ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ವಿವಿದೆಡೆ 50 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಯ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್ ಅವರು ತಿಳಿಸಿದರು.
ಗುರುವಾರ ತಾಲೂಕಿನ ಮುರುಗಮಲ್ಲ ಗ್ರಾಮದ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ, ತಾಲೂಕಿನ ಗ್ರಾಮಗಳ ಪರಿಮಿತಿಯ ಬೀದಿಗಳಿಗೆ ಕಾಂಕ್ರಿಟ್ ರಸ್ತೆ ಹಾಗೂ ಆರ್. ಆರ್. ಸಿ ಚರಂಡಿ ಸೇರಿದಂತೆ ವಿವಿಧ ಮೂಲ ಭೂತ ಸೌಕರ್ಯ ಗಳನ್ನು ನಿರ್ಮಿಸಲಾಗುವುದು ಎಂದರು.
ಮುರಗಮಲ್ಲ ಗ್ರಾಮದಿಂದ ಸೀಕಲ್ ಗ್ರಾಮದವರೆಗಿನ ರಸ್ತೆಯನ್ನು 8 ಮೀಟರ್ ನಷ್ಟು ಅಗಲೀಕರಣ ಗೊಳಿಸಲಾಗುವುದು. ಸದ್ಯಕ್ಕೆ ಡಿವೈಡರ್ ನಿರ್ಮಾಣಕ್ಕೆ ಅನುಮತಿ ಇಲ್ಲ. 50 ಕೊಟಿ ವೆಚ್ಚದ ಕಾಮಗಾರಿಯಲ್ಲಿ ಪ್ರತಿ ಗ್ರಾಮಕ್ಕೂ 600 ಮೀಟರ್ ಉದ್ದದ ಹಾಗೂ 2 ಅಡಿ ಎತ್ತರದ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಮಂತ್ರಿಗಳ ವಿಷೇಶ ಅನುದಾನ ಪಡೆದು ಮುಂದಿನ ದಿನಗಳಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಈ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಚಿಂತಾಮಣಿ ಯಿಂದ ಚೇಳೂರಿಗೆ ಚಲಿಸುವ ರಸ್ತೆಗೆ 10 ಕೋಟಿ ರೂ, ಬಾಗೇಪಲ್ಲಿ ರಸ್ತೆಗೆ 10 ಕೋಟಿ ರೂ ಹಾಗೂ ಇರಗಪಲ್ಲಿ ರಸ್ತೆಗೆ ಅನುದಾನ ವನ್ನು ನೀಡುವುದಾಗಿ ಭರವಸೆ ನೀಡಿದರು. ಉಳಿದಿರುವ ಗಡಿ ಗ್ರಾಮಗಳನ್ನು ಗುರುತಿಸಿ ಮೂಲಭೂತ ಸೌರ್ಕಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮದ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಸಮಸ್ಯೆಗಳಾಗದೇ ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಸಹಕಾರ ನೀಡಬೇಕು ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನೇಕ ಕೆಲಸದ ಒತ್ತಡದಿಂದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಅದ್ದರಿಂದ ಗ್ರಾಮಸ್ಥರು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೋಕೊಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್, ಪೋಲಿಸ್ ಇಲಾಖೆ ಸಿಬ್ಬಂದಿ, ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.