ಭ್ರಷ್ಟರ ಬಳಿ ಕೋಟ್ಯಾಂತರ ಚಿನ್ನ, ಬೆಳ್ಳಿ ಅಕ್ರಮ ಸಂಪತ್ತು ಪತ್ತೆ.!
ಬೆಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ರಾಜ್ಯದ 56 ಸ್ಥಳಗಳಲ್ಲಿ ಭ್ರಷ್ಟ 11 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದು, ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿಪಾಸ್ತಿಗಳ ದಾಖಲೆ ಪತ್ರಗಳು ವಶಪಡಿಸಿಕೊಂಡಿದ್ದಾರೆ.ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬರೋಬ್ಬರಿ 100 ಅಧಿಕಾರಗಳ ತಂಡ ಏಕಕಾಲಕ್ಕೆ ದಾಳಿ ಮಾಡಿ ಭ್ರಷ್ಟರಿಗೆ ಶಾಕ್ ನೀಡಿದೆ.
ಬೆಂಗಳೂರು, ಹಾಸನ, ಕೋಲಾರ, ಮೈಸೂರು, ದಾವಣಗೆರೆ, ಬಳ್ಳಾರಿ, ಧಾರವಾಡ, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ದಾಳಿ ತೀವ್ರ ತಪಾಸಣೆ ಕೈಗೊಂಡಿದ್ದು, ಈ ವೇಳೆ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ಕೆಂಗೇರಿ ವಿಭಾಗದಲ್ಲಿರುವ ಕಂದಾಯ ಅಧಿಕಾರಿ ಬಸವರಾಜ ಮಾಗಿ ಅವರು ಮೂಲತಃ ಕಲಬುರಗಿಯವರಾಗಿದ್ದು, ಬೆಂಗಳೂರು ಹಾಗೂ ಕಲಬುರಗಿ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಬಂಗಾರ, ನಗದು ಹಣ ಪತ್ತೆಯಾಗಿದೆ. ಇದಲ್ಲದೆ ಲಕ್ಷಾಂತರ ಮೊತ್ತದ ಕ್ಯಾಸಿನೋ ಕಾಯಿನ್‌ಗಳೂ ಪತ್ತೆಯಾಗಿದ್ದನ್ನು ಕಂಡ ಲೋಕಾಯುಕ್ತ ಅಧಿಕಾರಿಗಳು ಹೌಹಾರಿದ್ದಾರೆ. ಮಂಡ್ಯ ನಗರದ ನಿವೃತ್ತ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಿವರಾಜ್ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿರುವ ಫಾರ್ಮಹೌಸ್, ಶಿವರಾಜ್ ತಂದೆ ಮನೆ ಹಾಗೂ ಇವರು ಜಲ್ಲಿ ಕ್ರಷರ್ ವ್ಯವಹಾರ ಹೊಂದಿದ್ದು ಅಲ್ಲೂ ಕೂಡ ದಾಳಿ ನಡೆದಿದೆ. ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಹಾಸನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಉತ್ತರ ದಾಸನಪುರ ಗ್ರಾಪಂ ಕಾರ್ಯದರ್ಶಿ ಎನ್.ಎಂ.ಜಗದೀಶ್ ಗೆ ಚುರುಕು ಮುಟ್ಟಿಸಿದ್ದಾರೆ. ಹಾಸನದ ಅವರ ಮನೆ, ಬೆಂಗಳೂರಿನಲ್ಲಿರುವ ಮನೆಗಳಲ್ಲಿ ದಾಖಲೆ ಪರಿಶೀಲಿಸಿ ಅಕ್ರಮ ಸಂಪತ್ತು ಪತ್ತೆಹಚ್ಚಿದ್ದಾರೆ.
ಮೈಸೂರಿನಲ್ಲಿ ನೀರಾವರಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಹೇಶ್ ಅವರ ಜೆಸಿ ನಗರದಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗೋಕುಲಂನಲ್ಲಿರುವ ಕಚೇರಿಯಲ್ಲಿಯೂ ದಾಳಿ ನಡೆದಿದ್ದು ಹಲವು ಕಡೆ ನಿವೇಶನ, ಕೃಷಿ ಜಮೀನು ಸೇರಿ ನಗದು, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಬೆಳಗಾವಿ ಜಿಪಂ ಎಇಇ ಮಹದೇವ ಬನ್ನೂರ ಅವರ ಮನೆಗೆ ಲಗ್ಗೆ ಹಾಕಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರ ಹೊರವಲಯದಲ್ಲಿರುವ ಬನ್ನೂರ ಅವರಿಗೆ ಸೇರಿದ ಮನೆಯಲ್ಲಿ ತಪಾಸಣೆ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗದಲ್ಲಿ ನಿವೃತ್ತ ಇಂಜಿನಿಯರ್ ಎಂ. ರವೀಂದ್ರಗೆ ಸೇರಿದ ಮನೆ, ಹಿರಿಯೂರು ತಾಲೂಕಿನ ಸೂಗೂರು ಫಾರ್ಮಹೌಸ್ ಹಾಗೂ ಐಮಂಗಲ ಬಳಿ ಬಾಟಲಿ ಫ್ಯಾಕ್ಟರಿ ಮೇಲೂ ಏಕಕಾಲದಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಿ ಅಕ್ರಮ ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಅವರ ಮನೆ ಹಾಗೂ ಧಾರವಾಡದ ಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರಗಳಲ್ಲಿರುವ ಪಿಜಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಹಸೀಲ್ದಾರ್ ವಿಜಿಯಣ್ಣ ಅವರಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ಲೋಕಾ ಬಲೆಗೆ ಭ್ರಷ್ಟಾತಿಭ್ರಷ್ಟರು
→ ವಿಜಯಣ್ಣ, ತಹಶೀಲ್ದಾರ್ ಕೋಲಾರ
→ ಎಂ.ರವೀಂದ್ರ, ನಿವೃತ್ತ ಮುಖ್ಯ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ
ಮಹೇಶ್ ಕೆ., ಸೂಪರಿಂಟೆಂಡಿಂಗ್ ಎಂಜಿನಿಯರ್ ಜಲ ಸಂಪನ್ಮೂಲ ಇಲಾಖೆ ಮೈಸೂರು
→ ಕೆ.ಜಿ. ಜಗದೀಶ್, ಸೂಪರಿಂಟೆಂಡೆಂಟ್ ಎಂಜಿನಿಯರ್ ಲೋಕೋಪಯೋಗಿ
→ ಶೇಖರ್ ಗೌಡ, ಯೋಜನಾ ನಿರ್ದೇಶಕನಿರ್ಮಿತಿ ಕೇಂದ್ರ ಧಾರವಾಡ
→ ಶಿವರಾಜು ಎಸ್. ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಪೂರೈಕೆ
→ ಬಸವರಾಜ ಮಾಗಿ, ಕಂದಾಯ ಅಧಿಕಾರಿ ಬಿಬಿಎಂಪಿ ಕೆಂಗೇರಿ ವಲಯ
→ ಡಿ.ಎಚ್. ಉಮೇಶ್, ಕಾರ್ಯನಿರ್ವಾಹಕ ಎಂಜಿನಿಯರ್
→ ಎಂ.ಎಸ್, ಪ್ರಭಾಕರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೆಳಗಾವಿ
→ ಮಹದೇವ್, ಬನ್ನೂರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
→ ಎನ್.ಎಂ. ಜಗದೀಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಸನ.
ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಎಡೆಮುರಿ ಕಟ್ಟುತ್ತಿದ್ದು, ಭ್ರಷ್ಟ ಅಧಿಕಾರಿಗಳ ಎದೆಯಲ್ಲೂ ನಡುಕ ಶುರುವಾಗಿದೆ. ಇಂತಹ ದಾಳಿಗಳು ನಡೆಯುತ್ತಿದ್ದರೂ ಸಹ ಸಾಕಷ್ಟು ಸರ್ಕಾರಿ ಕಛೇರಿಗಳ್ಲಿ ಬಂಡ ಕೆಲ ಭ್ರಷ್ಟ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಅಡ್ಡದಾರಿಗಳಲ್ಲಿ ದುಡ್ಡು ಹೊಡೆಯೊ ಕೆಲಸ ಮಾಡುತ್ತಿದ್ದು, ಭ್ರಷ್ಟರಿಗೆ ಲೋಕಾಯುಕ್ತ ಚಾಟಿ ಬೀಸಲಿದೆ. ಲೋಕಾಯುಕ್ತ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.