ಹಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ.
ಶಿಡ್ಲಘಟ್ಟ: ಮಹರ್ಷಿ ವಾಲ್ಮೀಕಿ ಅವರು ನಾರದಮುನಿಯಿಂದ ಪರಿವರ್ತನೆಯಾಗಿ ರಾಮಾಯಣ ಬರೆದಿದ್ದಾರೆ. ನಮ್ಮ ಜೀವನದಲ್ಲೂ ಸಹ ಶಿಕ್ಷಕರು, ತಂದೆ-ತಾಯಿ ಯಾರು ಬೇಕಾದರೂ ನಾರದಮುನಿಯಾಗಬಹುದು. ನಮ್ಮ ಇಂದಿನ ಯುವ ಪೀಳಿಗೆ ರಾಮಾಯಣದಲ್ಲಿನ ಪ್ರೇರಣೆ, ತತ್ವ ಸಿದ್ದಾಂತಗಳು ಉತ್ತಮ ಸಂದೇಶ ಅರಿತುಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಉತ್ತಮ ಜ್ಙಾನ ನೀಡಿದಾಗ ಮಕ್ಕಳು ಉತ್ತಮ ರೀತಿಯಲ್ಲಿ ನಡೆದುಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗುತ್ತಾರೆ ಎಂದು. ಸಮಾಜ ಸೇವಕ ಹಾಗೂ ಖ್ಯಾತ ಉದ್ಯಮಿ ಹೆಚ್.ಆರ್. ಸಂದೀಪ್ ರೆಡ್ಡಿ ಹೇಳಿದರು.
ತಾಲ್ಲೂಕಿನ ಸಾದಲಿ ಹೋಬಳಿಯ ತಮ್ಮ ಸ್ವ ಗ್ರಾಮ ಹಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಮಾಯಣದಿಂದ ರಾಮನ ನಾಯಕತ್ವ, ಸೀತೆಯ ಪ್ರಾಮಾಣಿಕತೆ, ಗಾಂಭೀರತೆ ಕಲಿಯಬೇಕು. ರಾಮನು ತಂದೆ-ತಾಯಿಯನ್ನು ನೋಡಿಕೊಂಡಿದ್ದು, ಲಕ್ಷ್ಮಣ ಅಣ್ಣನ ಮಾತಿಗೆ ಎಷ್ಟು ಗೌರವ ಕೊಟ್ಟು ನಡೆದುಕೊಳ್ಳುತ್ತಿದ್ದರು. ಅಣ್ಣ ತಮ್ಮಂದಿರ ಸಂಬಂಧ ಹೇಗೆ ಇರುಬೇಕು ಎಂಬುವುದು ನಾವೆಲ್ಲರೂ ಕಲಿಯಬೇಕು ಎಂದರು.
ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೇಸ್ ಸರ್ಕಾರ ಗ್ಯಾರಂಟಿಗಳ ಭರವಸೆಯ ಮೂಲಕ ಅಧಿಕಾರಕ್ಕೆ ಬಂದಿದೆ. ನಮ್ಮ ಭಾಗದಲ್ಲಿ ಅತೀ ಹೆಚ್ಚು ವಾಲ್ಮೀಕಿ ಸಮುದಾಯದ ಜನ ಇದ್ದಾರೆ. ಸರ್ಕಾರ ಮೀಸಲಾತಿ ಜಾರಿ ವಿಚಾರವಾಗಿ ವಿಳಂಭ ಮಾಡುತ್ತಿದ್ದು, ಈ ಸಮುದಾಯದ ಜನರಿಗೆ, ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಹೆಚ್ಚು ಮೀಸಲಾತಿ ಕಲ್ಪಿಸಬೇಕು. ಹಿಂದುಳಿದ ಸಮುದಾಯಗಳು ಅಭಿವೃದ್ದಿಯಾಗಿ ಮುಂದೆ ಬರಬೇಕು. ನಮ್ಮ ಭಾಗದಲ್ಲಿ ಕೈಗಾರಿಕೆಗಳು ಬರಬೇಕು. ಯುವಕ-ಯುವತಿಯರಿಗೆ ಉದ್ಯೋಗವಕಾಶ ಸೃಷ್ಟಿಯಾಗಬೇಕು. ಈ ಭಾಗದಲ್ಲೆ ರಾಷ್ಟ್ರೀಯ ಹೆದ್ದಾರಿ ಇದೆ. ಈ ಭಾಗದ ಜನರು ಯಾವುದೇ ಪಕ್ಷದ ನಾಯಕರನ್ನು ಬೇಟಿ ಮಾಡುವುದಕ್ಕೆ ಕಾಯುವ ಪರಿಸ್ಥಿತಿ ಇದೆ. ಇದೆಲ್ಲವೂ ಬದಲಾಗಬೇಕು. ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಪೋಟೋಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಸರ್ಕಾರಿ ಕಛೇರಿಯಲ್ಲಿ ಹುದ್ದೆಗಳು ಖಾಲಿ ಇವೆ. ಸಿಬ್ಬಂದಿಯೇ ಇಲ್ಲ ಹೀಗಿರುವಾಗ ಸಾರ್ವಜನಿಕರ ಕೆಲಸ ಹೇಗೆ ಸಾಧ್ಯವಾಗುತ್ತದೆ. ನಮ್ಮ ಕ್ಷೇತ್ರದ ಜನತೆಗೆ ಉದ್ಯೋಗ ಸಿಗಬೇಕು. ಎಂದರು.
ನಮ್ಮ ಊರಿನ ಸರ್ಕಾರಿ ಶಾಲೆಯ ದಾಖಲಾತಿ 42 ಮಕ್ಕಳಿದ್ದು, ಮುಂದಿನ ವರ್ಷಕ್ಕೆ ಇದು ಎರಡು ಪಟ್ಟು ಆಗುತ್ತದೆ. ಸರ್ಕಾರಿ ಶಾಲೆಯಲ್ಲಿ ಹೆಚ್ಚು ದಾಖಲಾತಿ ಆಗಬೇಕು ಹಳೇಹಳ್ಳಿ ಶಾಲೆ ಇಡೀ ತಾಲ್ಲೂಕಿಗೆ ಮಾದರಿಯಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸುವುದಕ್ಕೆ ನಾನು ಕಂಕಣ ತೊಟ್ಟಿದ್ದೇನೆಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಟ್ರಾಕ್ ಸೂಟ್ ಸಮವಸ್ತ್ರ ವಿತರಿಸಿದರು. ಹಾಗೂ ವಾಲ್ಮೀಕಿ ಸಂಘದಿಂದ ಮಕ್ಕಳಿಗೆ ತಟ್ಟೆ ಲೋಟ ವಿತರಣೆ ಮಾಡಲಾಯಿತು. ಬಳಿಕ ತಲಕಾಯಲಬೆಟ್ಟದ ಟಿ ವೆಂಕಟಾಪುರ ಬಳಿಯಿರುವ ಮಹರ್ಷಿ ವಾಲ್ಮೀಕಿ ದೇವಾಲಯಕ್ಕೆ ಸಂದೀಪ್ ರೆಡ್ಡಿ ಅವರು ಬೇಟಿ ನೀಡಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸುಬ್ಬಣ್ಣ, ಶಾಲೆಯ ಶಿಕ್ಷಕರಾದ ಮಂಜುನಾಥ್, ದೀಪ, ಮುನಿರತ್ನ, ವೆಂಕಟಲಕ್ಷ್ಮಮ್ಮ, ನಾಗಮಣಿ, ಅಮ್ಮಜಾನ್, ಸೇರಿದಂತೆ ಊರಿನ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ಪುಟಾಣಿ ಮಕ್ಕಳು ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ