ಶಿಡ್ಲಘಟ್ಟ: ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತವಾಗಿ ಮುಕ್ತ, ನ್ಯಾಯಸಮ್ಮತ ಮತ್ತು ನಿರ್ಭೀತಿ ಮತದಾನ ನಡೆಸಲು ಬಿ.ಎಸ್.ಎಫ್ ಹಾಗೂ ಸ್ಥಳೀಯ ಪೊಲೀಸ್ ಪಡೆ ಸೋಮವಾರದಂದು ನಗರದ ಪ್ರಮುಖ ಬೀದಿಗಳಲ್ಲಿ ಡಿವೈಎಸ್ಪಿ ಪಿ.ಮುರಳಿಧರ್ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು.
ನಗರದ ಬಸ್ ನಿಲ್ದಾಣದಿಂದ ಆರಂಭಗೊಂಡ ಪಥ ಸಂಚಲನ ಪ್ರಮುಖ ರಸ್ತೆಗಳಲ್ಲಿ ಸಾಗಿ ಜನರಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಿದರು. ಈ ವೇಳೆ ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಬಿ.ಎಸ್.ಎಫ್ ಯೋಧರನ್ನು ನಗರದ ಕೋಟೆ ವೃತ್ತದಲ್ಲಿ ನಾಗರೀಕರು ಹೂ ಚೆಲ್ಲಿ ಸ್ವಾಗತಿಸಿದರು.
ಚುನಾವಣೆ ಮುಗಿಯುವ ತನಕ ತಾಲೂಕಿನ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಶಾಂತಿಯುತ ಹಾಗೂ ನಿಷ್ಪಕ್ಷಪಾತ ಚುನಾವಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಾಗಾಗಿ ನಾಗರೀಕರು ಯಾವುದೇ ಭಯವಿಲ್ಲದೆ, ಆಮಿಷಗಳಿಗೆ ಒಳಗಾಗದೆ, ಧೈರ್ಯದಿಂದ ಮತ ಚಲಾಯಿಸಲು ಪೂರಕ ವಾತಾವರಣ ಸೃಷ್ಟಿ ಮಾಡಲಾಗಿದೆ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಬೇಕು. ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪಥಸಂಚಲನ ನಡೆಸಲಾಯಿತು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಂ ಶ್ರೀನಿವಾಸ್, ಮತ್ತು ನಗರ ಠಾಣೆ ಪಿಎಸ್ಐ ಎಂ.ವೇಣುಗೋಪಾಲ್, ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪಿಎಸ್ಐ ಕೆ.ಸತೀಶ್ , ದಿಬ್ಬೂರಹಳ್ಳಿ ಪೋಲಿಸ್ ಠಾಣೆ ಪಿಎಸ್ಐ ಶ್ಯಾಮಲಾ ವಿನೋದ್ ಹಾಗೂ ಪೊಲೀಸ್ ಸಿಬ್ಬಂದಿ, 250 ಕ್ಕೂ ಹೆಚ್ಚು ಬಿಎಸ್ಎಫ್ ಯೋಧರು ಫಥ ಸಂಕಲನದಲ್ಲಿ ಭಾಗವಹಿಸಿದ್ದರು.