ಶಿಡ್ಲಘಟ್ಟ : ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಬುಧವಾರದಂದು ಲೋಕಾಯುಕ್ತರಿಂದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸಭೆ ನಡೆಯಿತು.
ಲೋಕಾಯುಕ್ತ ಎಸ್.ಪಿ ಡಾ.ರಾಮ್ ಎಲ್ ಅರಸಿದ್ದಿ ಅವರು ಮಾತನಾಡಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ವಿಳಂಭ ಮಾಡದೇ ನಿಗಧಿತ ಅವಧಿಯಲ್ಲಿ ನಿಯಮಾನುಸಾರವಾಗಿ ಕೆಲಸ ಮಾಡಿಕೊಡಿ, ಒಂದು ವೇಳೆ ಕಾನೂನು ತೊಡಕು ಇದ್ದಲ್ಲಿ ಅದಕ್ಕೆ ಸೂಕ್ತ ಕಾರಣದೊಂದಿಗೆ ಹಿಂಬರಹ ನೀಡುವ ಕೆಲಸ ಮಾಡಬೇಕು. ಸರ್ಕಾರದ ಕೆಲಸ ಮಾಡಿಕೊಡಲು ಸಾರ್ವಜನಿಕರಿಂದ ಹಣ ಕೇಳಿದರೆ ಟ್ರ್ಯಾಪ್ ಮಾಡ್ತೇವೆ ಅರೆಸ್ಟ್ ಮಾಡುತ್ತೇವೆ. ಹಾಗೂ ಕಾಮಗಾರಿ ಕಳಪೆ ಮಾಡಿದರೂ ಸಹ ದೂರು ಕೊಟ್ಟಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಒಳ್ಳೆಯ ಅಧಿಕಾರಿಗಳಿಗೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಜಿಲ್ಲೆಯಲ್ಲೆ ನಾವು ಮಾಹಿತಿ ಪಡೆದುಕೊಂಡಿದ್ದು ಎಲ್ಲರಿಗಿಂತ ಹೆಚ್ಚು ಕಾಳಜಿ ವಹಿಸಿ ಪರಿಪೂರ್ಣವಾಗಿ ಇ.ಆಫೀಸ್ ಅಳವಡಿಸಿಕೊಂಡು ಸಾರ್ವಜನಿಕರ ಕೆಲಸ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 05 ಅರ್ಜಿಗಳು, ಎಡಿಎಲ್.ಆರ್ ಸರ್ವೆ ಇಲಾಖೆ 02 ಅರ್ಜಿಗಳು ಒಟ್ಟು 07 ಅರ್ಜಿಗಳು ಸಾರ್ವಜನಿಕರಿಂದ ಲೋಕಾಯುಕ್ತರಿಗೆ ಸಲ್ಲಿಕೆಯಾದವು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ವಿರೇಂದ್ರ ಕುಮಾರ್ , ತಹಶೀಲ್ದಾರ್ ಬಿ.ಎನ್ ಸ್ವಾಮಿ, ಇ.ಓ. ನಾರಾಯಣ್, ನಗರಸಭೆ ಪೌರಾಯುಕ್ತ ಮಂಜುನಾಥ್, ಲೋಕಾಯುಕ್ತ ಸಿಬ್ಬಂದಿ ಅರುಣ್ ಕುಮಾರ್, ಜಯಮ್ಮ, ಮಾಳಪ್ಪ, ಗುರುಮೂರ್ತಿ, ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.