ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡರ ತೋಟದ ಮನೆಯಲ್ಲಿ ವಿಜಯದಶಮಿ ಸಂಭ್ರಮಾಚರಣೆ.
ಶಿಡ್ಲಘಟ್ಟ : ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದು ವೈಜ್ಞಾನಿಕ ರೀತಿಯಲ್ಲಿ ಕೃಷಿ ಪದ್ದತಿಯನ್ನ ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಗಳಿಸಿರುವ ಖ್ಯಾತ ಉದ್ಯಮಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರ ಗೌಡ ಅವರು ತಮ್ಮ ಸ್ವಗ್ರಾಮ ಸೀಕಲ್ ನ ತೋಟದ ಮನೆಯಲ್ಲಿ ವಿಜಯದಶಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಮನೆಯ ಮುಂಭಾಗ ಸ್ಥಾಪಿಸಿರುವ ವಿಘ್ನ ನಿವಾರಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಟ್ರ್ಯಾಕ್ಟರ್, ಕಾರುಗಳಿಗೆ ಬಾಳೆ ದಿಂಡು ಹೂವುಗಳಿಂದ ಅಲಂಕರಿಸಿ ಹಳ್ಳಿಯ ಸಂಪ್ರದಾಯದಂತೆ ಶಾಸ್ತ್ರೋಸ್ತವಾಗಿ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದರು. ತಮ್ಮ ನೆಚ್ಚಿನ ನಾಯಕರ ಹಬ್ಬದ ಸಂಭ್ರಮದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಹಲವು ಮುಖಂಡರು, ಸ್ನೇಹಿತರು, ತಮ್ಮ ಅಭಿಮಾನಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವತಃ ಸೀಕಲ್ ರಾಮಚಂದ್ರಗೌಡರು ಪೂಜೆ ಬಳಿಕ ಕಾರು ಮತ್ತು ಟ್ರ್ಯಾಕ್ಟರ್ ಮುಂದಕ್ಕೆ ಚಲಾಯಿಸಿ ನಿಂಬೆ ಹಣ್ಣು ತುಳಿಸಿದರು. ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಸಲುವಾಗಿ ಎಲ್ಲರಿಗೂ ಸಿಹಿಯನ್ನ ಹಂಚಲಾಯಿತು.
ಸುದ್ದಿಗಾರರೊಂದಿಗೆ ಸೀಕಲ್ ರಾಮಚಂದ್ರ ಗೌಡರು ಮಾತನಾಡಿ ಜನ್ಮ ಭೂಮಿ, ಕರ್ಮ ಭೂಮಿ, ನಾವು ಎಷ್ಟೆ ದೊಡ್ಡ ಮಟ್ಟಕ್ಕೂ ಬೆಳೆದರೂ ನಾವು ಹುಟ್ಟಿ ಬೆಳೆದ ಊರಲ್ಲಿ ಹಬ್ಬ ಮಾಡುವುದು ನಮಗೆ ತುಂಬಾ ಖುಷಿ ಕೊಡುತ್ತದೆ. ವಿಜೃಂಭಣೆಯಿಂದ ನಮ್ಮ ಜನರೊಂದಿಗೆ ಹಬ್ಬವನ್ನು ಆಚರಿಸುವ ಸಂತೋಷ ಬೇರೆ ಎಲ್ಲೂ ಸಿಗುವುದಿಲ್ಲ. ವಿಜಯ ದಶಮಿ – ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಮೈಸೂರಿನ ದಸರಾ ವಿಶ್ವ ವ್ಯಾಪ್ತಿ ಪ್ರಖ್ಯಾತಿಗೊಂಡಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಖುಷಿ ಕೊಡುತ್ತದೆ. ಪ್ರತಿ ವರ್ಷದಂತೆ ಹಬ್ಬವನ್ನು ಆಚರಿಸಿದ್ದೇವೆ. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿದೆ. ಸಮಸ್ತನಾಡಿನ ಜನತೆಗೆ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜನತೆಗೆ ಶುಭವಾಗಲಿ ಎಂದರು.