Tuesday, January 14, 2025
Homeಜಿಲ್ಲೆನಂದಿಗಿರಿ ಧಾಮದಲ್ಲಿ ಸಚಿವ ಸಂಪುಟ ಸಭೆಗೆ ಚಿಂತನೆ: ಸಚಿವ ಡಾ.ಎಂ.ಸಿ ಸುಧಾಕರ್

ನಂದಿಗಿರಿ ಧಾಮದಲ್ಲಿ ಸಚಿವ ಸಂಪುಟ ಸಭೆಗೆ ಚಿಂತನೆ: ಸಚಿವ ಡಾ.ಎಂ.ಸಿ ಸುಧಾಕರ್

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನೆಡಸುವಂತೆ ಕೋರಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದಾರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ ಸುಧಾಕರ್ ಅವರು ತಿಳಿಸಿದರು.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾಲೇಜು ಮತ್ತು ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ನೂತನ ಕಟ್ಟಡದ ಶಂಕು ಸ್ಥಾಪನೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು 1927ರಲ್ಲಿ 45 ದಿನ ಮತ್ತು 1936 ರಲ್ಲಿ 20 ದಿನ ಒಟ್ಟು 65 ದಿನ ನಂದಿ ಬೆಟ್ಟದಲ್ಲಿ ವಾಸ್ತವ್ಯ ಮಾಡಿ ಆರೋಗ್ಯವನ್ನು ಸುಧಾರಿಸಿಕೊಂಡಿದ್ದರು. ಇಂತಹ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಗಾಂಧೀಜಿಯವರ ಹೆಜ್ಜೆ ಗುರುತುಗಳಿರುವ ಜಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಬೇಕೆಂದು ಚಿಂತನೆ ಇದೆ. ಸದ್ಯದಲ್ಲೆ ಚಾಮರಾಜ ನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲಿಯೂ ಕೂಡ ಸಭೆ ನಡೆಯಬೇಕು. ನಂದಿ ಗಿರಿಧಾಮದ ರಾಜ್ಯದ ಏಕೈಕ ರೋಪ್ ವೇ ಕಾಮಗಾರಿಗೆ ವೇಗ ನೀಡಬೇಕು ಹಾಗೂ ಈ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಸಳೆಯುವ ನಿಟ್ಟಿನಲ್ಲಿ ಸಂಪುಟ ಸಭೆ ಸಹಕಾರಿಯಾಗಲಿದ್ದು ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.

ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಮಹತ್ತರವಾದ ಸುಧಾರಣೆಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ವಿಶ್ವ ಬ್ಯಾಂಕಿನಿಂದ 2500 ಕೋಟಿಗಳ ಸಾಲವನ್ನು ಪಡೆಯಲು ರಾಜ್ಯ ಸರ್ಕಾರ ಸಂಪುಟದ ಅನುಮತಿಯನ್ನು ಪಡೆಯಲಾಗಿದೆ. ಈ ಅನುದಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಉದ್ಯೋಗ ಖಾತರಿಪಡಿಸುವಂತಹ ಮತ್ತಷ್ಟು ಕೋರ್ಸ್ ಗಳನ್ನು ಪ್ರಾರಂಭಿಸಲಾಗುವುದು, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭಿಸಲಾಗಿರುವ AEDP ಕೌಶಲ್ಯ ಆಧಾರಿತ ಪದವಿ ತರಗತಿಗಳಿಗೆ ರಾಜ್ಯದಲ್ಲಿ 1600 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಸಹ ನೇರವಾಗಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ 2024-25 ನೇ ಸಾಲಿನಲ್ಲಿ ಕೌಶಲ್ಯಾಧಾರಿತ AEDP (Apprenticeship Embedded Degree Program) ಶೈಕ್ಷಣಿಕ ಕೋರ್ಸುಗಳನ್ನು ಪರಿಚಯಿಸಿದೆ. ಬಿಕಾಂ ಲಾಜಿಸ್ಟಿಕ್, E- ಕಾಮರ್ಸ್, ಬಿಕಾಂ ರೀಟೈಲ್ ಮತ್ತು BFSI ಕೋರ್ಸ್ ಗಳನ್ನು ಈ ವರ್ಷ ಆರಂಭಿಸಲಾಗಿದ್ದು ಈ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಪ್ರತ್ಯೇಕ ಪಠ್ಯ ಚಟುವಟಿಕೆಗಳಲ್ಲಿ ತರಬೇತಿ ನೀಡಿ ಅಂತಿಮ ವರ್ಷದ ಐದು ಮತ್ತು ಆರನೇ ಸೆಮಿಸ್ಟರ್ ವೇಳೆಗೆ ನೇರವಾಗಿ ಕಂಪೆನಿಗಳಲ್ಲಿ ಉದ್ಯೋಗವಕಾಶಗಳನ್ನು ಶಿಷ್ಯವೇತನದೊಂದಿಗೆ ನೀಡಲಾಗುವುದು. ಶಿಷ್ಯವೇತನವು 8000 ದಿಂದ ಆರಂಭವಾಗಿ 20 ಸಾವಿರದ ವರೆಗೂ ಇರಲಿದೆ. ಈ ಮಾದರಿಯ ಶೈಕ್ಷಣಿಕ ವ್ಯವಸ್ಥೆಯನ್ನು ಜಾರಿಗೆ ತಂದು ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಸರ್ಕಾರ ಮುಂದಾಗಿದೆ ಈ ನಿಟ್ಟಿನಲ್ಲಿ ಮತ್ತಷ್ಟು ಪರಿಣಾಮಕಾರಿ ಯುಕ್ತ ಕ್ರಮಗಳನ್ನು ಕೈಗೊಂಡು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು 5.87 ಕೋಟಿಯಲ್ಲಿ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳನ್ನು 3.18 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಇಂದು ಶಂಕು ಸ್ಥಾಪನೆಯನ್ನು ನೆರವೇರಿಸಲಾಗಿದೆ. ಈ ನೂತನ ಕಟ್ಟಡಗಳನ್ನು ಖಾಸಗಿ ಕಾಲೇಜುಗಳನ್ನು ಮೀರಿಸುವಂತೆ ನಿರ್ಮಾಣ ಮಾಡಲಾಗುತ್ತದೆ. ಈ ಭಾಗದ ಕಾಲೇಜುಗಳಲ್ಲಿ ಮೂಲಭೂತವಾಗಿ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಅನುದಾನ ನೀಡಲಾಗುವುದು. ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಪ್ರಾಂಶುಪಾಲರುಗಳಿಗೆ ತಿಳಿಸಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ತೆರೆಯಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಭವನ ಉದ್ಘಾಟನೆ : ಜಿಲ್ಲೆಯಲ್ಲಿ ಆಧುನಿಕ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಜಿಲ್ಲಾ ಕನ್ನಡ ಭವನವನ್ನು ಈ ತಿಂಗಳ ಅಂತ್ಯದೊಳಗೆ ಫೆಬ್ರವರಿ ಮಾಹೆಯಲ್ಲಿ ಉದ್ಘಾಟನೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಭವನದಲ್ಲಿ ಆಯೋಜಿಸಲು ಯೋಜಿಸಲಾಗಿದೆ. ಅತ್ಯಂತ ಯೋಜಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಬೇಕಾಗುವಂತಹ ಎಲ್ಲಾ ವ್ಯವಸ್ಥೆಗಳನ್ನು ಈ ಭವನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷರಾದ ಎ. ಗಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮುನಿರಾಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಯ್ಯ ಹಾಗೂ ಬೋಧಕ ಬೋಧಕೇತರ ಆಡಳಿತ ವರ್ಗದವರು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!