ಶಿಡ್ಲಘಟ್ಟ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತೀರ್ಮಾನದಂತೆ ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಗ್ರಹಿಸಿ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ವೇದಿಕೆ ನಿರ್ಮಿಸಿ ಕರ್ತವ್ಯದಿಂದ ಹೊರಗುಳಿದು ಕಪ್ಪು ಪಟ್ಟಿ ಕಟ್ಟಿಕೊಂಡು ಮೂಲಭೂತ ಸೌಲಭ್ಯಗಳು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಲು ಶಾಂತಿಯುತವಾಗಿ ಒಂದು ದಿನದ ಮಟ್ಟಿಗೆ ತಾಲ್ಲೂಕು ಕೇಂದ್ರದಲ್ಲಿ ಗುರುವಾರದಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ತಾಲ್ಲೂಕು ಖಜಾಂಚಿ ತ್ರಿಮೂರ್ತಿ ಮಾತನಾಡಿ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ತಾಂತ್ರಿಕೇತರ ಹುದ್ದೆಯಾಗಿದೆ. ಆದರೆ ಇವತ್ತಿನ ದಿನಮಾನಗಳಲ್ಲಿ ನಾವು ತಾಂತ್ರಿಕ ವ್ಯವಸ್ಥೆಯಲ್ಲೆ ತುಂಬಾ ಒತ್ತಡದಿಂದ ಕೆಲಸ ನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ ಕೆಲಸದ ಒತ್ತಡದಿಂದ ಸುಮಾರು 50 ಗ್ರಾಮ ಆಡಳಿತಾಧಿಕಾರಿಗಳು ಆಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಆದರೆ ಈವರೆಗೂ ಅವರ ಕುಟುಂಬಗಳಿಗೆ ಯಾವುದೇ ಸೌಲತ್ತು ಸಿಕ್ಕಿರುವುದಲ್ಲ. ಈ ರೀತಿಯ ಸಾವುಗಳು ಆದಾಗ ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಸರ್ಕಾರ ನೀಡಬೇಕು. ಹಳ್ಳಿಗಳಲ್ಲಿ ಕೆಲಸ ಮಾಡಬೇಕಿರುವ ನಮಗೆ ಪ್ರಯಾಣ ಭತ್ಯ ಕೇವಲ ರೂ 500 ನೀಡುತ್ತಿದ್ದು, ಇದನ್ನು 3000 ಸಾವಿರಕ್ಕೆ ಹೆಚ್ಚಿಸಬೇಕು ಎಂದರು.
ಸರ್ಕಾರಕ್ಕೆ ಹಲವು ಬಾರಿ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು ಯಾವುದೇ ಪ್ರತಿಫಲ ಸಿಕ್ಕಿರುವುದಿಲ್ಲ. ಮಾನಸಿಕ ಒತ್ತಡದಿಂದ ಕೆಲಸ ಮಾಡುವಂತಾಗಿದೆ. ನಮಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲ. ನಾವು ಕೆಲಸ ಮಾಡುವುದಕ್ಕೆ ಪೂರಕವಾದ ವ್ಯವಸ್ಥೆಗಳಿಲ್ಲ. ‘ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಆಧಾರ್ ಸೀಡಿಂಗ್, ಗರುಡ ಆ್ಯಪ್, ಸಂಯೋಜನೆ, ಬಗರ್ ಹುಕ್ಕಂ, ಭೂಮಿ, ಬೆಳೆ ಸಮೀಕ್ಷೆ, ಇ ಆಫೀಸ್, ವೋಟರ್ ಹೆಲ್ಪ್ ಲೈನ್, ಹಲವು ತಂತ್ರಾಂಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ನೀಡರುವುದಿಲ್ಲ. ನಮ್ಮದೇ ಮೊಬೈಲ್ ಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿಯಿದೆ ನಮಗೆ ಮೂಲಭೂತವಾಗಿ ನೀಡಬೇಕಾಗಿರುವ ಸೌಲಭ್ಯಗಳೇ ನೀಡಿರುವುದಿಲ್ಲ. ಕೆಲಸದ ಒತ್ತಡದಲ್ಲಿರುವಾಗ ಕೆಲವು ಬಾರಿ ಸಾರ್ವಜನಿಕರು ತಪ್ಪು ಮಾಹಿತಿ ನೀಡಿದ ನಮ್ಮಿಂದ ಪ್ರಮಾಣ ಪತ್ರಗಳು ಪಡೆದಂತಹ ಸಂದರ್ಭದಲ್ಲಿ ನಮ್ಮನ್ನೆ ನೇರ ಹೊಣೆಗಾರರನ್ನಾಗಿ ಮಾಡಿ ನಮ್ಮ ಮೇಲೆ ಕ್ರಮ ಆಗುತ್ತದೆ. ತಪ್ಪು ಮಾಹಿತಿ ನೀಡಿದವರ ಮೇಲೂ ಕ್ರಮ ಆಗಬೇಕು. ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಮತ್ತು ಖಿನ್ನತೆಗೆ ಒಳಗಾಗಿದ್ದೇವೆ.ಎಂದರು
ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸಿದ್ದಲ್ಲಿ ಮುಷ್ಕರವನ್ನ ಕೈ ಬಿಡುತ್ತೇವೆ. ಇಲ್ಲವಾದಲ್ಲಿ ರಾಜ್ಯಾಧ್ಯಕ್ಷರ ಸೂಚನೆಯಂತೆ ನಮ್ಮ ಮುಷ್ಕರ ಮುಂದುವರೆಯುತ್ತದೆ. ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಕಂದಾಯ ಇಲಾಖೆಯ ನೌಕರರು ಸಹಾ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಜಿ.ಹೆಚ್. ಚೇತನ್ ಕುಮಾರ್, ಗೌರವಾಧ್ಯಕ್ಷ ಲಾರೆನ್ಸ್, ಉಪಾಧ್ಯಕ್ಷ ನಾಗರಾಜ್, ಪ್ರದಾನ ಕಾರ್ಯದರ್ಶಿ ಸುರೇಶ್, ತಾಲ್ಲೂಕು ಕಂದಾಯ ನೌಕರರ ಸಂಘದ ಅಧ್ಯಕ್ಷ ಶಶಿಧರ್, ಸೇರಿದಂತೆ ಕಂದಾಯ ನೌಕರರು ಮತ್ತಿತರರು ಭಾಗವಹಿಸಿದ್ದರು.
ವರದಿ: ಕೋಟಹಳ್ಳಿ ಅನಿಲ್‌ಕುಮಾರ್ ಕೆ.ಎ