Monday, December 23, 2024
Homeಜಿಲ್ಲೆಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರು ಗಿಡ ನೆಟ್ಟು "ಸ್ಬಚ್ಚತೆಯೇ ಸೇವೆ" ಕಾರ್ಯಕ್ರಮ ಯಶಸ್ವಿಗೊಳಿಸಿ: ಡೀಸಿ ಪಿ. ಎನ್...

ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರು ಗಿಡ ನೆಟ್ಟು “ಸ್ಬಚ್ಚತೆಯೇ ಸೇವೆ” ಕಾರ್ಯಕ್ರಮ ಯಶಸ್ವಿಗೊಳಿಸಿ: ಡೀಸಿ ಪಿ. ಎನ್ ರವೀಂದ್ರ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಎಲ್ಲರೂ ಭಾಗವಹಿಸಲು ಕರೆ.

ಚಿಕ್ಕಬಳ್ಳಾಪುರ: ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ “ಸ್ವಚ್ಛತೆಯೇ ಸೇವೆ” ಕಾರ್ಯಕ್ರಮದಡಿ ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಗಿಡ ನೆಡುವುದು ಹಾಗೂ ಹಲವು ಸ್ವಚ್ಛತಾ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಸಾರ್ವಜನಿಕರೂ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದರು.

ನಾಳೆಯಿಂದ ಅಕ್ಟೋಬರ್ 01 ರವರೆಗೆ ನಡೆಯಲಿರುವ ಸ್ವಚ್ಛತಾ ಹಿ ಸೇವಾ. ಅಂದರೆ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಚಟುವಟಿಕೆಗಳ ಕುರಿತು ಶುಕ್ರವಾರದಂದು ಸುದ್ದಿಗಾರರೊಂದಿಗೆ  ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾತನಾಡಿದರು. ಸ್ವಚ್ಛತಾ ಹಿ ಸೇವಾದ ಘೋಷ ವಾಕ್ಯ ಸ್ವಭಾವ ಸ್ವಚ್ಛತೆ ಮತ್ತು ಸಂಸ್ಕಾರ ಸ್ವಚ್ಛತೆ ಎಂಬುದಾಗಿದೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಸೇವೆ ಆಂದೋಲನದ ರೂಪದಲ್ಲಿ ನಡೆಯಲಿದೆ. ಇದರಡಿ ನಾಲ್ಕು ಭಾಗಗಳಿದ್ದು, ಗಿಡಗಳನ್ನು ನೆಡುವುದು, ಸ್ಥಳೀಯ ನೃತ್ಯ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವುದು, ಸಾರ್ವಜನಿಕ ಕಚೇರಿ ಮತ್ತು ಶೌಚಾಲಯ,ಉದ್ಯಾನಗಳನ್ನು ಸ್ವಚ್ಛ ಮಾಡುವುದು ಹಾಗೂ ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಕಾರ್ಯಕ್ರಮಗಳು ಸೇರಿವೆ. ಇದರ ಜೊತೆಗೆ ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆಯೂ ಸೇರಿದೆ. ಅಕ್ಟೋಬರ್ 02 ರ ಗಾಂಧೀ ಜಯಂತಿ ದಿನದಂದು ಸ್ವಚ್ಛತಾ ದಿವಸ್ ನಡೆಯಲಿದೆ ಎಂದರು.

ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಸಂಪೂರ್ಣ ಯಶಸ್ವಿಗೊಳಿಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪ್ರಜಾಪ್ರಭುತ್ವ ದಿನಾಚರಣೆ ಸಿದ್ದತೆಗಳ ಕುರಿತು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಬೀದರ್ ನಿಂದ ಚಾಮರಾಜನಗರದವರೆಗೂ 2500 ಕಿ.ಮೀ ಉದ್ದದ ಮಾನವ ಸರಪಳಿ‌ ನಿರ್ಮಿಸುವ ಮೂಲಕ‌ ವಿಶಿಷ್ಟವಾಗಿ ಆಚರಿಸುತ್ತಿದೆ. ಸೆ.15 ರ ಭಾನುವಾರದಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಮಾನವ ಸರಪಳಿ ನಿರ್ಮಾಣವಾಗಲಿದ್ದು, 47.5 ಕಿ.ಮೀ ಉದ್ದದ ಮಾನವ ಸರಪಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಗಡಿಯ ಮೊಡಕು ಹೊಸಹಳ್ಳಿ ಯಿಂದ ಕೋಲಾರ ಜಿಲ್ಲೆಯ ಗಡಿಭಾಗ ನಮ್ಮ‌ ಜಿಲ್ಲೆಯ ಹೆಚ್.ಕ್ರಾಸ್ ವರೆಗೆ ನಿರ್ಮಾಣವಾಗಲಿದೆ. ಈ ಬೃಹತ್ ಮಾನವ ಸರಳಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸ್ವಯಂ ಸೇವಾ ಮತ್ತು ಸಂಘ ಸಂಸ್ಥೆಗಳು, ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಸಕ್ರಿಯವಾಗಿ ಕೈ ಜೋಡಿಸಲಿದ್ದಾರೆ. ಈಗಾಗಲೇ ಹಲವು ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪ್ರತಿ ಒಂದು ಕಿ.ಮೀ ಗೆ ಒಂದರಂತೆ ಸಸಿ ನೆಟ್ಟು ನೀರೆಯಯಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೂ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!