ದೇಶದ ಅಭಿವೃದ್ದಿ, ಉತ್ತಮ ಆಡಳಿತಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ತಪ್ಪದೇ ಮತವನ್ನು ಚಲಾಯಿಸಲು ಕರೆ
ಶಿಡ್ಲಘಟ್ಟ: ವಿದ್ಯಾವಂತ ಯುವಕ, ಯುವತಿಯರು, ಬುದ್ದಿವಂತರು ಮತದಾನದಿಂದ ದೂರ ಉಳಿದರೆ ಅನಕ್ಷರಸ್ಥರು, ಭ್ರಷ್ಟರು ದೇಶವನ್ನು ಆಳುತ್ತಾರೆ. ದೇಶದ ಅಭಿವೃದ್ದಿಗಾಗಿ, ಉತ್ತಮ ಆಡಳಿತಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ತಪ್ಪದೇ ಮತವನ್ನು ಚಲಾಯಿಸಬೇಕು. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಹಾಗೂ ಜವಬ್ದಾರಿಯಾಗಿದೆ ಎಂದು ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು ಅವರು ಕರೆ ನೀಡಿದರು.
ತಾಲ್ಲೂಕು ಆಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವಾಲಿಬಾಲ್ ಟೂರ್ನಿಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾವಂತರು ನಾಯಕರಾಗಬೇಕು, ಪ್ರಜ್ಞಾವಂತ ಜನ, ವಿದ್ಯಾವಂತರು ಮತದಾನದಿಂದ ದೂರ ಉಳಿದಾಗ ಅವಿದ್ಯಾವಂತರು ಆಡಳಿತ ಮಾಡುತ್ತಾರೆ. ಇದೆಲ್ಲವೂ ಅರಿತುಕೊಂಡು ಚುನಾವಣೆಯಲ್ಲಿ ತಪ್ಪದೆ ಭಾಗವಹಿಸಿ ತಪ್ಪದೇ ಮತದಾನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವಿಶ್ವದಲ್ಲಿಯೇ ಭಾರತ ದೇಶ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ವಿಶ್ವಕ್ಕೆ ಮಾದರಿಯಾಗಿದೆ, ಬೇರೆಲ್ಲಾ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಾದ್ಯವಾಗಲ್ಲ, ಭಾರತದ ಹದಿನೆಂಟು ವರ್ಷ ತುಂಬಿರುವ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲ ಗೊಳಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಚುನಾವಣೆಯ ಪ್ರತಿಜ್ಞಾ ವಿಧಿಯನ್ನು ಬೋದಿಸಲಾಯಿತು.
ರಾಷ್ಟ್ರೀಯ ಕ್ರೀಡಾ ಪಟು ಜಯಂತಿ ಗ್ರಾಮ ನಾರಾಯಣಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದ ಕುರಿತಾಗಿ ಅಪಾರ ನಂಬಿಕೆ ಕಾಳಜಿ ಹೊಂದಿರುವ ತಾ.ಪಂ ಇ.ಓ ಮುನಿರಾಜು ಅವರು ಮತದಾನದ ಅರಿವು ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿರುವುದು ಶ್ಲಾಘನೀಯ, ತಾಲ್ಲೂಕು ಆಡಳಿತದ ಶ್ರಮ ವ್ಯರ್ಥವಾಗಬಾರದು ಹಾಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಬರುವಂತೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗೋಪಾಲ್ ಜಾದವ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನೌತಾಜ್, ಜೆವಿ ಸುರೇಶ್, ಟಿಟಿ ನರಸಿಂಹಪ್ಪ, ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು