ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ.
‘ ಸಂವಿಧಾನ ಶಕ್ತಿ ನ್ಯೂಸ್ ‘ ಶಿಡ್ಲಘಟ್ಟ : ಸರ್ಕಾರದಿಂದ ಬರುವ ಅನುಧಾನ, ಜನರು ಕಟ್ಟುವ ತೆರಿಗೆ ಹಣ ದುರುಪಯೋಗವಾಗಬಾರದು. ಅಧಿಕಾರಿಗಳು ಕಾಟಾಚಾರಕ್ಕೆ ಮಾಹಿತಿ ನೀಡದೇ, ನಿಖರವಾದ ಸ್ಪಷ್ಟ ಮಾಹಿತಿಯನ್ನು ಸಭೆಯಲ್ಲಿ ಕೊಡಬೇಕು ಜೊತೆಗೆ ಸರ್ಕಾರದ ಯೋಜನೆಗಳು ಬಡವರಿಗೆ, ನಿಜವಾದ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ಎನ್ ರವಿಕುಮಾರ್ ತಾಕೀತು ಮಾಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಶುಕ್ರವಾರದಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಅಧಿಕಾರಿಗಳು ಸಭೆಯಲ್ಲಿ ಮಂಡಿಸಿದರು.
ತಾಲ್ಲೂಕಿನ ಹಿರೇಬಲ್ಲ ಗ್ರಾಮದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತುಂಬಾ ಸಮಸ್ಯೆಯಾಗಿದೆ. ಜೆಜೆಎಂ ಕಾಮಗಾರಿಯ ಗುಣ ಮಟ್ಟ ಪರಿಶೀಲಿಸಿ, ಕಾಮಗಾರಿಯ ಗುಣಮಟ್ಟ ಪರಿಶೀಲನೆಯ ನಂತರ ಕಳಪೆಯಾಗಿದ್ದರೆ ಯಾವುದೇ ಕಾರಣಕ್ಕೂ ಬಿಲ್ ಕೊಡಬಾರದು. ಕಾಮಗಾರಿ ಉತ್ತಮ ಗುಣಮಟ್ಟವಾಗಿದ್ದರೆ ಯಾರೋ ಒಬ್ಬರು ಕಳಪೆ ಎಂದು ಹೇಳಿದರೆ ಅದನ್ನ ಪರಿಗಣಿಸದೇ ಬಿಲ್ ಪಾವತಿ ಮಾಡಿ ಜೊತೆಗೆ ಟಿಸಿ ಅಳವಡಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಎಇಇ ಆದಿನಾರಾಯಣಪ್ಪ ಅವರಿಗೆ ಸೂಚಿಸಿದರು.
ಮುಂದುವರೆದು ಕೋಟಹಳ್ಳಿ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಇಲ್ಲದೆ ಸಮಸ್ಯೆಯಾಗಿದೆಯೆಂದು ಈ ಬಗ್ಗೆ ಗಮನಹರಿಸಬೇಕು ಎಂದು ಸಭೆಯಲ್ಲಿ ಪತ್ರಕರ್ತ ಕೋಟಹಳ್ಳಿ ಅನಿಲ್ ಕುಮಾರ್ ಅವರು ಶಾಸಕರ ಗಮನಕ್ಕೆ ತರಲಾಯಿತು. ಇದಕ್ಕೆ ಸ್ಪಂಧಿಸಿದ ಅವರು ಅಲ್ಲಿ ಸರ್ಕಾರದ ಆದೇಶ ಉಲ್ಲಂಘನೆಯಾಗಿದೆ. ಸರ್ಕಾರದ ಆದೇಶ ಪಾಲನೆಯಾಗಬೇಕು ಅಲ್ಲವೇ.? ಎಂದು ಸಿಡಿಪಿಓ ವಿದ್ಯಾವಸ್ತ್ರದ್ ಅವರನ್ನು ಸಭೆಯಲ್ಲೆ ಪ್ರಶ್ನಿಸಿದರು. ವೆಂಕಟಲಕ್ಷ್ಮಮ್ಮ ಎಂಬುವವರು ಮುಂಬಡ್ತಿ ಹೊಂದಿದ್ದರೂ ಸಹಾ ಅವರಿಗೆ ಕೆಲಸ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಸರ್ಕಾರದ ಆದೇಶ ಪಾಲನೆಯಾಗಬೇಕಲ್ಲವೇ ಎಂದರು. ಇದಕ್ಕೆ ಉತ್ತರಿಸಿದ ಅವರು ಗ್ರಾಮಸ್ಥರು ನಮ್ಮ ಊರಿನವರಿಗೇ ಬೇಕು ಎಂದು ಬೇಡಿಕೆಯಿಟ್ಟು ಅವರು ಕೆಲಸ ಮಾಡುವುದಕ್ಕೆ ಒಪ್ಪುತ್ತಿಲ್ಲ. ಈಗಾಗಲೇ ಮೇಲಾಧಿಕಾರಿಗಳು ನಾವು ಸಹಾ ಗ್ರಾಮಕ್ಕೆ ತೆರಳಿಸಿ ಗ್ರಾಮಸ್ಥರಿಗೆ ಮನವರಿಕೆ ಮಾಡಿದರೂ ಕೇಳುತ್ತಿಲ್ಲವೆಂದು ತಿಳಿಸಿದರು.
ಸ್ಥಳೀಯವಾಗಿ ಅಲ್ಲಿ ಯಾರೋ ಪ್ರತಿಷ್ಠೆಗೆ ತೆಗೆದುಕೊಂಡರೇ ಆಗುವುದಿಲ್ಲ. ಇದನ್ನು ಕೂಡಲೇ ಬಗೆಹರಿಸಬೇಕು ಎಂದು ಸಿಡಿಪಿಓ ವಿದ್ಯಾವಸ್ತ್ರದ್ ಅವರಿಗೆ ಶಾಸಕರು ತಾಕೀತು ಮಾಡಿದರು.
ನಾನು ಇಲ್ಲಿ (ಸಭೆಯಲ್ಲಿ) ಕುಳಿತ ಮೇಲೆ ಅಧಿಕಾರಿಗಳು ನಿಖರವಾದ ಮಾಹಿತಿ ಕೊಡಬೇಕು. ಮಾದ್ಯಮದವರು, ಬೇರೆ ಬೇರಯವರ ಮುಂದೆ ನಿಮಗೆ ನೋವಾಗುವಂತೆ ಮಾತನಾಡುವುದು ನನಗೆ ಇಷ್ಟ ಆಗುವುದಿಲ್ಲ. ಸಮಯ ವ್ಯರ್ಥ ಮಾಡುವುದು ಬೇಡ. ಪ್ರತಿವಾರ ಪ್ರತ್ಯೇಕವಾಗಿ ಒಂದೊಂದು ಇಲಾಖೆಯ ಅಧಿಕಾರಿಗಳ ರಿವ್ಯೂ ಮೀಟಿಂಗ್ ಕರೆಯುವಂತೆ ಇ.ಓ. ಹೇಮಾವತಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್ ಹೇಮಾವತಿ, ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳ, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.