ಪಿಕಾರ್ಡ್ ಬ್ಯಾಂಕ್ 86ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಹಾಗೂ ನೂತನ ಅಂಗಡಿ ಮಳಿಗೆಗಳ ಉದ್ಘಾಟನೆ ಸಮಾರಂಭ.
ಶಿಡ್ಲಘಟ್ಟ: ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ 86ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಹಾಗೂ ನೂತನ ಅಂಗಡಿ ಮಳಿಗೆಗಳ ಉದ್ಘಾಟನೆ ಸಮಾರಂಭ ನಗರದಲ್ಲಿ ಬುಧವಾರದಂದು ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಬಿ.ಎನ್ ರವಿಕುಮಾರ್, ಬ್ಯಾಂಕಿನ ಅಧ್ಯಕ್ಷರಾದ ರಾಮಚಂದ್ರ ಡಿ.ಸಿ ಹಾಗೂ ಗಣ್ಯರು ದೀಪವನ್ನು ಬೆಳಗಿಸಿ ನೂತನ ಮಳಿಗೆಗಳನ್ನು ಟೇಪ್ ಕತ್ತರಿಸಿ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಶಾಸಕ ಬಿ.ಎನ್ ರವಿಕುಮಾರ್ ಅವರು ಮಾತನಾಡಿ ನಾನು ಪಕ್ಷಾತೀತವಾಗಿ ಮಾತನಾಡುವುದಕ್ಕೆ ಇಚ್ಚಿಸುತ್ತೇನೆ. ಸುಮಾರು ವರ್ಷಗಳ ಹಿಂದೆ ಈ ಕ್ಷೇತ್ರದ ದಿವಗಂತ ಮಾಜಿ ಶಾಸಕರಾದ ಎಸ್. ಮುನಿಶಾಮಪ್ಪ, ಮಾಜಿ ಸಚಿವರಾದ ಮುನಿಯಪ್ಪ ಅವರು ಸೇರಿದಂತೆ ಜೆ ವೆಂಕಟಪ್ಪ, ಆವಲರೆಡ್ಡಿ, ಭಕ್ತರಹಳ್ಳಿ ವೆಂಕಟರಾಯಪ್ಪ ಅವರ ರಾಜಕಾರಣದ ಅವಧಿಯಿಂದ ನಗರದ ಹೃದಯ ಭಾಗದಲ್ಲಿ ಬ್ಯಾಂಕ್ ಕೆಲಸ ಮಾಡುತ್ತಿದೆ. ಇಂದಿಗೂ ಸಹಾ ಪಿಕಾರ್ಡು ಬ್ಯಾಂಕ್ ಎಂದರೆ ಸಾಕಷ್ಟು ಮಂದಿಗೆ ಗೊತ್ತಾಗುವುದಿಲ್ಲ. ಪಿ.ಎಲ್.ಡಿ ಬ್ಯಾಂಕ್ ಎಂದರೆ ತಾಲ್ಲೂಕಿನ ಜನರಿಗೆ ಗೊತ್ತಾಗುತ್ತದೆ. ಬ್ಯಾಂಕ್ ನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಬ್ಯಾಂಕಿನಿಂದ ಸಾಲ ಪಡೆದ ರೈತರು ಸಕಾಲಕ್ಕೆ ಸಾಲವನ್ನು ಮರುಪಾವತಿಸಬೇಕು ಜೊತೆಗೆ ಬ್ಯಾಂಕಿನಲ್ಲಿ ಹೆಚ್ಚು ಹಣವನ್ನು ಡಿಪಾಜಿಟ್ ಮಾಡುವಂತೆ ತಿಳಿಸಿದರು.
ನಮ್ಮ ಭಾಗದಲ್ಲಿ ಬಹಳಷ್ಟು ರೈತರು ಸಂಕಷ್ಟದಲ್ಲಿದ್ದಾರೆ. ಸಕಾಲಕ್ಕೆ ಸಾಲವನ್ನು ಕಟ್ಟಿದ್ದಲ್ಲಿ ಶೇಕಡಾ 9.25% ರಷ್ಟು ಸಾಲ ಮನ್ನಾ ಆಗುತ್ತದೆ. ಯೋಜನೆಯನ್ನ ರೈತರು ಸದುಪಯೋಗ ಪಡೆದುಕೊಳ್ಳಬೇಕು. ರೇಷ್ಮೆ ಬೆಳೆಗಾರರು, ವಾಣಿಜ್ಯ ಬೆಳೆಗಾರರಿಗೆ ಕೋ ಅಪರೇಟಿವ್ ಬ್ಯಾಂಕುಗಳಿಂದ ಶೇಕಡಾ 3% ರಷ್ಟು ಬಡ್ಡಿಗೆ ಸಾಲ ಕೊಡುವಂತಹ ಕೆಲಸ ಆಗುತ್ತದೆ ಎಂದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆ ಹೋಗುವ ಮುಖ್ಯ ರಸ್ತೆಯಲ್ಲಿ ವೇದಿಕೆಯನ್ನು ನಿರ್ಮಿಸಿದ್ದರಿಂದ ಗೂಡುಮಾರುಕಟ್ಟೆಗೆ ಹೋಗುವ ರೈತರು, ಗೂಡು ಸಾಕಾಣಿಕೆ ಕಾರ್ಮಿಕರು, ರೀಲರುಗಳು ಪರ್ಯಾಯ ಮಾರ್ಗವಾಗಿ ಸಂಚರಿಸುವಂತಾಯಿತು.
ಕಾರ್ಯಕ್ರಮದಲ್ಲಿ ಕೆ.ಎಂ.ಎಫ್ ನಿರ್ದೇಶಕ ಶ್ರೀನಿವಾಸ ರಾಮಯ್ಯ, ಪಿಕಾರ್ಡು ಬ್ಯಾಂಕ್ ಅಧ್ಯಕ್ಷ ರಾಮಚಂದ್ರ ಡಿ.ಸಿ,, ಬಂಕ್ ಮುನಿಯಪ್ಪ, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ವಿ ವೆಂಕಟಸ್ವಾಮಿ, ನಿರ್ದೇಶಕರಾದ ಮುರಳಿ.ಎಂ, ಮುಖಂಡರಾದ ಎಸ್.ಎಂ ರಮೇಶ್, ಸೇರಿದಂತೆ ಇತರರು ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್