Monday, December 23, 2024
Homeಜಿಲ್ಲೆಗಾಂಧೀಜಿಯವರು ಜಗತ್ತಿನ ಮಹಾನ್ ಅಹಿಂಸಾ ನಾಯಕ: ಸಚಿವ  ಡಾ. ಎಂ.ಸಿ. ಸುಧಾಕರ್.

ಗಾಂಧೀಜಿಯವರು ಜಗತ್ತಿನ ಮಹಾನ್ ಅಹಿಂಸಾ ನಾಯಕ: ಸಚಿವ  ಡಾ. ಎಂ.ಸಿ. ಸುಧಾಕರ್.

ಚಿಕ್ಕಬಳ್ಳಾಪುರ : ಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆಯಲು ಹೆಚ್ಚಿನ ಪ್ರಾಣ ತ್ಯಾಗ ಆಗುವುದನ್ನು ಮನಗಂಡು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.

ನಗರದ ಜಿಲ್ಲಾ ಗ್ರಂಥಾಲಯದ ಪಕ್ಕ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಭವನ ಕಟ್ಟಡವನ್ನು ಬುಧವಾರ ಲೋಕಾರ್ಪಣೆ ಮಾಡಿದರು ಹಾಗೂ ಇಲ್ಲಿಯೇ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಅಹಿಂಸೆಯನ್ನು ತನ್ನ ಜೀವನದ ವಿಧಾನವನ್ನಾಗಿಸಿಕೊಂಡಿದ್ದ ಗಾಂಧೀಜಿಯವರು ಜಗತ್ತಿನ ಮಹಾನ್ ಅಹಿಂಸಾ ನಾಯಕರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜನ್ಮದಿನವಾದ ಅಕ್ಟೋಬರ್-2ನ್ನೆ ಇಂದು ಇಡೀ ಜಗತ್ತಿನಾದ್ಯಂತ ‘ವಿಶ್ವ ಅಹಿಂಸಾ ದಿನ’ವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆ ನೀಡಿರುವುದು ಭಾರತೀಯೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ. ಇಂತಹ ಮಹಾನ್ ನಾಯಕರಿಂದ ಇಂದಿನ ಮತ್ತು ಮುಂದಿನ ಪೀಳಿಗೆಗಳು ಪ್ರೆರೇಪಣೆಗೊಂಡು ದೇಶದ ಅಭಿವೃದ್ಧಿಯಲ್ಲಿ ಭಾಗಿಗಳಾಗುವಂತೆ ಮಾಡುವ ಸದುದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ತಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ 2016ರಲ್ಲಿ ದೃಢ ಸಂಕಲ್ಪ ಮಾಡಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲು ನಿರ್ಧರಿಸಿದರಲ್ಲದೇ ಮೊದಲನೇ ಕಂತಿನಲ್ಲಿ 2016 ರ ಜೂನ್ 28 ರಂದು 20 ಲಕ್ಷ ಅನುದಾನವನ್ನು ಹಾಗೂ ಎರಡನೇ ಕಂತಿನಲ್ಲಿ 2018ರ ನವೆಂಬರ್ 13 ರಂದು 280 ಲಕ್ಷ ಅನುದಾನವನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗೆ ಬಿಡುಗಡೆ ಮಾಡಿದ್ದರು. ಅದರಂತೆ ಮಾನ್ಯ ಶಿವಶಂಕರರೆಡ್ಡಿ ರವರು ಸಚಿವರಾಗಿದ್ದಾಗ 5ನೇ ಜೂನ್ 2019 ರಲ್ಲಿ ಶಂಕುಸ್ಥಾಪನೆ ಕಾರ್ಯ ನೆರವೇರಿತ್ತು. ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ಗಾಂಧಿಭವನ ನಿರ್ಮಾಣವಾಗಿ ಲೋಕಾರ್ಪಣೆಯಾಗಿರುವುದು ಜಿಲ್ಲೆಗೆ ಕಳಶಪ್ರಾಯವಾಗಿದೆ.

ನಮ್ಮ ದೇಶದ ಕಡುಬಡವರು ಸಮಾಜದ ಕಟ್ಟಕಡೆಯ ಜನರು ಇದು ನನ್ನ ದೇಶವೆಂಬ ಅಭಿಮಾನದಿಂದ ಬಾಳಬೇಕು. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಅಳಿಯಬೇಕು, ಅಸ್ಪೃಶ್ಯತೆ ಸಂಪೂರ್ಣ ನಿರ್ಮೂಲನೆ ಆಗಬೇಕು, ಎಲ್ಲ ವರ್ಗದ ಜನರೂ ಸಾಮರಸ್ಯದಿಂದ ಬಾಳಬೇಕು. ಅಹಿಂಸೆ ಮತ್ತು ಸತ್ಯಾಗ್ರಹಗಳ ಮೂಲಕ ದೇಶದ ಶ್ರೀಸಾಮಾನ್ಯರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜುಗೊಳಿಸಿದ ಕೀರ್ತಿ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ. ಜಿಲ್ಲೆಯ ಮಕ್ಕಳು, ಸಾರ್ವಜನಿಕರು ಈ ಭವನಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕು. ಇಲ್ಲಿ ಗಾಂಧೀಜಿಯವರ ಜೀವನ ಚರಿತ್ರೆ ಅವರ ಹೋರಾಟದ ಹಾದಿ, ವಿಚಾರದಾರೆಗಳು ಹಾಗೂ ತತ್ವಾದರ್ಶಗಳನ್ನು ಬಿಂಬಿಸುವಂತೆ ನಿರ್ಮಿಸಿರುವ ಛಾಯಾಚಿತ್ರಗಳ ಗ್ಯಾಲರಿಯು ಅವರ ಜೀವನ ಚರಿತ್ರೆ ಕುರಿತಂತೆ ಕ್ರಮಾನುಗತವಾಗಿ ಬೆಳಕು ಚೆಲ್ಲುತ್ತದೆ. ಇಲ್ಲಿನ ಗಾಂಧಿ ಅಂಗಳ, ಗಾಂಧಿ ಪ್ರತಿಮೆಗಳು, ಚರಕದ ಪ್ರಾತ್ಯಕ್ಷಿಕೆಗಳು ಜನರಲ್ಲಿ ದೇಶ ಭಕ್ತಿಯನ್ನು ಇಮ್ಮಡಿಗೊಳಿಸುವಂತೆ ಮಾಡುತ್ತವೆ.

ಗಾಂಧೀಜಿಯವರ ವಿಚಾರಧಾರೆಗಳ ಕುರಿತು ವಿಚಾರ ಸಂಕಿರ್ಣಗಳು, ಸಂವಾದ ಕಾರ್ಯಕ್ರಮಗಳು, ಗಾಂಧಿ ಸಂದೇಶಗಳನ್ನು ಸಾರುವ ಜಾಗೃತಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಗಾಂಧೀಜಿಯವರಿಗೆ ಇಷ್ಟವಾದ ಖಾದಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮಳಿಗೆಗಳ ಹಾಗೂ ಪುಸ್ತಕ ಬಂಡಾರ ನಿರ್ಮಿಸಲು ವ್ಯವಸ್ಥೆ ಮಾಡಲಾಗಿದೆ. ತುಂಬ ಸುಂಧರ ವಿನ್ಯಾಸದೊಂದಿಗೆ ಗಾಂಧಿಭವನ ನಿರ್ಮಿಸಲು ಶ್ರಮಿಸಿದ ಜಿಲ್ಲಾಡಳಿತ ಅಧಿಕಾರಿಗಳಿಗೆ, ನಿರ್ಮಿತಿ ಕೇಂದ್ರದ ಅಭಿಯಂತರರಿಗೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸಚಿವರು ಧನ್ಯವಾದಗಳನ್ನು ತಿಳಿಸಿದರು.

ಈ ಭವನ ಜಿಲ್ಲಾ ಕೇಂದ್ರ ಗ್ರಂಥಾಲಯ ಪಕ್ಕದಲ್ಲೆ ಇರುವುದರಿಂದ ಅಲ್ಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳು, ಸಾರ್ವಜನಿಕರು ಗಾಂಧಿ ಭವನಕ್ಕೆ ಭೇಟಿ ಕೊಟ್ಟು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಬೇಕು. ಜೊತೆಗೆ ಗಾಂಧೀಜಿಯವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿರಂತರ ಪ್ರಕ್ರಿಯೆಯಲ್ಲಿ ನಾವು ನಿವೆಲ್ಲರೂ ಭಾಗಿಗಳಾಗಬೇಕು.

ಶಾಸಕ ಪ್ರದೀಪ್ ಈಶ್ವರ್ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಖಾದಿ ಪ್ರಚಾರ ಹಾಗೂ ಹರಿಜನ ನಿಧಿ ಸಂಗ್ರಹಣೆಗಾಗಿ, ಕಸ್ತೂರಿಬಾ ರವರ ಜೊತೆ ದಕ್ಷಿಣ ಭಾರತ ಪ್ರವಾಸದಲ್ಲಿದ್ದಾಗ ಬಾಪೂಜಿಗೆ ಆರೋಗ್ಯ ಹದಗೆಟ್ಟಿತ್ತು (ಲಘು ವಾಯು ಹೊಡೆತ) ಕುಟುಂಬ ವೈದ್ಯರ ಸಲಹೆ ಹಾಗೂ ರಾಜಾಜೀ ಯವರ ಒತ್ತಾಯದ ಮೇರೆಗೆ ನಂದಿ ಗಿರಿಧಾಮದಲ್ಲಿ ವಿಶ್ರಾಂತಿ ಪಡೆಯಲು 20ನೇ ಎಪ್ರಿಲ್ 1927 ರಂದು ನಂದಿ ಗಿರಿಧಾಮಕ್ಕೆ ಆಗಮಿಸಿದರು.

ಮೈಸೂರು ಮಹಾರಾಜರು ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್‌ರ ಮುಖಾಂತರ ಬೆಟ್ಟದ ಮೇಲಿರುವ ಕನ್ನಿಂಗ್‌ಹ್ಯಾಮ್ ಭವನದಲ್ಲಿ (ಇಂದಿನ ಗಾಂಧಿ ನಿಲಯ) ಗಾಂಧೀಜಿ ದಂಪತಿಗಳ ವಾಸ್ತವ್ಯಕ್ಕೆ ಸಕಲ ಏರ್ಪಾಟು ಮಾಡಿಸಿದ್ದರು. ಗಿರಿಧಾಮದಲ್ಲಿ 45 ದಿನ ವಿಶ್ರಮಿಸಿ ಚೇತರಿಸಿಕೊಂಡ ನಂತರ ನಂದಿ ಗಿರಿಧಾಮದಿಂದ ತೆರಳಿದ್ದರು.

10 ಮೇ 1936 ರಂದು ಗಾಂಧೀಜಿಯವರಿಗೆ ತೀವ್ರ ರಕ್ತದೊತ್ತಡ ಹೆಚ್ಚಿ ವೈದ್ಯರು ವಿಶ್ರಾಂತಿಗೆ ಸಲಹೆ ನೀಡುತ್ತಾರೆ. ಈ ಹಿಂದೆ ನಂದಿ ಬೆಟ್ಟದಲ್ಲಿ 45 ದಿನ ವಿಶ್ರಾಂತಿ ಪಡೆದು ಹೋಗಿದ್ದನ್ನು ಸ್ಮರಿಸಿ ಮತ್ತೆ ಅಲ್ಲಿಗೆ ಹೋಗಲು ಅಭಿಲಾಷೆ ವ್ಯಕ್ತಪಡಿಸುತ್ತಾರೆ, 1936 ರ ಮೇ 11 ರಂದು ಬೆಂಗಳೂರಿಗೆ ಬಂದು ಅಲ್ಲಿಂದ ನಂದಿ ಗಿರಿಧಾಮಕ್ಕೆ ಕಾಲ್ನಡಿಗೆಯಲ್ಲಿ ತಲುಪಿದರು. ಅಂದಿನ ದಿನಗಳಲ್ಲಿ ನಂದಿಬೆಟ್ಟಕ್ಕೆ ರಸ್ತೆ ಸಂಪರ್ಕ ಇರಲಿಲ್ಲ, ಸರಿಸುಮಾರು 1775 ಮೆಟ್ಟಿಲುಗಳನ್ನು ಹತ್ತಿಯೇ ಗಿರಿಧಾಮ ಮುಟ್ಟಬೇಕಿತ್ತು, ಕುಮಾರಕೃಪದಿಂದ ಸುಲ್ತಾನ್‌ಪೇಟೆಯ ತನಕ ಕಾರಿನಲ್ಲಿ ಬಂದು ಅಲ್ಲಿಂದ ಡೋಲಿಯ ಮುಖಾಂತರ ಕರೆದೊಯ್ಯಲು ದಿವಾನರು ಸಕಲ ಸಿದ್ಧತೆ ಮಾಡಿದ್ದರು. ಸುಲ್ತಾನ್ ಪೇಟೆಗೆ ತಲುಪುವ ಮುನ್ನವೇ ತಮ್ಮ ಆಪ್ತ ಕಾರ್ಯದರ್ಶಿ ಮಹದೇವ ದೇಸಾಯಿಯವರೊಂದಿಗೆ ಕುಡುವತ್ತಿ ಎಂಬ ಹಳ್ಳಿಯಲ್ಲಿ ಇಳಿದು, ಅಲ್ಲಿಂದ ಕಾಲು ದಾರಿಯ ಮುಖಾಂತರ ಸುಡುಬಿಸಿಲಿನಲ್ಲಿ ಉರುಗೋಲಿನ ಸಹಾಯದಿಂದ ಸುಮಾರು 5 ಮೈಲು ದಾರಿಯನ್ನು ಯಾವುದೇ ತೊಂದರೆಯಿಲ್ಲದೆ ಎರಡು ಮುಕ್ಕಾಲು ಗಂಟೆಯಲ್ಲಿ ಬೆಟ್ಟ ಹತ್ತಿದರು.

ನಂದಿ ಗಿರಿಧಾಮದಲ್ಲಿ ಎರಡನೇ ಬಾರಿ 20 ದಿನ ವಿಶ್ರಾಂತಿ ಪಡೆದ ಗಾಂಧೀಜಿಯವರು ದಿನಾಂಕ 31ನೇ ಮೇ ಭಾನುವಾರ 1936 ರಂದು ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಇಳಿದು, ಅಲ್ಲಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು, ನಗರದ ಸಬ್ ಡಿವಿಜನಲ್ ಆಫೀಸರ್ ಇಸ್ಮಾಯಿಲ್ ಶರೀಫ್ ಹಾಗೂ ಹಲವಾರು ಪ್ರಮುಖರು ಗಾಂಧೀಜಿಯವರನ್ನು ಸ್ವಾಗತಿಸಿದರು. ನಂತರ ನಗರದ ಪ್ರೌಢ ಶಾಲೆಯ ಆವರಣದ ಮುಂದೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು ಹಾಗೂ ಚಿಕ್ಕಬಳ್ಳಾಪುರದ ಭೂಮಿಯಲ್ಲಿ ಬೆಳೆಯುವ ಆಲೂಗಡ್ಡೆ ಮತ್ತು ರೈತರ ಕುರಿತು ಮಾತನಾಡಿದರು. ಚಿಕ್ಕಬಳ್ಳಾಪುರದ ಜನರು ಬಾಪೂಜಿಯವರಿಗೆ ಹೂಮಾಲೆಗಳನ್ನು ಅರ್ಪಿಸಿ, ಹರಿಜನ ನಿಧಿಗಾಗಿ ಒಂದು ನೂರು ರೂಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ನಂತರ ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ, ಬಂಗಾರ್‌ಪೇಟೆ ಹಾಗೂ ಕೋಲಾರ ಚಿನ್ನದ ಗಣಿಗೆ ಭೇಟಿ ಕೊಟ್ಟ ವಿಷಯವನ್ನು ಸವಿಸ್ತಾರವಾಗಿ ತಿಳಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಗಾಂಧೀಜಿಯವರ ಹೆಜ್ಜೆಯ ಗುರುತುಗಳ ಬಗ್ಗೆ ನೆನೆದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ. ಕಾಸಿಂ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ತಹಶೀಲ್ದಾರ್ ಅನಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ್, ಗಾಂಧಿ ಭವನ ವಿನ್ಯಾಸದ ನೀಲನಕ್ಷೆ ಸಿದ್ದಪಡಿಸಿದ ಶಾರದ, ಯೋಜನಾ ಅಭಿಯಂತರ ನವೀನ್, ಹಿಂದೂ ಧರ್ಮದ ಶ್ಲೋಕಗಳನ್ನು ಪಠಿಸಿದ ನಳಿನಾಕ್ಷಿ ಹಾಗೂ ಅವರ ತಂಡ, ಮುಸ್ಲಿಂ ಧರ್ಮದ ಪ್ರತಿನಿಧಿ ಮನ್ಸೂರ್ ಖಾನ್, ಕ್ರೈಸ್ತ ಧರ್ಮದ ಪ್ರತಿನಿಧಿ ಘನಸ್ಯಾಮ್ ಸನ್, ಮುಂತಾದವರು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!