ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೇಸ್ ಸರ್ಕಾರದ ವಿರುದ್ದ ಗುಡುಗು.
ಶಿಡ್ಲಘಟ್ಟ: ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಮತ ಹಾಕುವಾಗ ಯೋಚಿಸಿ ಮತ ಹಾಕದಿದ್ದರೆ ಕಳೆದ ಬಾರಿ ಮತಗಳಿಗೋಸ್ಕರ ಕಾಂಗ್ರೇಸ್ ನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಎರಡು ಮೂರು ವರ್ಷಗಳು ಕಾರ್ಯಗಾರ ಮಾಡಿ ಮಕ್ಮಲ್ ಟೋಪಿ ಹಾಕಿದ್ದಾರೆ. ಮತ್ತೆ ಗ್ಯಾರಂಟಿಗಳ ಹೆಸರಿನಲ್ಲಿ ಮಕ್ಮಲ್ ಟೋಪಿ ಹಾಕುತ್ತಾರೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಮತಯಾಚಿಸಲು ಭಾನುವಾರದಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಏನಿಗದೆಲೆ ಹಾಗೂ ದಿಬ್ಬೂರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಯಿತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದ ಭವಿಷ್ಯ ನಿಮ್ಮ – ನಮ್ಮ ಕೈಯಲ್ಲಿದೆ ಮತ ಹಾಕುವಾಗ ಯೋಚನೆ ಮಾಡಿ ಮತ ಹಾಕಬೇಕು ದೇಶದಲ್ಲಿ 400 ಸ್ಥಾನಗಳಿದ್ದ ಕಾಂಗ್ರೆಸ್ ನ್ನು ಮೋದಿಯವರು ಕೇವಲ 40 ಸೀಟುಗಳಿಗೆ ತಂದಿದ್ದಾರೆ. ದೇಶದ ಅಭಿವೃದ್ದಿಗಾಗಿ ಮೋದಿಯವರ ಕೈ ಗಟ್ಟಿಗೊಳಿಸಿ ಮತ್ತೊಮ್ಮೆ ದೇಶಕ್ಕೆ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ಮಾತನಾಡಿ ಕ್ಷೇತ್ರದಲ್ಲಿ 16 ವಿಧಾನಸಭಾ ಚುನಾವಣೆ ನಡೆದಿದೆ. 11 ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಜನ ಅಧಿಕಾರ ಕೊಟ್ಟಿದ್ದಾರೆ. ಚಿಲಕಲನೇರ್ಪು ಹೋಬಳಿಯಲ್ಲಿ ಸುಮಾರು 72 ಕಿ.ಮೀ ರಸ್ತೆಗಳು ತುಂಬಾ ಹದಗೆಟ್ಟು ಹೋಗಿದೆ. ನಾನು ಶತ ಪ್ರಯತ್ನ ಮಾಡಿದರು ಸಹ. 2 ಕಿ.ಮೀ ರಸ್ತೆ ಹಾಕಿಸುವುದಕ್ಕೆ ಆಗುತ್ತಿಲ್ಲ. ನಾವೇನಾದರೂ ಹೋಗಿ ಅನುದಾನವನ್ನು ಕೇಳಿದರೆ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿ ಎಂದು ಹೇಳುತ್ತಿದ್ದಾರೆ. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನ ಅವರು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಬೇಕೆಂಬ ಪ್ರಯತ್ನ ಮಾಡುತ್ತಾ ಜೆಡಿಎಸ್ ಎಲ್ಲಿದೆ ಎನ್ನುತ್ತಿದ್ದಾರೆ. ಪ್ರತಿ ಬೂತ್ ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯತಿ ಸದಸ್ಯರು, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ್ ಸದಸ್ಯರು, ಮುಖಂಡರು ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ಕೋಲಾರ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಅವರು ಅಭ್ಯರ್ಥಿಯಾಗಿದ್ದಾರೆ. ಬೂತ್ ಗಳಲ್ಲಿ ಹೆಚ್ಚು ಮೆಜಾರಿಟಿಯನ್ನು ಕೊಡಬೇಕು. ಮಲ್ಲೇಶ್ ಬಾಬು ಅವರು ಅತ್ಯಧಿಕ ಮತಗಳಿಂದ ಗೆಲ್ಲಬೇಕು ರಾಜ್ಯದಲ್ಲಿ ನನಗೂ ಗೌರವ ಬರುತ್ತದೆ ಎಂದು ತಿಳಿಸಿದರು.
ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ ನಮ್ಮ ತಂದೆ ಐಎಎಸ್ ಅಧಿಕಾರಿಯಾಗಿ ಸಾಕಷ್ಟು ಸೇವೆ ಮಾಡಿದ್ದಾರೆ. ರಾಜಕೀಯವಾಗಿ ನಾನು ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕೆಲವೇ ಮತಗಳ ಅಂತರದಿಂದ ಪರಾಜಿತನಾಗಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಧೈರ್ಯ ನನಗೆ ಇರಲಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು ಹಾಗೂ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ಹಾಗೂ ಬಿಜೆಪಿ ಮುಖಂಡರ ಸಹಕಾರದಿಂದ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ನಿಮ್ಮ ಸೇವೆ ಮಾಡಲು ಮೋದಿಯವರ ಕೈ ಬಲಪಡಿಸಲು ಈ ಬಾರಿ ನನಗೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಇನ್ನೂ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಕಲಾ ತಂಡದಿಂದ ನಾಟಕವನ್ನ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ, ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ತಾತಹಳ್ಳಿ ಕನಕಪ್ರಸಾದ್, ಬಂಕ್ ಮುನಿಯಪ್ಪ, ಮೇಲೂರು ಉಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣರೆಡ್ಡಿ, ನಂದನವನ ಶ್ರೀರಾಮರೆಡ್ಡಿ, ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ