ವಿಪಕ್ಷಗಳ ವಿರುದ್ಧ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ.
ಚಂಡೀಗಢ: ಇನ್ನೆರಡು ದಿನ ನೀಟ್ ಪಿಜಿ ಪರೀಕ್ಷೆ ಘೋಷಿಸುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಿಳಿಸಿದರು. ರಾಷ್ಟ್ರೀಯ ಪರೀಕ್ಷಾ ಮಂಡಳಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಿದೆ ಎಂದು ಚಂಡೀಗಢದಲ್ಲಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ನೀಟ್ – ಯುಜಿ ವಿವಾದ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿದ್ದರೂ ಕಾಂಗ್ರೆಸ್ ಈ ವಿಚಾರದಲ್ಲಿ ವಿವಾದ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ನೀಟ್ ವಿಚಾರವಾಗಿ ವಿವಾದ ಸೃಷ್ಟಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನ್, ಕಾಂಗ್ರೆಸ್ ಪಕ್ಷಕ್ಕೆ ಚರ್ಚೆಯೇ ಬೇಕಾಗಿಲ್ಲ. ವಿವಾದ ಸೃಷ್ಟಿಸುವುದೇ ಆ ಪಕ್ಷದ ಕೆಲಸವಾಗಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಅಡ್ಡಗಾಲು ಹಾಕಲು ಯತ್ನಿಸುತ್ತಿದೆ. ಗೊಂದಲ ಸೃಷ್ಟಿಸುವುದೇ ಕಾಂಗ್ರೆಸ್ ಕೆಲಸ ಎಂದು ಟೀಕಿಸಿದರು.
ರಾಷ್ಟ್ರಪತಿ ಭಾಷಣದಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿದ ನೀಟ್ ಪರೀಕ್ಷೆ ವಿಚಾರವನ್ನು ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ರಾಷ್ಟ್ರಪತಿಗಳ ವಂದನಾ ನಿರ್ಣಯ ಸಲ್ಲಿಸುವ ವೇಳೆ ಚರ್ಚಿಸಲು ಕಾಂಗ್ರೆಸ್‌ಗೆ ಅವಕಾಶವಿದೆ. ಸರ್ಕಾರ ಈ ವಿಷಯದ ಬಗ್ಗೆ ಚರ್ಚಿಸಲು ಸಿದ್ದವಿದೆ. ಆದರೆ ಕಾಂಗ್ರೆಸ್ ಈ ವಿಷಯವನ್ನು ರಾಜಕೀಯಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದರು.
ಪರೀಕ್ಷೆಯಲ್ಲಿ ಲೋಪ ಉಂಟಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದೆ ಎಂದರು.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿಕೊಂಡಿದೆ. ಪಾಲಕರು ಹಾಗೂ ವಿದ್ಯಾರ್ಥಿಗಳನ್ನು ಭೇಟಿಯಾಗುತ್ತಿದ್ದೇವೆ ಎಂದರು.