ಚಿಕ್ಕಬಳ್ಳಾಪುರ, ಸರ್ಕಾರ, ಸಂಸ್ಥೆಗಳು, ವೈಯಕ್ತಿಕ ಪ್ರಯತ್ನಗಳು ದ್ವಿಗುಣಗೊಂಡು ಸಂಪೂರ್ಣ ಸಾಕ್ಷರತೆ ಸಾಧಿಸಲು ಪ್ರಯತ್ನಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಲೋಕಶಿಕ್ಷಣ ಸಮಿತಿ, ಡಿಎಸ್‌ಇಆರ್‌ಟಿ ಲೋಕಶಿಕ್ಷಣ ವಿಭಾಗಗಳ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರ್ಥಿಕ ವ್ಯವಹಾರದ ಶಿಸ್ತು, ಮಹಿಳಾ ಸಬಲೀಕರಣಕ್ಕೆ ಸಾಕ್ಷರತೆ ಅಗತ್ಯವಿದೆ. ಆರೋಗ್ಯ, ಲಿಂಗಸಮಾನತೆ, ಶಾಂತಿ, ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲಾ ವಯಸ್ಕರು, ಯುವಕರು, ಹೆಣ್ಣು ಮತ್ತು ಗಂಡು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಪಡೆಯಬೇಕಾದ ಅಗತ್ಯವಿದೆ. ಪುರುಷ ಮತ್ತು ಮಹಿಳಾ ಸಾಕ್ಷರತೆಯ ಪ್ರಮಾಣದ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕಿದೆ. ಪಂಚಾಯಿತಿ ಪ್ರತಿನಿಧಿಗಳು ಸಾಕ್ಷರರಾಗಬೇಕಲ್ಲದೇ ಹಿಂದುಳಿದ ತಾಲ್ಲೂಕುಗಳಲ್ಲಿ ಆಯ್ದ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರ ಪಂಚಾಯಿತಿಗಳನ್ನಾಗಿ ಮಾಡಬೇಕು ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮುನಿಕೆಂಪೇಗೌಡ ಮಾತನಾಡಿ, 15 ವರ್ಷ ಮತ್ತು ಮೇಲ್ಪಟ್ಟ ಎಲ್ಲರಿಗೂ ವಿಮರ್ಶಾತ್ಮಕ ಜೀವನಕೌಶಲಗಳ ತರಬೇತಿ ನೀಡುವುದು, ಆರ್ಥಿಕ ಮತ್ತು ಕಾನೂನಿನ ಸಾಕ್ಷರತೆ ಡಿಜಿಟಲ್ ಸಾಕ್ಷರತೆ, ವಿಪತ್ತು ನಿರ್ವಹಣೆ, ವಾಣಿಜ್ಯ ಮತ್ತು ಆರೋಗ್ಯ ಸುರಕ್ಷತೆ. ಶಿಕ್ಷಣ ಮತ್ತು ಕುಟುಂಬಕಲ್ಯಾಣಗಳಿಗಾಗಿ ಸಾಕ್ಷರತೆ ಸಾಧಿಸಬೇಕಿದೆ ನವಸಾಕ್ಷರರಿಗೆ ಜೀವನಪರ್ಯಂತ ಕಲಿಕೆ ಮತ್ತು ಬಳಕೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ದಕ್ಷಿಣ ಏಷ್ಯಾವು ಕಡಿಮೆ ಪ್ರಾದೇಶಿಕ ವಯಸ್ಕರ ಸಾಕ್ಷರತೆಯ ಪ್ರಮಾಣವನ್ನು ಹೊಂದಿದ್ದು, ಶಾಲೆ, ಗ್ರಂಥಾಲಯ, ಸಮುದಾಯಕೇಂದ್ರಗಳು, ಸ್ತ್ರೀಶಕ್ತಿ ಗುಂಪುಗಳ ಮೂಲಕಸಾಕ್ಷರತೆ ಸಾಧಿಸಬಹುದಾಗಿದೆ. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಕಾಯ್ದುಕೊಳ್ಳುವ ಪ್ರಯತ್ನ ನಡೆದಿದೆ. ಕರ್ನಾಟಕದಲ್ಲಿ ಹಿಂದಿನಿಂದಲೂ ನಡೆದ ಸಾಕ್ಷರತಾಕಾರ್ಯಕ್ರಮಗಳು ಮಾದರಿಯಾದುವು ಎಂದರು.
ಈ ವೇಳೆ ನವಸಾಕ್ಷರರಿಗೆ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸಾಕ್ಷರತಾ ಕಾರ್ಯಕ್ರಮಗಳ ಕುರಿತಾದ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಾಕ್ಷರತಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಬಿಸಿಎಂ ಇಲಾಖೆಯ ರಾಮಾನುಜಂ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, ಶಿಡ್ಲಘಟ್ಟ ಬಿಆರ್‌ಸಿಯ ಲಕ್ಷ್ಮಿನಾರಾಯಣ್, ಬಾಗೇಪಲ್ಲಿಯ ಶಿವಪ್ಪ, ಸುರೇಶ್, ವಿವಿಧ ತಾಲ್ಲೂಕುಗಳ ಬಿಆರ್‌ಪಿಗಳು, ಸಿಆರ್‌ಪಿ, ಮುಖ್ಯಶಿಕ್ಷಕರು, ನವಸಾಕ್ಷರರು, ಸ್ವಯಂಸೇವಕರು ಕಾರ್ಯಕ್ರಮ ಸಹಾಯಕ ಎಂ.ಮನು ಮತ್ತಿತರರು ಇದ್ದರು.