ಚಿಕ್ಕಬಳ್ಳಾಪುರ : ಕರ್ನಾಟಕ ಸರ್ಕಾರವು ಅಜೀಂ ಪ್ರೇಮ್ ಜೀ ಫೌಂಡೇಶನ್ ರವರೊಂದಿಗೆ 1 ರಿಂದ 10 ನೇ ತರಗತಿಯ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ವಾರದ ಆರು ದಿನಗಳಲ್ಲೂ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿಯ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲು ಮುಂದಿನ ಮೂರು ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.
ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ಅಜೀಂ ಪ್ರೇಮ್ ಜೀ ಫೌಂಡೇಶನ್ ರವರ ಸಹಭಾಗಿತ್ವದಲ್ಲಿ “ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಕ್ಷರ ದಾಸೋಹ ಯೋಜನೆಯಡಿ”ಯಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನಗಳು ಪೌಷ್ಠಿಕ ಆಹಾರವನ್ನು ವಿತರಿಸುವ ಜಿಲ್ಲಾ ಹಂತದ ಕಾರ್ಯಕ್ರಮಕ್ಕೆ ಮೊಟ್ಟೆ ಮತ್ತು ಬಾಳೆಹಣ್ಣುನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಪ್ರಸ್ತುತ ವಾರದಲ್ಲಿ ಎರಡು ದಿನ ನೀಡುತ್ತಿರುವ ಪೌಷ್ಠಿಕ ಆಹಾರವನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಕಾರದೊಂದಿಗೆ ವಾರದ ಆರು ದಿನಗಳಿಗೂ ವಿಸ್ತರಿಸಲಾಗಿದೆ. ವಾರ್ಷಿಕವಾಗಿ 1500 ಕೋಟಿ ಅನುದಾನದ ಅಗತ್ಯವಿದ್ದು, ಮುಂದಿನ 3 ವರ್ಷಗಳವರೆಗೆ ಪೌಷ್ಠಿಕ ಆಹಾರವನ್ನು ವಿತರಿಸಲು ಅಜೀಂ ಪ್ರೇಮ್ ಜೀ ಫೌಂಡೇಶನ್ ರವರು ಮುಂದೆ ಬಂದಿರುವುದು ಅಭಿನಂದಾರ್ಹ. ಅವರಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಪರವಾಗಿ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ರಾಜ್ಯ ಸರ್ಕಾರ ಮಕ್ಕಳಲ್ಲಿ ಅಪೌಷ್ಠಿಕತೆ ಸಮಸ್ಯೆಯನ್ನು ನಿವಾರಿಸಲು ಬಿಸಿ ಊಟ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಾಥಮಿಕ ಶಾಲಾ ಪೂರ್ವ ಮಕ್ಕಳು ಸೇರಿದಂತೆ 1 ರಿಂದ 10ನೇ ತರಗತಿ ವರೆಗೆ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 150 ಮಿ.ಲಿ ಹಾಲನ್ನು ವಾರದ 5 ದಿನ ನೀಡಲಾಗುತ್ತಿದೆ, ಜೊತೆಗೆ ಮಂಗಳವಾರ ಮತ್ತು ಶುಕ್ರವಾರ ಬೇಯಿಸಿದ ಮೊಟ್ಟೆಯನ್ನು ಹಾಗೂ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ಮತ್ತು ಶೇಂಗಾ ಚಿಕ್ಕಿಯನ್ನು ನೀಡಲಾಗುತ್ತಿತ್ತು, ಈ ಯೋಜನೆಯನ್ನು ಸೆಪ್ಟೆಂಬರ್ 25 ರಿಂದ ವಾರದ ಆರು ದಿನಗಳಿಗೂ ವಿಸ್ತರಿಸಿರುವುದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೆಚ್ಚು ಪೂರಕವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1601 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪೈಕಿ 1 ರಿಂದ 10ನೇ ತರಗತಿವರೆಗೆ 77,691 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವ ಪಡೆಯುತ್ತಿದ್ದು, ಈ ಪೈಕಿ 66194 ಮಕ್ಕಳು ಬೇಯಿಸಿದ ಮೊಟ್ಟೆ, 7326 ಮಕ್ಕಳು ಬಾಳೆಹಣ್ಣು ಮತ್ತು 4171 ವಿದ್ಯಾರ್ಥಿಗಳು ಶೇಂಗಾ ಚಿಕ್ಕಿಯ ಪೌಷ್ಠಿಕ ಆಹಾರವನ್ನು ಕಳೆದ ಮೂರು ದಿನಗಳಿಂದ ಸ್ವೀಕರಿಸಿದ್ದಾರೆ ಎಂದರು.
ಸರ್ಕಾರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಿದೆ, ಇದರ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಜನೆಯ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಹಾಗೂ ಸಕ್ರೀಯವಾಗಿ ತೊಡಗಿಸಿಕೊಂಡು ಪ್ರತಿಭಾವಂತರಾಗಬೇಕು. ಅಂತರ್ಜಾಲ ಸೇರಿದಂತೆ ಇತ್ತೀಚಿನ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿಕೊಂಡು ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆ ಅರಿತುಕೊಳ್ಳಬೇಕು. ಆಂಗ್ಲಭಾಷೆಯಲ್ಲಿ ಮಾತನಾಡುವ ಹವ್ಯಾಸವನ್ನು ಶಾಲಾ ವಾತಾವರಣದಲ್ಲಿ ಮಕ್ಕಳು ಬೆಳೆಸಿಕೊಳ್ಳಬೇಕು. ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಸಂಪೂರ್ಣವಾಗಿ ಕಡಿಮೆ ಆಗುವ ರೀತಿಯಲ್ಲಿ ಶಿಕ್ಷಕರು ಬದ್ದತೆಯಿಂದ ಬೋಧನೆಗಳನ್ನು ಮಾಡಬೇಕು ಎಂದು ತಿಳಿಸಿದರು.
ಕನ್ನಡ ಭವನಕ್ಕೆ 6.2 ಕೋಟಿ ಅನುದಾನ : ಜಿಲ್ಲಾ ಕೇಂದ್ರದಲ್ಲಿ 12 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಭವನದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಬಾಕಿ 6.25 ಕೋಟಿ ಅನುದಾನದ ಅಗತ್ಯವಿರುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಮತ್ತು ಸಂಪುಟ ಸಚಿವರ ಸಹಕಾರದಿಂದ ಈ ಅನುದಾನ ಬಿಡುಗಡೆಗೆ ನೆನ್ನೆ ನಡೆದ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಈ ಬಗ್ಗೆ ಒಂದು ವಾರದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಸೌಂಡ್ ಸಿಸ್ಟಂ, ಅಗ್ನಿ ಶಾಮಕ ಸುರಕ್ಷತಾ ವ್ಯವಸ್ಥೆ, ಹವಾನಿಯಂತ್ರಣ ವ್ಯವಸ್ಥೆ ಸೇರಿದಂತೆ ಇನ್ನಿತರ ಇಂಟೀರಿಯರ್ ಕಾಮಗಾರಿಗಳನ್ನು ಆದಷ್ಟು ಶೀರ್ಘವೇ ಪೂರ್ಣಗೊಳಿಸಲು ಯೋಜನಾ ಅಭಿಯಂತರರಿಗೆ ಹಾಗೂ ಗುತ್ತಿದಾರರಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಈ ವೇಳೆ ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರೆಡ್ಡಿಗೊಲ್ಲವಾರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿನುತ ಅವರು ಮಾತನಾಡಿ, ನಮ್ಮ ಶಾಲೆಯು 4.10 ಎಕರೆ ಜಾಗದಲ್ಲಿ ನಡೆಯುತ್ತಿದ್ದು, 114 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಕಲಿಕೆಗೆ ಪೂರಕವಾದ ಸಕಲ ವ್ಯವಸ್ಥೆಗಳು ಹಾಗೂ ಉತ್ತಮ ಬೋಧಕ ವರ್ಗವಿರುತ್ತದೆ. ನಮ್ಮ ಶಾಲಾ ಆವರಣ ನಿರ್ಮಾಣ ಹಾಗೂ ಕ್ರೀಡಾ ಮೈದಾನ ಅಭಿವೃದ್ಧಿಗೆ ಅನುದಾನ ಬೇಕಾಗಿರುತ್ತದೆ. ಶಾಲಾ ಅವಧಿಗೆ ಪೂರಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧ ಪಟ್ಟವರಿಗೆ ತಿಳಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಆರೋಗ್ಯಾಧಿಕಾರಿ ಎಸ್. ಎಸ್ ಮಹೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪಿ.ಬೈಲಾಂಜಿನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಕೆ,ಎನ್ ಕೇಶವ ರೆಡ್ಡಿ, ತಹಸೀಲ್ದಾರ್ ಅನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಸಹಾಯಕ ನಿರ್ದೇಶಕ ಆಂಜನೇಯ, ನರಸಿಂಹಪ್ಪ, ವಿಷಯ ಪರಿವೀಕ್ಷಕ ಲಕ್ಷ್ಮೀಕಾಂತ್, ದೊಡ್ಡ ಪೈಲಗುರ್ಕಿ ಗ್ರಾಮ ಪಂಚಾಯತ್ತಿ ಅಧ್ಯಕ್ಷರಾದ ಗಾಯಿತ್ರಿ ಸತೀಶ್, ಉಪಾಧ್ಯಕ್ಷ ನಾಗರಾಜು, ಅಕ್ಷರ ದಾಸೋಹ ಅಧಿಕಾರಿ ಬಿ.ರೇಣುಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ರೆಡ್ಡಪ್ಪ, ಸದಸ್ಯರಾದ ಭವ್ಯ, ಬೋಧಕ, ಬೋಧಕೇತರ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಮಕ್ಕಳು ಇದ್ದರು.