ್ತಿದ್ದರು, ಇದರಿಂದ ಬಡವರ ಕೆಲಸ ವಿಳಂಭವಾಗುತ್ತಿತ್ತು. ಅದಕ್ಕೆ ಈಗ ಕಡಿವಾಣ ಹಾಕುವುದಕ್ಕೆ ಹೀಗೆ ಮಾಡಲಾಗಿದೆ. ಕಛೇರಿಯ ಸಮಯ ಬೆಳಗ್ಗೆ 10:30 ರಿಂದ ಸಂಜೆ 5:30 ರವರೆಗೆ ದಾಖಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಖಜಾನೆ -2 ಚಲನ್ ಮೂಲಕ ದಾಖಲೆಗಳ ಶುಲ್ಕ ಪಾವತಿ‌ ಮಾಡುವುದಕ್ಕೆ ನಮ್ಮಲ್ಲೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನೂ ನಾಡಕಛೇರಿಗೆ ಸಂಬಂಧಿಸಿದಂತೆ ಸೇವೆಗಳಿಗೆ ಅರ್ಜಿ ಸಲ್ಲಿಸಲು ಒರ್ಜಿನಲ್ ದಾಖಲೆಗಳು ಜಿಲ್ಲೆಯ ಬೇರೆ ಬೇರೆ ಕಡೆ ಪಡೆಯುತ್ತಿರುವುದಾಗಿ ಮಾಹಿತಿ ಇದೆ. ಹಾಗಾಗಿ ಇಲ್ಲಿಯೂ ಸಹ ಪಡೆಯಲಾಗುತ್ತಿದೆ. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಒಳ್ಳೆಯ ಕೆಲಸಕ್ಕೆ ಆರಂಭದಲ್ಲಿ ಆಡತಡೆಗಳು ಬರುತ್ತವೆ ಮುಂದೆ ಎಲ್ಲವೂ ಸರಿಹೋಗುತ್ತದೆ ಎಂದು ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಮಾಹಿತಿ ನೀಡಿದರು.

ಹೊಸ ನಿಯಮಗಳು ರೂಪಿಸಲು ಸರ್ಕಾರದ ಆದೇಶ, ಅಥವಾ ಮೇಲಾಧಿಕಾರಿಗಳ ಸೂಚನೆ, ಇಲಾಖೆಯ ಸುತ್ತೊಲೆ ಇದೆಯಾ ಎಂದು ಕೇಳಿದಾಗ ಪರಿಶೀಲಿಸಿ‌ ನಂತರ ಮಾಹಿತಿ ನೀಡುವುದಾಗಿ ತಿಳಿಸಿದರು.

ಜನ ಸಾಮಾನ್ಯರ, ರೈತರ, ಸಾರ್ವಜನಿಕರ, ಸರ್ಕಾರಿ ಕೆಲಸ ಕಾರ್ಯಗಳು ವಿಳಂಭವಾಗದಂತೆ ತ್ವರಿತವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕೆಲಸ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಹೊಸ ರೂಲ್ಸ್ ನಿಂದ ಜನರಿಗೆ ಅನುಕೂಲವಾಗಬೇಕೆ ಹೊರೆತು ಅದರಿಂದ ಟೆನ್ಷನ್ ಕಿರಿಕಿರಿಯಾಗಬಾರದು. ಆ ನಿಟ್ಟಿನಲ್ಲಿ ಇನ್ನು ಮುಂದೆಯಾದರೂ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂಬುವುದೇ ಎಲ್ಲರ ಆಶಯವಾಗಿದೆ.

ವಿಶೇಷ ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ 

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!