ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ವ್ಯಾಪಕ ಮತದಾನ ಜಾಗೃತಿ ಅಭಿಯಾನ.
ಶಿಡ್ಲಘಟ್ಟ: ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಂದು ನಗರದ ನಗರಸಭೆ ಕಾರ್ಯಾಲಯದಿಂದ ಹೊರಟು ಸಂತೆ ಬೀದಿ ಪ್ರದೇಶ, ಮಾರುಕಟ್ಟೆಯ ವರೆಗೆ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಮತದಾನದ ಅರಿವು ಮತ್ತು ಜಾಗೃತಿಯನ್ನು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಅವರು ಮತದಾನವು ಸಂವಿಧಾನ ಕಲ್ಪಿಸಿರುವ ನಮ್ಮ – ನಿಮ್ಮೆಲ್ಲರ ಹಕ್ಕು, ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕು. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ತಮ್ಮ ನೆರೆಹೊರೆಯ ಮನೆಯವರಿಗೂ ಸಹ ತಪ್ಪದೆ ಮತದಾನ ಮಾಡುವಂತೆ ತಿಳಿಸುವ ಕೆಲಸ ನಾಗರೀಕರು ಮಾಡಬೇಕು ಎಂದು ಮನವಿ ಮಾಡಿದರು. ಜೊತೆಗೆ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಪ್ರಜಾಪ್ರಭುತ್ವದ ಅಡಿಯಲ್ಲಿ ಮತದಾನ ಮಾಡುವಂತೆ ಅರಿವು ಮೂಡಿಸಿದರು.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿಮತದಾನದ ಅರಿವು ಜಾಗೃತಿ : ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರು, ರೈತರು ಮತ್ತು ರೀಲರ್ಸ್ ಗಳಿಗೆ ತಾಲ್ಲೂಕು ಸ್ವೀಪ್ ಸಮಿತಿ ಮತದಾನ ಕುರಿತು ಅರಿವು ಮತ್ತು ಜಾಗೃತಿಯನ್ನು ಮೂಡಿಸಲಾಯಿತು.
ನಗರಕ್ಕೆ ರೇಷ್ಮೆ ಕೃಷಿ ಉತ್ಪಾದನೆ ಎಷ್ಟು ಮುಖ್ಯವೋ, ಪ್ರಜಾಪ್ರಭುತ್ವಕ್ಕೆ ಹಾಗೂ ನಮ್ಮ ದೇಶಕ್ಕೆ ನಾವು ಮತದಾನ ಮಾಡುವುದು ಕೂಡ ಅಷ್ಟೇ ಮುಖ್ಯ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂಬುವುದೇ ನಮ್ಮ ಆಶಯ ಎಂದರು. ಈ ನಿಟ್ಟಿನಲ್ಲಿ ಚುನಾವಣಾ ದಿನಾಂಕ (ಏಪ್ರಿಲ್ 26) ರಂದು ತಮ್ಮ ಕಾರ್ಯಪ್ರವೃತ್ತಿಯಲ್ಲಿ ಭಾಗವಹಿಸುವ ಜೊತೆಗೆ ತಪ್ಪದೆ ಮತದಾನವನ್ನು ಮಾಡಬೇಕು ಎಂದು ರೈತರಿಗೆ ಮತ್ತು ರೀಲರ್ಸ್ ಗಳಿಗೆ ತಿಳಿಸಿದರು. ಮತದಾನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು
ಈ ಸಂದರ್ಭದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕರಾದ ನಗರಸಭೆಯ ಪೌರಾಯುಕ್ತ ರಘುನಾಥ್, ನಗರಸಭೆಯ ಸಿಬ್ಬಂದಿ, ಪೌರಕಾರ್ಮಿಕರು, ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.