ತಾಲ್ಲೂಕು ಕಛೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯ ಆರಂಭ.
ಶಿಡ್ಲಘಟ್ಟ : ಕಂದಾಯ ಇಲಾಖೆಗೆ ಸಂಬಂಧಿಸಿ ಹಳೆಯ ದಾಖಲೆಗಳು ಪಡೆಯಲು ಈ ಹಿಂದೆ ರೈತರು ಮತ್ತು ಭೂ ಮಾಲೀಕರು ಸಾಕಷ್ಟು ಸಮಸ್ಯೆ ಎದುರಿಸಿದ್ದು, ಇನ್ನು ಮುಂದೆ ಹಳೆಯ ದಾಖಲೆಗಳು ಅನ್ ಲೈನ್ ನಲ್ಲೆ ಲಭ್ಯವಾಗಲಿದೆ. ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ರೈತರು ಮತ್ತು ಭೂ ಮಾಲೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಗೆ ಚಾಲನೆ ಸಿಕ್ಕಿದೆ. ಹಳೆಯ ದಾಖಲೆಗಳು ಸ್ಕ್ಯಾನ್ ಆಗಿ ಡಿಜಿಟಲೀಕರಣವಾಗುತ್ತವೆ. ಭೂ ದಾಖಲೆಗಳು ಸುರಕ್ಷವಾಗಿರುತ್ತವೆ ಎಂದು ಶಾಸಕ ಬಿ.ಎನ್ ರವಿಕುಮಾರ್ ಅಭಿಪ್ರಾಯಪಟ್ಟರು.
ಸೋಮವಾರದಂದು (ಇಂದು) ತಾಲ್ಲೂಕು ಕಛೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ಕಂಪ್ಯೂಟರ್ ಸ್ಕ್ಯಾನಿಂಗ್ ಕೊಠಡಿಯನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿದರು.
ಹಳೇಯ ಭೂ ದಾಖಲೆಗಳು ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲೆ ಲಭ್ಯವಾಗುವಂತಹ ವ್ಯವಸ್ಥೆಗೆ ಈಗಾಗಲೇ ‘ ಭೂ ಸುರಕ್ಷಾ ಯೋಜನೆ’ ಮೂಲಕ ಚಾಲನೆ ನೀಡಿದೆ. ಇದರಿಂದ ರೈತರು ಮತ್ತು ಭೂ ಮಾಲೀಕರ ದಾಖಲೆಗಳು ಸುರಕ್ಷಿತವಾಗಿರುತ್ತವೆ. ತಾಲ್ಲೂಕಿನಲ್ಲಿ ಸುಮಾರು 95 ಲಕ್ಷ ಪ್ರತಿಗಳು ಸ್ಕ್ಯಾನ್ ಮಾಡುವ ಕಾರ್ಯ ಆರಂಭವಾಗಿದೆ. ಇದಕ್ಕಾಗಿ ಆರು ಜನ ಹೊರಗುತ್ತಿಗೆ ನೌಕರರು ಇಂದಿನಿಂದ ಸ್ಕ್ಯಾನ್ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡು ಕೆಲಸ ಮಾಡಲಿದ್ದಾರೆ. ಇದರಿಂದ ರೈತರಿಗೆ ಮತ್ತು ಭೂ ಮಾಲೀಕರಿಗೆ ತುಂಬಾ ಅನುಕೂಲವಾಗಿದೆ ಎಂದರು.
ತಹಶೀಲ್ದಾರ್ ಬಿ ಎನ್ ಸ್ವಾಮಿ ಅವರು ಮಾತನಾಡಿ ಎ ಮತ್ತು ಬಿ ವರ್ಗದ ಎರಡು ಕ್ಯಾಟಗಿರಿಯಲ್ಲಿ ದಾಖಲೆಗಳು ಸ್ಕ್ಯಾನ್ ಆಗುತ್ತವೆ. ಎ ಕ್ಯಾಟಗಿರಿಯ ಮಂಜೂರಾತಿ ದಾಖಲೆಗಳು ಶಾಶ್ವತವಾದ ದಾಖಲೆಗಳು, ಹಳೆಯ ಪಹಣಿ,ಮುಟೇಶನ್ ಎಲ್ಲಾ ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಮಾಡುವ ಕಾರ್ಯ ಆರಂಭಾವಗಿದೆ. ಆ ಎಲ್ಲಾ ದಾಖಲೆಗಳು ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಲಿದೆ. ರಾಜ್ಯ ಸರ್ಕಾರ “ಭೂಸುರಕ್ಷಾ ಯೋಜನೆ” ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಇದರಿಂದ ದಾಖಲೆಗಳು ಹಾಳಾಗುವುದಿಲ್ಲ. ತಿದ್ದುವುದಕ್ಕೆ ಆಗುವುದಿಲ್ಲ. ಎಲ್ಲಾ ದಾಖಲೆಗಳು ಸುರಕ್ಷಿತವಾಗಿರುತ್ತವೆ.
ನಮಗೆ ಎಲ್ಲಾ ದಾಖಲೆಗಳು ಸ್ಕ್ಯಾನ್ ಮಾಡುವುದಕ್ಕೆ ಆರು ತಿಂಗಳು ಟಾರ್ಗೆಟ್ ಇದೆ. ಸ್ಕ್ಯಾನ್ ಆದ ಬಳಿಕ ವೆಬ್ ಸೈಟ್ ನಲ್ಲಿ ದಾಖಲೆಗಳು ಅಪ್ಲೋಡ್ ಆಗುತ್ತವೆ. ಆ ಬಳಿಕ ಸಾರ್ವಜನಿಕರಿಗೆ ಮುಕ್ತವಾಗಿ ಆನ್ ಲೈನ್ ನಲ್ಲೆ ದಾಖಲೆಗಳು ಸಿಗುತ್ತವೆ ಎಂದರು.
ಈ ಸಂದರ್ಭದಲ್ಲಿ ಹಕ್ಕುದಾಖಲೆ ಶಿರಸ್ತೆದಾರ್ ಆಸೀಯಾಬೀ, ಶಾಸಕರ ಆಪ್ತರಾದ ತಾದೂರು ರಘು, ತಾಲ್ಲೂಕು ಕಛೇರಿ ಸಿಬ್ಬಂದಿ ಸಾರ್ವಜನಿಕರು ಹಾಜರಿದ್ದರು.