ಬೆಂಗಳೂರು: ರೌಡಿಸಂ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿರುವ ಗ್ರಹ ಸಚಿವ ಪರಮೇಶ್ವರ್, ಡಿಜೆ ಹಳ್ಳಿ, ಕೆಜಿ ಹಳ್ಳಿ ಮಾದರಿ ಮಾಡುತ್ತೀವಿ ಅಂದಿರುವುದು ಗಮನಕ್ಕೆ ಬಂದಿದೆ. ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಪೊಲೀಸ್ ಠಾಣೆಗೆ ಬಂದು ಧಮ್ಮಿ ಹಾಕುವರ ಬಗ್ಗೆ ಮೃಧುದೋರಣೆ ತೋರಿಸುವುದಿಲ್ಲ. ಪೊಲೀಸರ ತಲೆ ಕತ್ತರಿಸುತ್ತೀನಿ ಅನ್ನುವರನ್ನ ಬಿಡುವುದಕ್ಕಾಗುತ್ತದೆಯೇ? ಅಂಥವರ ಮೇಲೆ ಕಾನೂನಿನಲ್ಲಿ ಇರುವ ಅವಕಾಶದಂತೆ ಕ್ರಮ ಜರುಗಿಸಲಾಗುವುದು ಎಂದು ಶನಿವಾರ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ದಾವಣಗೆರೆ ಘಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ದೂರು ಇದ್ದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಆತನಿಗೆ 7 ನಿಮಿಷದೊಳಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೆ ಅವರು ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ, ಠಾಣೆಗೆ ನುಗ್ಗಲು ಯತ್ನಿಸಿದ್ದಾರೆ ಎಂದರು.
ಮರಣೋತ್ತರ ಪರೀಕ್ಷೆಯಲ್ಲಿ ಸತ್ಯಾಂಶ ಗೊತ್ತಾಗಲಿದೆ. ವರದಿ ಬಂದ ನಂತರ ಮುಂದಿನ ಕ್ರಮತೆ ಗೆದುಕೊಳ್ಳಲಾಗುವುದು. ಘಟನೆಯಲ್ಲಿ ಪೇದೆಯೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ನಮ್ಮವರೇ ಬೆಂಗಳೂರನ್ನು ಅವಹೇಳನ ಮಾಡುತ್ತಿದ್ದಾರೆ. ಹೊರ ದೇಶದವರಿಗೆ, ಹೊರ ಜನರಿಗೆ ಬೆಂಗಳೂರಿನ ಬಗ್ಗೆ ಏನನ್ನು ಬಿಂಬಿಸಲು ಹೊರಟಿದ್ದೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಅವರು ಬ್ಯಾಂಡ್ ಬೆಂಗಳೂರು ಮಾಡುವುದಾಗಿ ಅನೇಕ ಸಲ ಹೇಳಿದ್ದಾರೆ. ಇದಕ್ಕೆ ನಿಗದಿತವಾದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ಎಲ್ಲರ ಆಡಳಿತಾವಧಿಯಲ್ಲಿಯೂ ಮಳೆಗಾಲದಲ್ಲಿ ರಸ್ತೆ ಗುಂಡಿ ಬೀಳುವುದು, ಚರಂಡಿಯಲ್ಲಿ ಕಸ ತುಂಬಿಕೊಂಡು ಪ್ರವಾಹ ಉಂಟಾಗಿದೆ. ಇದನ್ನು ಆಧರಿಸಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಿ ರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಉಡ್ತಾ ಬೆಂಗಳೂರು, ಬ್ಯಾಂಡ್ ಬೆಂಗಳೂರು ಅಲ್ಲ ಗುಂಡಿ ಬೆಂಗಳೂರು ಅನ್ನುವುದು. ಹೊರ ದೇಶದವರಿಗೆ ಏನು ಚಿತ್ರಣ ಬಿಂಬಿಸಲು ಹೊರಟಿದ್ದೀರಿ? ನಮ್ಮ ಮೇಲೆ, ನಮ್ಮ ಸರ್ಕಾರದ ಮೇಲೆ ಆರೋಪಿಸಲಿ. ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ, ನೀವೆ ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದ್ದೀರಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಅನೇಕ ವಿಚಾರಗಳ ಬಗ್ಗೆ ಬಿಜೆಪಿಯವರು ಇಲ್ಲ-ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರಿಯಾದ ಸಂದರ್ಭದಲ್ಲಿ ಉತ್ತರಿಸಲಾಗುವುದು. ಏನಾದರೂ ನಿರ್ದಿಷ್ಟವಾಗಿ ಹೇಳುವುದಿದ್ದರೆ ಹೇಳಲಿ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ಪೊಲೀಸ್ ಕಮಿಷನರ್ ಇದ್ದಾರೆ. ಪೊಲೀಸ್ ಇಲಾಖೆ ಇದೆ. ಅವರಿಗೆ ತಿಳಿಸಿದರೆ ಕ್ರಮ ತೆಗೆದುಕೊಳ್ಳುತ್ತಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಹೇಳಿಕೆಗಳಿಂದ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ.
ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ ಬರೆದ ಪತ್ರ ಮೇ.21ರಂದು ತಲುಪಿದೆ ಎಂಬುದಾಗಿ ವಿದೇಶಾಂಗ ಸಚಿವರು ಹೇಳಿದ್ದಾರೆ. ಮುಖ್ಯಮಂತ್ರಿಯವರು ಬರೆದಿದ್ದ ಪತ್ರ ವಿಚಾರವನ್ನು ಪ್ರಧಾನಮಂತ್ರಿ ಕಚೇರಿಯವರು ವಿದೇಶಾಂಗ ಇಲಾಖೆಯ ಕಚೇರಿಗೆ ತಿಳಿಸಿಲ್ಲ ಎಂಬುದು ಗೊತ್ತಾಗುತ್ತದೆ. ಪತ್ರಕ್ಕೆ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಬೆಲೆ ಸಿಗಲಿಲ್ಲವೇ? ವಿದೇಶಾಂಗ ಇಲಾಖೆಯ ಕಚೇರಿಗೆ ತಿಳಿಸಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಯಾವ ರೀತಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಅನ್ನುವುದನ್ನು ಇದರಿಂದ ಅರ್ಥೈಸಿಕೊಳ್ಳಬೇಕು ಎಂದರು.
ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದಾದ ಬಳಿಕ ದೇಶಕ್ಕೆ ವಾಪಸ್ ಆಗಬೇಕಾಗುತ್ತದೆ. ಆ ದೇಶದವರು ಇಟ್ಟು ಕೊಳ್ಳಲು ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಶಾಸಕ ಹರೀಶ್ ಪೂಂಜಾನನ್ನು ಬಂಧಿಸಿ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸುತ್ತಾರೆ. ಪ್ರಕರಣ ಜನ ಪ್ರತಿನಿಧಿಗಳ ವಿಶೇಷ ನ್ಯಾಯಲಯದ ಮುಂದೆ ಬರುತ್ತದೆ ಎಂದರು. ವಿಧಾನ ಪರಿಷತ್ ಟಿಕೆಟ್ ವಿಚಾರವಾಗಿ ಮಾತನಾಡಿ, ಪಕ್ಷಕ್ಕೆ ದುಡಿದ ಅನೇಕ ಮುಖಂಡರು, ಕಾರ್ಯಕರ್ತರು ನನ್ನನ್ನು ಭೇಟಿಯಾಗಿ ಮನವರಿಕೆ ಮಾಡಿದ್ದಾರೆ. ನನಗಿರುವ ಅನುಭವ ಮತ್ತು ನನ್ನ ಅಭಿಪ್ರಾಯವನ್ನು ಪಕ್ಷದ ಅಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.