ಶಿಡ್ಲಘಟ್ಟ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ಕುರಿತು ಶನಿವಾರದಂದು ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಬಾವಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಭಾಗವಹಿಸಿ ಈ ಬಾರಿ ಕೆಂಪೇಗೌಡರ ಜಯಂತಿಯನ್ನು ಸರಳವಾಗಿ ಆಚರಿಸುವಂತೆ ಸರ್ವಾನುಮತದಿಂದ ಅಭಿಪ್ರಾಯಗಳು ಮಂಡಿಸಿದರು.
ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಮಾತನಾಡಿ ಕೆಂಪೇಗೌಡರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಜಯಂತಿಯ ದಿನದಂದು ನಾವೆಲ್ಲರೂ ಸ್ವಚ್ಚತಾ ಕಾರ್ಯ ಮಾಡಿ ಶ್ರಮದಾನ ಮಾಡಿದ ಬಳಿಕ ಸರ್ಕಾರದ ಆದೇಶ ನಿಯಮಗಳಂತೆ ಕೆಂಪೇಗೌಡರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ ಅವರು ಮಾತನಾಡಿ ಸಮಾಜಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಅವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ವಿಶ್ವದಲ್ಲೇ ಅವರ ಹೆಸರು ಚಿರವಾಗಿದೆ. ಕೆಂಪೇಗೌಡರ ಆದರ್ಶಗಳು ಮುಂದಿನ ಪಿಳೀಗೆಗೆ ನಾವು ಸಾರಬೇಕಿದೆ. ಕಳೆದ ಬಾರಿ ಸರಿಯಾಗಿ ಮಳೆಬಾರದೆ ಬೆಳೆಗಳು ಆಗದ ಕಾರಣದಿಂದ ರೈತರು ಕಷ್ಟದಲ್ಲಿದ್ದು ಕಾಲಾವಕಾಶ ಕಡಿಮೆ ಇರುವುದರಿಂದ ಈಗಾಗಲೇ ಸಮುದಾಯ ಮುಖಂಡರೊಂದಿಗೆ ಸಭೆ ಸೇರಿ ಮಾತುಕತೆ ಮಾಡಲಾಗಿದೆ. ಎಲ್ಲರೂ ಈ ಬಾರಿ ಸರಳವಾಗಿ ಜಯಂತಿಯನ್ನು ಆಚರಿಸುವುದಕ್ಕೆ ಸಹಮತ ನೀಡಿದ್ದಾರೆ. ಅದರಂತೆ ತಾಲ್ಲೂಕು ಆಡಳಿತ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಗುತ್ತದೆ. ಎಸ್ ಎಸ್ ಎಲ್.ಸಿ , ಪಿಯುಸಿ, ಪದವಿಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದಾಗಿ ತಿಳಿಸಿದರು .
ಟಿಬಿ ರಸ್ತೆಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡಲು ಒತ್ತಾಯ : ಹಲವು ವರ್ಷಗಳಿಂದ ನಗರದ ಪ್ರಮುಖ ರಸ್ತೆಯನ್ನು ಟಿಬಿ ರಸ್ತೆ ಎಂದು ಕರೆಯುತ್ತಿದ್ದು, ಈ ರಸ್ತೆಗೆ ನಾಡಪ್ರಭು ಕೆಂಪೇಗೌಡರ ರಸ್ತೆ ಎಂದು ಮರು ನಾಮಕರಣ ಮಾಡಬೇಕು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರದ ಗಮನಕ್ಕೆ ಪತ್ರ ಕಳುಹಿಸಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರಾದ ಮಕ್ಸೂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಪ್ರಮುಖ ಮುಖಂಡರು ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಎನ್ ಸುಬ್ಬಾರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪಟೇಲ್ ನಾರಾಯಣಸ್ವಾಮಿ, ಮುಖಂಡರಾದ ಹಿತ್ತಲಹಳ್ಳಿ ಸುರೇಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ, ವೀರಾಪುರ ನಂಜಪ್ಪ, ಗುಡಿಹಳ್ಳಿ ಕೆಂಪಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಸಿಡಿಪಿಓ ನೌತಾಜ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯ ಮುಖಂಡರು ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ ಎ