ಉನ್ನತೀಕರಿಸಿದ ಆರೋಗ್ಯ ಕೇಂದ್ರ, ಪ್ರಯೋಗಾಲಯ ಕಟ್ಟಡ, ಲೋಕಾರ್ಪಣೆ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಜೊತೆ ಕಾಂಗ್ರೇಸ್ ಪಕ್ಷದ ಮುಖಂಡರು ಭಾಗಿ, ಶಾಸಕರ ಬೆಂಬಲಿಗರಿಂದ ಆಕ್ರೋಶ.
ಶಿಡ್ಲಘಟ್ಟ : ಐವತ್ತು ಹಾಸಿಗೆಗಳಿರುವ ಆಸ್ಪತ್ರೆಯನ್ನ 100 ಹಾಸಿಗೆಗಳ ( ಬೆಡ್) ವ್ಯವಸ್ಥೆ ಮಾಡಿಕೊಡಲಾಗುವುದು ಇದಕ್ಕೆ ಸ್ಥಳ ನಿಗಧಿ ಮಾಡಿಕೊಡಬೇಕು. ಸುಸಜ್ಜಿತವಾದ ಕಟ್ಟಡವನ್ನ ನಿರ್ಮಿಸಲಾಗುವುದು ಇದರಿಂದ ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಶನಿವಾರದಂದು ಪ್ರವಾಸ ಹಮ್ಮಿಕೊಂಡಿದ್ದ ಅವರು ಮದ್ಯಾಹ್ನದ ವೇಳೆಗೆ ಶಿಡ್ಲಘಟ್ಟಕ್ಕೆ ಆಗಮಿಸಿದ ಅವರು ಆರೋಗ್ಯ ಇಲಾಖೆಯಿಂದ ಏರ್ಪಡಿಸಿಸ್ದ ವಿವಿಧ ಅಭಿವೃದ್ದಿ ಕಾಮಗಾರಿ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರತ್ಯೇಕ ಇಎಸ್ಐ ಆಸ್ಪತ್ರೆಯ ಮಾಡುವುದಕ್ಕೆ ಬರುವುದಿಲ್ಲ. ಜಾಗದ ಕೊರತೆಯಿದೆ ಸ್ಥಳ ನಿಗಧಿಯಾದರೆ ನೂರು ಬೆಡ್ ವ್ಯವಸ್ಥೆಯ ಆಸ್ಪತ್ರೆ ಮಾಡಲಾಗುವುದು. ಡಯಾಲಿಸಿಸ್ ಕೇಂದ್ರವನ್ನೂ ಉದ್ಘಾಟನೆ ಮಾಡಲಾಗಿದೆ.ರಾಜ್ಯದಲ್ಲಿ ಈ ಹಿಂದೆ 170 ಡಯಾಲಿಸಿಸ್ ಕೇಂದ್ರಗಳಿದ್ದವು, ನಮ್ಮ ಸರ್ಕಾರಕ್ಕೆ ಬಂದ ನಂತರ 42 ಡಯಾಲಿಸಿ್ ಕೇಂದ್ರಗಳು ಹೆಚ್ಚು ಪ್ರಾರಂಭಿಸಿದ್ದು, ಪ್ರಸ್ತುತ ರಾಜ್ಯದಲ್ಲಿ 212 ಕೇಂದ್ರಗಳಿದ್ದು, ಉತ್ತಮವಾಗಿ ನಿರ್ವಹಣೆ ಮಾಡುವ ಏಜೆನ್ಸಿಗೆ ಜವಬ್ದಾರಿ ನೀಡಲಾಗಿದೆ ಎಂದರು.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಬಿಪಿಹೆಚ್.ಯು ಪ್ರಯೋಗಾಲಯ ಕಟ್ಟಡ ಹಾಗೂ 12 ಹಾಸಿಗೆಗಳ ಐಸೋಲೇಷನ್ ವಾರ್ಡ್, ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ, ಸೇರಿದಂತೆ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಕಟ್ಟಡ ಶಂಕು ಸ್ಥಾಪನೆ ಕಾಮಗಾರಿಗಳಿಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಒಂದೇ ಕಡೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಬೃಹತ್ ಗಾತ್ರದ ಏಲಕ್ಕಿ ಹಾರವನ್ನ ಹಾಕುವ ಮೂಲಕ ಸ್ವಾಗತಿಸಿ ಗೌರವ ಸಲ್ಲಿಸಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಜೊತೆಯಲ್ಲಿ ಕಾಂಗ್ರೆಸ್ ಮುಖಂಡರು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಸ್ವಂತ ಪಕ್ಷದ ಕಾರ್ಯಕ್ರಮವೋ ಅವರ ಮನೆಯಲ್ಲಿ ಮಾಡಿಕೊಳ್ಳಲಿ ಪ್ರೊಟೊಕಾಲ್ (ಶಿಷ್ಠಾಚಾರ) ಪ್ರಕಾರ ಕಾರ್ಯಕ್ರಮ ನಡೆಯಬೇಕು ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಯಿತು. ಸರಿಯಾದ ವ್ಯವಸ್ಥೆಯಿಲ್ಲದೆ ಇದ್ದರಿಂದ ಶಂಕುಸ್ಥಾಪನೆ, ಉದ್ಘಾಟನೆಯ ಚಿತ್ರವನ್ನು ಸೆರೆಹಿಡಿಯಲು ಪತ್ರಕರ್ತರು ಹರಸಾಹಸ ಪಡುವ ಪರಿಸ್ಥಿತಿ ಎದುರಾಯಿತು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ , ಶಾಸಕ ಬಿ.ಎನ್ ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಜಿ ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಸ್.ಎಸ್. ಮಹೇಶ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಮನೋಹರ್, ಸೇರಿದಂತೆ ತಾಲ್ಲೂಕು ಮಟ್ಟದ , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ